ಇಸ್ಲಾಮಾಬಾದ್:ಚೀನಾ ರಾಯಭಾರಿ ತಂಗಿದ್ದ ಪ್ರತಿಷ್ಠಿತ ಹೋಟೆಲ್ ವೊಂದರಲ್ಲಿ ಬಾಂಬ್ ಸ್ಫೋಟಗೊಂಡ ಪರಿಣಾಮ ನಾಲ್ವರು ಸಾವನ್ನಪ್ಪಿರುವ ಘಟನೆ ನೈರುತ್ಯ ಪಾಕಿಸ್ತಾನದಲ್ಲಿ ಬುಧವಾರ(ಏಪ್ರಿಲ್ 21) ತಡರಾತ್ರಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನದ ಕ್ವೆಟ್ಟಾದಲ್ಲಿರುವ ಐಶಾರಾಮಿ ಸೆರೆನಾ ಹೋಟೆಲ್ ನ ಕಾರು ಪಾರ್ಕಿಂಗ್ ಸ್ಥಳದಲ್ಲಿ ಈ ಬಾಂಬ್ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಕನಿಷ್ಠ ನಾಲ್ಕು ಮಂದಿ ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿರುವುದಾಗಿ ಪಾಕಿಸ್ತಾನದ ಆಂತರಿಕ ಸಚಿವ ಶೇಕ್ ರಶೀದ್ ಅಹ್ಮದ್ ಎಎಫ್ ಪಿಗೆ ತಿಳಿಸಿದ್ದಾರೆ.
ಇದೊಂದು ಭಯೋತ್ಪಾದಕ ಕೃತ್ಯ ಎಂದು ರಶೀದ್ ತಿಳಿಸಿದ್ದು, ಈ ಐಶಾರಾಮಿ ಹೋಟೆಲ್ ನಲ್ಲಿ ಚೀನಾದ ನಾಲ್ಕು ಮಂದಿ ರಾಯಭಾರಿ ನಿಯೋಗ ವಾಸ್ತವ್ಯ ಹೂಡಿದ್ದರು ಎಂದು ವರದಿ ವಿವರಿಸಿದೆ. ಹೋಟೆಲ್ ಪಾರ್ಕಿಂಗ್ ನಲ್ಲಿ ಬಾಂಬ್ ಸ್ಫೋಟ ಸಂಭವಿಸಿದ ವೇಳೆ ಚೀನಾದ ರಾಯಭಾರಿಗಳು ಹೋಟೆಲ್ ನಲ್ಲಿ ಇರಲಿಲ್ಲವಾಗಿತ್ತು ಎಂದು ವರದಿ ತಿಳಿಸಿದೆ.
ದಶಕಗಳಷ್ಟು ಸಮಯ ಭಯೋತ್ಪಾದಕ ಚಟುವಟಿಕೆಗಳಿಂದ ನಲುಗಿ ಹೋಗಿದ್ದ ಬಲೂಚಿಸ್ತಾನ್ ಪ್ರದೇಶದಲ್ಲಿ ನೈಸರ್ಗಿಕ ಸಂಪತ್ತು ಹೇರಳವಾಗಿದೆ. ಆದರೂ ತಮಗೆ ಅಗತ್ಯವಿರುವ ಅನಿಲ ಮತ್ತು ನೈಸರ್ಗಿಕ ಸಂಪತ್ತಿನ ಪಾಲು ದೊರೆಯುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿರುವುದಾಗಿ ವರದಿ ಹೇಳಿದೆ.
ಈ ಭಾಗದಲ್ಲಿ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಯೋಜನೆ ಮೂಲಕ ಲಕ್ಷಾಂತರ ಕೋಟಿ ರೂಪಾಯಿ ಹಣವನ್ನು ಹೂಡಿಕೆ ಮಾಡುತ್ತಿದೆ. ಚೀನಾದ ಹೂಡಿಕೆ ವಿರುದ್ಧ ಸ್ಥಳೀಯರ ಆಕ್ರೋಶ ಹೆಚ್ಚಳವಾಗುತ್ತಿದೆ. ಇಲ್ಲಿನ ಯೋಜನೆಗಳಲ್ಲಿ ತಮಗೂ ಸ್ವಲ್ಪ ಲಾಭಾಂಶ ಹಾಗೂ ಹೊಸ ಉದ್ಯೋಗಗಳನ್ನು ನೀಡಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.