ಬಿಜಾಪುರ್ : ಛತ್ತೀಸ್‌ಗಢದಲ್ಲಿ ಶನಿವಾರ ಭದ್ರತಾ ಪಡೆಗಳು ಇಬ್ಬರು ಮಹಿಳೆಯರು ಸೇರಿ ನಾಲ್ವರು ಮಾವೋವಾದಿಗಳನ್ನು ಎನ್‌ಕೌಂಟರ್ ಮಾಡಿದ್ದಾರೆ.
ಭದ್ರತಾ ಪಡೆಗಳ ಜಂಟಿ ತಂಡಗಳು ಮಾವೋವಾದಿ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಮಿರ್ತೂರ್ ಪೊಲೀಸ್ ಠಾಣೆ ವ್ಯಾಪ್ತಿಯ ಪೊಮ್ರಾ ಗ್ರಾಮದ ಬಳಿ ಕಾಡಿನಲ್ಲಿ ಬೆಳಗ್ಗೆ 7.30 ರ ಸುಮಾರಿಗೆ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸ್ ಮಹಾನಿರೀಕ್ಷಕ (ಬಸ್ತಾರ್ ರೇಂಜ್) ಸುಂದರರಾಜ್ ಪಿ. ಅವರು ಪಿಟಿಐಗೆ ತಿಳಿಸಿದ್ದಾರೆ.
ಮಾವೋವಾದಿಗಳ ವಿಭಾಗೀಯ ಸಮಿತಿ ಸದಸ್ಯರಾದ ಮೋಹನ್ ಕಡ್ತಿ ಮತ್ತು ಸುಮಿತ್ರಾ ಅವರ ಉಪಸ್ಥಿತಿಯ ಮಾಹಿತಿಯನ್ನು ಆಧರಿಸಿ ಜಿಲ್ಲಾ ಮೀಸಲು ಗಾರ್ಡ್ (ಡಿಆರ್‌ಜಿ), ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬಂದಿಗಳನ್ನು ಒಳಗೊಂಡು ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಡಿಆರ್‌ಜಿಯ ಗಸ್ತು ತಂಡವು ಪೊಮ್ರಾ ಅರಣ್ಯದಲ್ಲಿದ್ದಾಗ, ಗುಂಡಿನ ಚಕಮಕಿ ನಡೆಯಿತು ಎಂದು ಅವರು ಹೇಳಿದರು.
“ಗುಂಡಿನ ಚಕಮಕಿ ನಿಂತ ಬಳಿಕ ಸ್ಥಳದಿಂದ 303 ರೈಫಲ್ ಮತ್ತು 315 ಬೋರ್ ರೈಫಲ್ ಸೇರಿದಂತೆ ಮೂರು ಶಸ್ತ್ರಾಸ್ತ್ರಗಳ ಜೊತೆಗೆ ನಾಲ್ವರು ಮಾವೋವಾದಿಗಳ ದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಐಜಿ ತಿಳಿಸಿದ್ದಾರೆ. ಮಾವೋವಾದಿಗಳ ಗುರುತು ಇನ್ನೂ ಪತ್ತೆಯಾಗಿಲ್ಲ, ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಹೇಳಿದರು.