ಗುವಾಹಟಿ: ಅಸ್ಸಾಂನ ಎಲ್ಲಾ 25 ಜಿಲ್ಲೆಗಳಲ್ಲಿ ಬರೋಬ್ಬರಿ ನಾಲ್ಕು ಗಂಟೆ ಮೊಬೈಲ್ ಇಂಟರ್‌ನೆಟ್ ಸೇವೆ ಬಂದ್ ಮಾಡಲಾಗಿತ್ತು. ಏನಾದರೂ ಗಲಾಟೆಯೇ, ಹಿಂಸಾಚಾರವೇ ಎಂದು ಪ್ರಶ್ನೆ ಮಾಡಬೇಡಿ.
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ 27 ಸಾವಿರ ಹುದ್ದೆಗಳಿಗೆ ನೇಮಕ ಮಾಡುವ ಸಲುವಾಗಿ ಪ್ರವೇಶ ಪರೀಕ್ಷೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
14 ಲಕ್ಷ ಮಂದಿ ಉದ್ಯೋಗಾಕಾಂಕ್ಷಿಗಳು ಈ ಪರೀಕ್ಷೆ ಬರೆದಿದ್ದಾರೆ. ಈ ಸಂದರ್ಭದಲ್ಲಿ ತಾಂತ್ರಿಕ ಸೌಲಭ್ಯ ಬಳಕೆ ಮಾಡಿ, ಪರೀಕ್ಷಾ ಅಕ್ರಮ ಎಸಗದಂತೆ ಮಾಡದೇ ಇರಲು ರಾಜ್ಯ ಸರ್ಕಾರ ಈ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಇದರ ಜತೆಗೆ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆಯನ್ನೂ ವಿಧಿಸಲಾಗಿತ್ತು.
ಉದ್ಯೋಗಾಕಾಂಕ್ಷಿಗಳು, ಪರೀಕ್ಷಾ ಕೊಠಡಿಗಳ ಮೇಲ್ವಿಚಾರಕರೂ ಕೂಡ ಕಡ್ಡಾಯವಾಗಿ ಮೊಬೈಲ್ ಅನ್ನು ಪರೀಕ್ಷಾ ಕೊಠಡಿಗಳಿಗೆ ತೆಗೆದುಕೊಂಡು ಹೋಗದಂತೆ ತಡೆಯೊಡ್ಡಲಾಗಿತ್ತು. ಜತೆಗೆ ಪರೀಕ್ಷಾ ಕೇಂದ್ರದಲ್ಲಿನ ಪ್ರತಿಯೊಂದು ಅಂಶವನ್ನೂ ವಿಡಿಯೋ ಚಿತ್ರೀಕರಿಸುವಂತೆ ಸ್ಥಳೀಯ ಮುಖ್ಯಸ್ಥರಿಗೆ ಆದೇಶವನ್ನೂ ಮಾಡಲಾಗಿತ್ತು.
ಕರ್ನಾಟಕದಲ್ಲಿ ಇತ್ತೀಚೆಗೆ ನಡೆಸಲಾಗಿದ್ದ ಪಿಎಸ್‌ಐ ನೇಮಕ ಪರೀಕ್ಷೆಯಲ್ಲಿ ಭ್ರಷ್ಟಾಚಾರದ ಆರೋಪ ಮಾತ್ರವಲ್ಲದೆ, ತಾಂತ್ರಿಕವಾಗಿ ಕೆಲವೊಂದು ಅವ್ಯವಹಾರಗಳನ್ನೂ ನಡೆಸಲಾಗಿತ್ತು ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಪ್ರಕರಣ ಈಗ ತನಿಖೆಯ ಹಂತದಲ್ಲಿ ಇದೆ.