ಶ್ರೀನಗರ: ಬಸ್ ಪಲ್ಟಿಯಾಗಿ ನಾಲ್ವರು ಮೃತಪಟ್ಟು, 28 ಮಂದಿ ಗಾಯಗೊಂಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಶನಿವಾರ ( ಮಾ.18 ರಂದು) ನಡೆದಿದೆ.
ನಸ್ರುದಿನ್ ಅನ್ಸಾರಿ, ರಾಜ್ ಕರಣ್ ದಾಸ್, ಸಲೀಂ ಅಲಿ ಮತ್ತು ಕೈಶರ್ ಆಲಂ ಮೃತರು.
ದಕ್ಷಿಣ ಕಾಶ್ಮೀರ ಜಿಲ್ಲೆಯ ಬರ್ಸೂ ಪ್ರದೇಶದ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ಪಲ್ಟಿಯಾಗಿದ್ದು, ಘಟನೆ 4 ಮಂದಿ ಮೃತಪಟ್ಟಿದ್ದಾರೆ. ಮೃತರು ಹಾಗೂ ಗಾಯಗೊಂಡ 28 ಮಂದಿ ಪ್ರಯಾಣಿಕರು ಬಿಹಾರ ಮೂಲದವರು. 28 ಮಂದಿ ಗಾಯಾಳುಗಳಲ್ಲಿ 23 ಮಂದಿಯನ್ನು ವಿವಿಧ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ವರದಿಯಾಗಿದೆ.
ಘಟನೆಗೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಸಂತಾಪ ಸೂಚಿಸಿದ್ದು, ಸಂತ್ರಸ್ತ ಜನರಿಗೆ ಅಗತ್ಯವಿರುವ ಎಲ್ಲಾ ನೆರವು ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ. ಬಿಹಾರದ ಸಂತ್ರಸ್ತ ಕುಟುಂಬಗಳಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲು ಜಿಲ್ಲಾಡಳಿತವು ಸಂಪರ್ಕದಲ್ಲಿದೆ ಎಂದು ಅವರು ಹೇಳಿದರು.
ಪುಲ್ವಾಮಾ ಜಿಲ್ಲಾಧಿಕಾರಿ ಬಸೀರ್ ಉಲ್ ಹಕ್ ಘಟನೆ ಬಗ್ಗೆ ಸಂತಾಪ ಸೂಚಿಸಿ, ಮೃತ ಕುಟುಂಬಕ್ಕೆ ತಲಾ 1 ಲಕ್ಷ ರೂ. ಘೋಷಿಸಿದ್ದು,ಗಂಭೀರ ಸ್ವರೂಪದ ಗಾಯಾಳುಗಳಿಗೆ 25 ಸಾವಿರ ರೂ. ಸಣ್ಣಪುಟ್ಟ ಗಾಯಾಳುಗಳಿಗೆ 10 ಸಾವಿರ ರೂ.ವನ್ನು ಘೋಷಿಸಿದ್ದಾರೆ.