ನಟ, ನಿರ್ದೇಶಕ ರಿಷಭ್ ಶೆಟ್ಟಿ ಈಗ ಬಿಝಿ ಹೀರೋ! ಹೀಗೆಂದರೆ ನೀವು ಆಶ್ಚರ್ಯಪಡುವ ಅಗತ್ಯವಿಲ್ಲ. ಅವರ ನಟನೆಯ “ಬೆಲ್ ಬಾಟಮ್’ ಚಿತ್ರ ಹಿಟ್ ಆದ ಬಳಿಕ ಅವರನ್ನು ಹುಡುಕಿಕೊಂಡು ಬರುವ ಕಥೆಗಳ ಸಂಖ್ಯೆ ಹೆಚ್ಚಾಗಿದೆ. ರಿಷಭ್‌ರನ್ನು ಹೀರೋ ಮಾಡಿ ಸಿನಿಮಾ ಮಾಡಬೇಕೆಂದು ಕನಸು ಕಾಣುವ ಮಂದಿಯೂ ಹುಟ್ಟಿಕೊಂಡಿದ್ದಾರೆ. ಹಾಗಾದರೆ ರಿಷಭ್ ಕೈಯಲ್ಲಿ ಎಷ್ಟು ಸಿನಿಮಾಗಳಿವೆ ಎಂದು ನೀವು ಕೇಳಿದರೆ ಅದಕ್ಕೆ ಉತ್ತರ ನಾಲ್ಕು ಸಿನಿಮಾ.
ಹೌದು, ಈಗಾಗಲೇ ರಿಷಭ್ ಕಥೆ ಕೇಳಿ ಓಕೆ ಮಾಡಿರುವ ಸಂಖ್ಯೆ 4. ಹಾಗಾದರೆ ಯಾವುದು ಎಂದು ನೀವು ಕೇಳಬಹುದು. ಈ ಬಗ್ಗೆ ಈಗಲೇ ರಿಷಭ್ ಹೇಳಲು ರೆಡಿಯಿಲ್ಲ. ಸಿನಿಮಾಗಳು ಸೆಟ್ಟೇರಿದಂತೆ ಗೊತ್ತಾಗುತ್ತದೆ ಎನ್ನುವ ರಿಷಭ್ ಒಂದಕ್ಕಿಂತ ಒಂದು ಸಿನಿಮಾಗಳು ಭಿನ್ನವಾಗಿವೆ ಎನ್ನುತ್ತಾರೆ. “ಅನೇಕರು ನಾನು ತುಂಬಾ ಸೀರಿಯಸ್ ಮನುಷ್ಯ ಎಂದುಕೊಂಡಿದ್ದರು. ಆದರೆ, “ಬೆಲ್ ಬಾಟಮ್’ ಸಿನಿಮಾ ನೋಡಿದವರಿಗೆ ಇವರು ಕಾಮಿಡಿ ಕೂಡಾ ಚೆನ್ನಾಗಿ ಮಾಡುತ್ತಾರೆ.
ಸೀರಿಯಸ್-ಕಾಮಿಡಿ ಎರಡಕ್ಕೂ ವರ್ಕೌಟ್ ಆಗುತ್ತಾರೆಂದು ಅನೇಕರು ಕಥೆ ತರುತ್ತಾರೆ. ಅದರಲ್ಲಿ ಇಷ್ಟವಾದ 4 ಕಥೆಗಳನ್ನು ಒಪ್ಪಿದ್ದೇನೆ’ ಎನ್ನುತ್ತಾರೆ. ಹಾಗೆ ನೋಡಿದರೆ ರಿಷಭ್ ಆರು ಕಥೆಗಳನ್ನು ಒಪ್ಪಿಕೊಂಡಿದ್ದರಂತೆ. ಆದರೆ, ಕಾರಣಾಂತರಗಳಿಂದ ಬಿಟ್ಟರಂತೆ. “ನನಗೆ ಸುದೀಪ್ ಅವರೊಂದು ಪಾಠ ಹೇಳಿಕೊಟ್ಟಿದ್ದಾರೆ, ಅದೇನೆಂದರೆ ಯಾರಿಂದಲೂ ಮೊದಲೇ ಅಡ್ವಾನ್ಸ್ ತಗೋಬೇಡ. ಒಂದು ವೇಳೆ ಅಡ್ವಾನ್ಸ್ ತಗೊಂಡರೆ ಲಾಕ್ ಆದಂತೆ ಎಂದು. ಆ ಪಾಠವನ್ನು ಪಾಲಿಸುತ್ತಿದ್ದೇನೆ.
ಹಾಗಾಗಿ, ಕಾಸು ತಗೊಂಡು ಮಾಡಿಲ್ಲ ಎಂಬ ಅಪವಾದ ಬರಲ್ಲ’ ಎನ್ನುವುದು ರಿಷಭ್ ಮಾತು. ರಿಷಭ್ ಮೊದಲ ಆದ್ಯತೆ ಯಾವುದು ಎಂದರೆ ನಿರ್ದೇಶನ ಎಂಬ ಉತ್ತರ ಬರುತ್ತದೆ. “ನಾನು ಚಿತ್ರರಂಗಕ್ಕೆ ಹೀರೋ ಆಗಬೇಕೆಂದು ಬಂದವನು. ಆದರೆ, ನನ್ನೊಳಗೆ ನಿರ್ದೇಶಕ ಸೀರಿಯಸ್ ಆಗಿದ್ದಾನೆ. ಮೊದಲ ಆದ್ಯತೆ ನಿರ್ದೇಶನಕ್ಕೆ’ ಎನ್ನುತ್ತಾರೆ. ಈ ನಡುವೆಯೇ ರಿಷಭ್ “ರುದ್ರ ಪ್ರಯಾಗ’ ಎಂಬ ಸಿನಿಮಾವನ್ನು ನಿರ್ದೇಶನ ಮಾಡಲು ಹೊರಟಿದ್ದಾರೆ. ಇದು ಅವರು ಎಸೆಸ್ಸೆಲ್ಸಿಯಲ್ಲಿದ್ದಾಗ ಬರೆದ ಕಥೆಯಂತೆ. ಅದನ್ನು ಇವತ್ತಿನ ಕಾಲಘಟ್ಟಕ್ಕೆ ಆಪ್‌ಡೇಟ್ ಮಾಡಿದ್ದಾರಂತೆ.