ಹೊಸಪೇಟೆ: ಲಾರಿ ಮತ್ತು ಮಾರುತಿ ಒಮಿನಿ ಕಾರಿನ ನಡುವೆ ಮುಖಾಮುಖೀ ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿದ್ದ
ನಾಲ್ವರು ಸ್ಥಳದಲ್ಲೇ ಮೃತಪಟ್ಟು, 8 ಜನರು ಗಾಯಗೊಂಡಿರುವ ಘಟನೆ ತಾಲೂಕಿನ ಪಾಪಿನಾಯಕನಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಶನಿವಾರ ಬೆಳಗಿನ ಜಾವ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ಮೂಲದ ಸರಸ್ವತಿ (55), ವೆಂಕಟಮ್ಮ (57), ನಳಿನಿ (33) ಹಾಗೂ ಚಾಲಕ ಶ್ರೀನಿವಾಸ್(45) ಮೃತರು. ಕಾರಿನಲ್ಲಿದ್ದ ಅರ್ಜುನ್, ಸ್ವಾತಿ, ವೆಂಕಟೇಶ್,ಸಂಜಯ್, ರಾಜೇಶ್‌ರಾವ್, ವಿಜಯ ಪ್ರಸಾದ್ ಸೇರಿ 8 ಜನರು ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಏನಾಯ್ತು?: ಹೊಸಪೇಟೆ ನಗರದ ಅಮರಾವತಿಯಲ್ಲಿ ಮೃತಪಟ್ಟಿದ್ದ ಸಂಬಂಧಿಕರೊಬ್ಬರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಹಿರಿಯೂರಿನಿಂದ ಮಾರುತಿ ಒಮಿನಿ ಕಾರಿನಲ್ಲಿ ತೆರಳುತ್ತಿರುವಾಗ ಹೊಸಪೇಟೆಯಿಂದ ಬಳ್ಳಾರಿಗೆ ಮಾರ್ಬಲ್ ತುಂಬಿಕೊಂಡು ಹೋಗುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಮೃತ ದೇಹಗಳು ಕಾರಿನಲ್ಲಿ ಸಿಲುಕಿಕೊಂಡಿದ್ದವು. ಡಿಕ್ಕಿ ಹೊಡೆದ ಬಳಿಕ ಲಾರಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಆಗಮಿಸಿದ್ದ ಅಗ್ನಿಶಾಮಕ ದಳದ ಅಧಿಕಾರಿ ಕೃಷ್ಣಸಿಂಗ್, ಸಿಬ್ಬಂದಿ ಗಾಯಾಳುಗಳನ್ನು ಕಾರಿನಿಂದ ಹೊರ ತೆಗೆದು ಆಸ್ಪತ್ರೆಗೆ ದಾಖಲಿಸಿದರು. ಈ ಕುರಿತು ಗಾದಿಗನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಾರಿ ಚಾಲಕ ಪರಾರಿಯಾಗಿದ್ದಾನೆ.