Advertisement

ಕರಾವಳಿಯ 4 ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣ; ಮಹಿಳಾ ವಿಶ್ರಾಂತಿ ಕೊಠಡಿ

07:48 PM Oct 11, 2021 | Team Udayavani |

ಮಹಾನಗರ: ರಾಜ್ಯದ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣಗಳಲ್ಲಿ ಮಹಿಳೆಯರ ಸುರಕ್ಷೆ ನಿಟ್ಟಿನಲ್ಲಿ ಕುಳಿತುಕೊಳ್ಳಲು ಪ್ರತ್ಯೇಕ ವ್ಯವಸ್ಥೆ ನೀಡುವ ಉದ್ದೇಶದಿಂದ ರಾಜ್ಯದ 67 ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣಗಳಲ್ಲಿ ಮಹಿಳಾ ವಿಶ್ರಾಂತಿ ಕೊಠಡಿ ನಿರ್ಮಾಣಕ್ಕೆ ಕೆಎಸ್ಸಾರ್ಟಿಸಿ ಮುಂದಾಗಿದೆ. ಈ ಪೈಕಿ ಕರಾವಳಿಯ ನಾಲ್ಕು ಬಸ್‌ ನಿಲ್ದಾಣಗಳಲ್ಲಿ ಸದ್ಯದಲ್ಲಿಯೇ ನಿರ್ಮಾಣವಾಗಲಿದೆ.

Advertisement

ರಾಜ್ಯದಲ್ಲಿ ಕೆಎಸ್ಸಾರ್ಟಿಸಿಯ ಒಟ್ಟು 166 ಬಸ್‌ ನಿಲ್ದಾಣಗಳಿದ್ದು, ಇದರಲ್ಲಿ 99 ನಿಲ್ದಾಣಗಳಲ್ಲಿ ಈಗಾಗಲೇ ಮಹಿಳಾ ವಿಶ್ರಾಂತಿ ಕೊಠಡಿ ಇದ್ದು, ಇನ್ನುಳಿದ ನಿಲ್ದಾಣಗಳಲ್ಲಿ ಕೊಠಡಿ ನಿರ್ಮಾಣಕ್ಕೆ ಬೇಡಿಕೆ ಇತ್ತು. ಈ ಕುರಿತಂತೆ ಕೆಎಸ್ಸಾರ್ಟಿಸಿ ಈಗಾಗಲೇ ಪರಿಶೀಲನೆ ನಡೆಸಿದ್ದು, ಹಂತ ಹಂತವಾಗಿ ಮಹಿಳಾ ವಿಶ್ರಾಂತಿ ಕೊಠಡಿ ನಿರ್ಮಾಣ ನಡೆಯಲಿದೆ. ಕೋವಿಡ್‌ನಿಂದಾಗಿ ನಿಗಮದ ಆದಾಯಕ್ಕೆ ಪೆಟ್ಟು ಬಿದ್ದಿದ್ದು, ಈ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆಗೆ ಹಿನ್ನಡೆ ಉಂಟಾಗಿತ್ತು.

ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಲ್ಲಿ ತಾಯಂದಿರು ಮಗುವಿಗೆ ಹಾಲುಣಿಸಲು ಕೊಠಡಿಯ ಕೊರತೆ ಇತ್ತು. ಇದೀಗ ನಿರ್ಮಾಣವಾಗುವ ಮಹಿಳಾ ವಿಶ್ರಾಂತಿ ಕೊಠಡಿಯಲ್ಲಿ ಇದಕ್ಕೆ ಪ್ರತ್ಯೇಕ ಜಾಗ ಇರಲಿದೆ. ಮಹಿಳಾ ಕೊಠಡಿಯಲ್ಲಿ ಸುಮಾರು 15 ಮಂದಿ ಕುಳಿತುಕೊಳ್ಳಲು ವ್ಯವಸ್ಥೆ ಇರಲಿದೆ. ಮಗುವಿಗೆ ಎದೆ ಹಾಲು ಉಣಿಸಲು ಉಪಯೋಗಿಸಬಹುದಾಗಿದೆ. ಈ ಕೊಠಡಿಯ ಒಳಗೆ ಶೌಚಾಲಯ ವ್ಯವಸ್ಥೆಯೂ ಇರಲಿದೆ.

ಇದನ್ನೂ ಓದಿ:ಪ್ರಿಯಾಂಕಾ ಹಿಂದೂ ಆಗಿದ್ದು ಯಾವಾಗ?…ಆಕೆ ಊಸರವಳ್ಳಿ: ತೆಲಂಗಾಣ ಬಿಜೆಪಿ ಮುಖಂಡ

ಕರಾವಳಿಯಲ್ಲಿ ಮಹಿಳಾ ವಿಶ್ರಾಂತಿ ಕೊಠಡಿ
ರಾಜ್ಯ ಕರಾವಳಿಯಲ್ಲಿ ಮಂಗಳೂರು ಮತ್ತು ಪುತ್ತೂರು ಕೆಎಸ್ಸಾರ್ಟಿಸಿ ವಿಭಾಗಗಳಿಗೆ ಮಂಗಳೂರು-3 ವಿಭಾಗದಲ್ಲಿ ಮಂಗಳೂರು, ಉಡುಪಿ ಮತ್ತು ಕುಂದಾಪುರ ಡಿಪೋಗಳಿವೆ. ಮಂಗಳೂರು ಮತ್ತು ಕುಂದಾಪುರ ಬಸ್‌ ನಿಲ್ದಾಣದಲ್ಲಿ ಮಹಿಳಾ ವಿಶ್ರಾಂತಿ ಕೊಠಡಿಯನ್ನು ಈಗಾಗಲೇ ನಿರ್ಮಾಣ ಮಾಡಲಾಗಿದೆ. ಆದರೆ ಉಡುಪಿಯಲ್ಲಿ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣ ನೂತನವಾಗಿ ನಿರ್ಮಾಣವಾಗುತ್ತಿದ್ದು, ಅಲ್ಲಿ ಮಹಿಳಾ ವಿಶ್ರಾಂತಿ ಕೊಠಡಿ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಇನ್ನು, ಪುತ್ತೂರು ವಿಭಾಗದ ಒಟ್ಟು ಎಂಟು ಬಸ್‌ ನಿಲ್ದಾಣಗಳಲ್ಲಿ ಮಹಿಳಾ ವಿಶ್ರಾಂತಿ ಕೊಠಡಿ ಇದ್ದು, ನೆಲ್ಯಾಡಿ, ಉಜಿರೆ, ಹೆಬ್ಟಾಲೆ, ಸುಬ್ರಹ್ಮಣ್ಯ ಬಸ್‌ ನಿಲ್ದಾಣದಲ್ಲಿ ಮುಂದಿನ ದಿನಗಳಲ್ಲಿ ಮಹಿಳಾ ವಿಶ್ರಾಂತಿ ಕೊಠಡಿ ನಿರ್ಮಾಣಕ್ಕೆ ಕೆಎಸ್ಸಾರ್ಟಿಸಿ ಮುಂದಾಗಿದೆ.

Advertisement

ಹಂತ ಹಂತವಾಗಿ ನಿರ್ಮಾಣ
ನಿಗಮ ವ್ಯಾಪ್ತಿಯಲ್ಲಿ ಒಟ್ಟು 166 ಬಸ್‌ ನಿಲ್ದಾಣಗಳಿದ್ದು, ಅವುಗಳಲ್ಲಿ 99 ಬಸ್‌ ನಿಲ್ದಾಣಗಳಲ್ಲಿ ಮಹಿಳಾ ವಿಶ್ರಾಂತಿ ಕೊಠಡಿ ನಿರ್ಮಿಸಲಾಗಿದೆ. ಬಾಕಿ ಉಳಿದಿರುವ 67 ಬಸ್‌ ನಿಲ್ದಾಣಗಳಲ್ಲಿ ಮಹಿಳೆಯರ ವಿಶ್ರಾಂತಿ ಕೊಠಡಿಗಳನ್ನು ಆವಶ್ಯಕತೆಗೆ ಅನುಗುಣವಾಗಿ ನಿಗಮದ ಹಂತ ಹಂತವಾಗಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು.
-ಶ್ರೀರಾಮುಲು,ಸಾರಿಗೆ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next