Advertisement

Health: 4 ಕಂದಾಯ ವಿಭಾಗಕ್ಕೆ ಮೊಬೈಲ್‌ ಆಕ್ಸಿಜನ್‌ ಕಂಟೇನರ್‌

09:35 PM Dec 29, 2023 | Pranav MS |

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ರೂಪಾಂತರಿ ಜೆಎನ್‌-1 ವೈರಸ್‌ನ 34 ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ ಆರೋಗ್ಯ ಇಲಾಖೆ ಸರ್ಕಾರಿ ಆಸ್ಪತ್ರೆಗಳ ವ್ಯವಸ್ಥೆಯನ್ನು ಸನ್ನದ್ಧಗೊಳಿಸಲು ಮುಂದಾಗಿದೆ. ಈ ನಡುವೆ ತುರ್ತು ಪರಿಸ್ಥಿತಿಯಲ್ಲಿ ಎದುರಾಗುವ ಆಮ್ಲಜನಕದ ಕೊರತೆ ನೀಗಿಸಿಕೊಳ್ಳಲು “ಮೊಬೈಲ್‌ ಆಕ್ಸಿಜನ್‌ ಕಂಟೇನರ್‌’ ಸಿದ್ಧಪಡಿಸುವ ಕೆಲಸ ಆರಂಭಿಸಿದೆ.
ಕೊರೊನಾ ಒಂದನೇ ಹಾಗೂ ಎರಡನೇ ಅಲೆಯಲ್ಲಿ ಕೋವಿಡ್‌ ಸೋಂಕಿತರು ಉಸಿರಾಟ ಸಮಸ್ಯೆಯಿಂದ ಬಳಲುವ ಹಾಗೂ ಐಸಿಯುಗೆ ದಾಖಲಾಗುವ ರೋಗಿಗಳ ಪ್ರಮಾಣ ಅಧಿಕವಿತ್ತು. ಇದರಿಂದಾಗಿ ಹೆಚ್ಚಿನ ರೋಗಿಗಳಿಗೆ ವೆಂಟಿಲೇಟರ್‌ನ ಅಗತ್ಯವಿತ್ತು. ಈ ವೇಳೆ ಸರ್ಕಾರಿ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಆಮ್ಲಜನಕದ ಅಭಾವ ಕಾಡಿತು. ಅಂತಹ ಆರೋಗ್ಯ ತುರ್ತು ಪರಿಸ್ಥಿತಿ ಜೆಎನ್‌-1ನಲ್ಲಿ ಎದುರಾಗಬಹುದು ಎನ್ನುವ ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಇಲಾಖೆ ಮೊಬೈಲ್‌ ಆಕ್ಸಿಜನ್‌ ಕಂಟೇನರ್‌ಗಳತ್ತ ಮೊರೆ ಹೋಗಿದೆ.

Advertisement

ಮೊಬೈಲ್‌ ಆಕ್ಸಿಜನ್‌ ಕಂಟೇನರ್‌ಗಳು ಸುಲಭವಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಂಚರಿಸಬಹುದಾದ ಸಂಚಾರಿ ಆಮ್ಲಜನಕ ಘಟಕವಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಕೊರತೆ ಎದುರಾದರೆ ಸ್ಥಳಕ್ಕೆ ತೆರಳಿ ಆಕ್ಸಿಜನ್‌ ರಿಫೀಲ್‌ಗ‌ಳನ್ನು ಭರ್ತಿ ಮಾಡುತ್ತದೆ. ಅಗತ್ಯವಿದ್ದರೆ ನೇರವಾಗಿ ಆಸ್ಪತ್ರೆಯ ಆಕ್ಸಿಜನ್‌ ಪೈಪ್‌ಗ್ಳೊಂದಿಗೆ ಸಂಪರ್ಕ ಸಾಧಿಸಿ, ಅಗತ್ಯವಿರುವಷ್ಟು ಪ್ರಮಾಣದ ಆಮ್ಲಜನಕವನ್ನು ಪೂರೈಸಲಿವೆ. ಇದು ಪರಿಸರದಲ್ಲಿನ ಆಮ್ಲಜನಕವನ್ನು ಹೀರಿಕೊಂಡು ಶುದ್ಧವಾದ ಆಕ್ಸಿಜನ್‌ನ್ನು ಕೇವಲ 5 ನಿಮಿಷದಲ್ಲಿ ಸಿಲಿಂಡರ್‌ಗಳನ್ನು ಭರ್ತಿ ಮಾಡಲಿದೆ.

4 ಮೊಬೈಲ್‌ ಕಂಟೇನರ್‌: ರಾಜ್ಯದ ನಾಲ್ಕು ಕಂದಾಯ ವಿಭಾಗಗಳಾದ‌ ಬೆಂಗಳೂರು, ಬೆಳಗಾವಿ, ಮಂಗಳೂರು, ಕಲಬುರಗಿಗಳಲ್ಲಿ ಮೊಬೈಲ್‌ ಆಕ್ಸಿಜನ್‌ ಕಂಟೇನರ್‌ ಕಾರ್ಯಾಚರಿಸಲಿವೆ.

ಸುಮಾರು 2 ಕೋಟಿ ರೂ. ಮೌಲ್ಯದ ಆಕ್ಸಿಜನ್‌ ಜನರೇಟರ್‌ ಯಂತ್ರ ಇದಾಗಿದೆ. ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಎದುರಾದರೆ ಮೊಬೈಲ್‌ ಆಕ್ಸಿಜನ್‌ ಕಂಟೇನರ್‌ಗಳು ರೋಗಿಗಳ ಮನೆಗೆ ತೆರಳಿ, ರೋಗಿಗೆ ಅಗತ್ಯವಿರುವ ಆಕ್ಸಿಜನ್‌ ಸಿಲಿಂಡರ್‌ಗಳನ್ನು ಸ್ಥಳದಲ್ಲಿ ಭರ್ತಿ ಮಾಡಲಿದೆ. ಇದರಿಂದ ಆಮ್ಲಜನಕದ ಪರದಾಟವನ್ನು ತಪ್ಪಿಸಬಹುದಾಗಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೊರೊನಾ ಮೊದಲ ಹಾಗೂ ಎರಡನೇ ಅಲೆಯಲ್ಲಿ ರಾಜ್ಯಾದ್ಯಂತ 180 ಪ್ರಷರ್‌ ಸ್ವಿಂಗ್‌ ಹಾಗೂ 34 ಲಿಕ್ವಿಡ್‌ ಆಕ್ಸಿಜನ್‌ ಘಟಕಗಳನ್ನು ಸ್ಥಾಪಿಸಿದ್ದು, ಪ್ರಸ್ತುತ ಎಲ್ಲವೂ ಕಾರ್ಯಾಚರಣೆಯಲ್ಲಿವೆ. ಕೆಲ ಆಮ್ಲಜನಕ ಘಟಕಗಳ ಪರವಾನಗಿ ಪಡೆಯುವ ಹಂತದಲ್ಲಿದೆ. ಒಮಿಕ್ರಾನ್‌ ಪ್ರಾರಂಭಿಕ ಅವಧಿಯಲ್ಲಿ ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ತುಂಬಾ ಕಡಿಮೆ ಇತ್ತು. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಐಸಿಯು ದಾಖಲಾತಿ ಪ್ರಮಾಣ 24 ಗಂಟೆಯಲ್ಲಿ ದುಪ್ಪಟ್ಟು ಏರಿಕೆ ಕಾಣುತ್ತಿರುವುದು ಆತಂಕ ಮೂಡಿಸಿದೆ.

ರಾಜ್ಯದಲ್ಲಿ ಕೊರೊನಾ ರೂಪಾಂತರಿ ಜೆಎನ್‌-1 ವರದಿಯಾಗಿದೆ. ಇದು ಅಪಾಯವಲ್ಲದಿದ್ದರೂ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ತುರ್ತು ಪರಿಸ್ಥಿತಿಯಲ್ಲಿ ಆಮ್ಲಜನಕದ ಕೊರತೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಆಕ್ಸಿಜನ್‌ ಮೊಬೈಲ್‌ ಕಂಟೇನರ್‌ ಕಾರ್ಯಾಚರಣೆ ಮಾಡಲಿದೆ.
-ದಿನೇಶ್‌ ಗುಂಡೂರಾವ್‌, ಆರೋಗ್ಯ ಸಚಿವ

Advertisement

ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next