ದಿಸ್‌ಪುರ: ಕಳೆದ ಕೆಲವು ದಿನಗಳಿಂದ ಎಡೆಬಿಡದೇ ಸುರಿಯುತ್ತಿರುವ ಮಳೆಗೆ ಅಸ್ಸಾಂ ತತ್ತರಿಸಿದೆ. ಸುಮಾರು 17 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, 4.23 ಲಕ್ಷ ಜನರಿಗೆ ತೊಂದರೆಯಾಗಿದೆ. ಹಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಮಳೆಯಿಂದಾಗಿ ಲುಂಬ್ಡಿಂಗ್-ಬದರ್‌ಪುರ ರೈಲುಗಳನ್ನು ಸ್ಥಗಿತಗೊಳಿಸಲಾಗಿದೆ. ಮಳೆಯಿಂದಾಗಿ ಮೂವರು ಸಾವನ್ನಪ್ಪಿದ್ದಾರೆ. ಬುಧವಾರ ದವರೆಗೆ ಸಾಧಾರಣ ಗತಿಯಲ್ಲಿದ್ದ ಮಳೆ ಗುರುವಾರ ದಿಂದ ತೀವ್ರಗೊಂಡಿದೆ.
ಬರ್ಪೇಟಾ ಜಿಲ್ಲೆ ಯೊಂದರಲ್ಲೇ 85 ಸಾವಿರ ಜನರು ಪ್ರವಾಹ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇಡೀ ರಾಜ್ಯದಲ್ಲೇ ಬರ್ಪೆಟಾ ಜಿಲ್ಲೆ ವರುಣನ ರುದ್ರನರ್ತನವನ್ನು ಕಂಡಿದೆ. ಬಾಧಿತ ಜಿಲ್ಲೆಗಳಲ್ಲಿ ಸಾವಿರಾರು ನಿರಾಶ್ರಿತ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಜನರ ಜೊತೆಗೆ ಜಾನು ವಾರುಗಳನ್ನೂ ನಿರಾಶ್ರಿತ ಶಿಬಿರ ಗಳಲ್ಲಿ ರಕ್ಷಿಸಲಾಗುತ್ತಿದೆ. ರಾಜ್ಯ ದಲ್ಲಿ ಹರಿಯುವ ಪ್ರಮುಖ ನದಿ ಬ್ರಹ್ಮಪುತ್ರಾ, ಧನಸಿರಿ, ಜಿಯಾ ಭರಾಲಿ, ಪುಥಿಮರಿ ಸೇರಿದಂತೆ ಹಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ಸಿಎಂ ಅವಲೋಕನ: ಪರಿಸ್ಥಿತಿಯನ್ನು ಸಿಎಂ ಸರ್ವಾನಂದ ಸೋನೋವಾಲ್ ಅವಲೋಕನ ನಡೆಸುತ್ತಿದ್ದು, ಬಾಧಿತ ಜಿಲ್ಲೆಗಳ ಅಧಿಕಾರಿಗಳ ಜೊತೆ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತು ಕತೆ ನಡೆಸಿದ್ದಾರೆ. ನಿರಾಶ್ರಿತ ಶಿಬಿರಗಳ ಸ್ಥಾಪನೆ, ನಿರಾಶ್ರಿತರಿಗೆ ಆಹಾರ ಹಾಗೂ ಮೂಲಸೌಕರ್ಯ ಒದಗಿಸುವ ಕುರಿತು ಸಿಎಂ ಮೇಲ್ವಿಚಾರಣೆ ನಡೆಸಿದ್ದಾರೆ. ಇದರೊಂದಿಗೆ ಎಲ್ಲ ಜಿಲ್ಲೆ ಅಧಿಕಾರಿಗಳೂ ಪ್ರವಾಹ ಪರಿಸ್ಥಿತಿ ಎದುರಿಸಲು ಸಿದ್ಧವಿರಬೇಕು ಎಂದು ಸೂಚಿಸಿದ್ದಾರೆ. ಇನ್ನೊಂದೆಡೆ ಆರೋಗ್ಯ ಅಧಿಕಾರಿಗಳಿಗೂ ಸೂಚನೆ ನೀಡಿರುವ ಸಿಎಂ, ಮಳೆ ಪ್ರಮಾಣ ಇಳಿಯುತ್ತಿದ್ದಂತೆ ಹರಡ ಬಹುದಾದ ರೋಗ ರುಜಿನಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.
ಕಾಜಿರಂಗಾ ಮುಳುಗಡೆ: ಅಸ್ಸಾಂನಲ್ಲಿರುವ ಜನಪ್ರಿಯ ಕಾಜಿರಂಗಾ ರಾಷ್ಟ್ರೀಯ ಉದ್ಯಾನವನಕ್ಕೂ ನೀರು ನುಗ್ಗಿದೆ. ಶೇ. 40ರಷ್ಟು ಭಾಗ ನೀರಿನಲ್ಲಿ ಮುಳುಗಿವೆ. ಎತ್ತರದ ಸ್ಥಳದಲ್ಲಿ ಪ್ರಾಣಿಗಳು ಆಸರೆ ಪಡೆದಿವೆ. ಪಾರ್ಕ್‌ನ ಗಡಿಯಲ್ಲಿರುವ ರಸ್ತೆಗಳಲ್ಲಿ ವಾಹನಗಳ ವೇಗ ಮಿತಿಗೆ ಅಧಿಕಾರಿಗಳು ಬ್ರೇಕ್ ಹಾಕಿದ್ದು, ಆಸರೆಗಾಗಿ ರಸ್ತೆ ದಾಟಿ ಹೊರಗೆ ಬರುವ ಪ್ರಾಣಿಗಳು ವಾಹನಕ್ಕೆ ಸಿಲುಕಿಕೊಳ್ಳದಿರುವಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ.
ಮಳೆ ಮುಂದುವರಿಕೆ: ಜುಲೈ 14 ರವರೆಗೂ ಮಳೆ ಭಾರಿ ಪ್ರಮಾಣದಲ್ಲಿ ಸುರಿಯಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಪ್ರಕಾರ ಅಸ್ಸಾಂ, ಮೇಘಾಲಯ, ಅರುಣಾಚಲ ಪ್ರದೇಶದಲ್ಲಿ ಮಳೆ ತೀಕ್ಷ್ಣವಾಗಿರಲಿದೆ.
ಉತ್ತರ ಪ್ರದೇಶದಲ್ಲಿ 14 ಜನ ಸಾವು: ಉತ್ತರ ಪ್ರದೇಶದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಕಳೆದ 9 ದಿನಗಳಲ್ಲಿ 14 ಜನರು ಸಾವನ್ನಪ್ಪಿದ್ದಾರೆ. ಉತ್ತರಪ್ರದೇಶದ ಪೂರ್ವಭಾಗಗಳಲ್ಲಿ ಭಾರಿ ಮಳೆಯಾಗಿದ್ದರೆ, ಇತರೆಡೆ ಮಧ್ಯಮ ಪ್ರಮಾಣದಲ್ಲಿ ಮಳೆಯಾಗಿದೆ. ಮಿಂಚು, ಗೋಡೆ ಕುಸಿತ ಹಾಗೂ ಇತರ ಪ್ರಕರಣಗಳಲ್ಲಿ ಸಾವು ಸಂಭವಿಸಿದೆ. ಹಲವು ನದಿಗಳ ನೀರಿನ ಪ್ರಮಾಣ ಏರಿಕೆಯಾಗುತ್ತಿದ್ದರೂ, ಪರಸ್ಥಿತಿ ನಿಯಂತ್ರಣದಲ್ಲಿದೆ ಎಂದು ಕೇಂದ್ರೀಯ ಜಲ ಆಯೋಗ ಹೇಳಿದೆ.