Advertisement

ಕೆರಾಡಿಯ 4 ಬಡ ಕುಟುಂಬಕ್ಕೆ ಗುಡಿಸಲಿನಿಂದ ಇನ್ನೂ ಸಿಗದ ಮುಕ್ತಿ

09:39 PM Mar 04, 2021 | Team Udayavani |

ಕೆರಾಡಿ: ಸರಕಾರ ಬಡವರ ಕಲ್ಯಾಣಕ್ಕಾಗಿ, ಮನೆ ಕಟ್ಟಲು ಸಾಧ್ಯವಿಲ್ಲದವರಿಗೆ ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರೂ, ಸಂಕಷ್ಟದಲ್ಲಿರುವವರಿಗೆ, ಅರ್ಹರಿಗೆ ಮಾತ್ರ ಅದರ ಪ್ರಯೋಜನ ಸಿಗದಿರುವ ಬೆಳವಣಿಗೆಗಳು ಆಗಾಗ ನಡೆಯುತ್ತಲೇ ಇರುತ್ತದೆ. ಇದಕ್ಕೆ ಕೆರಾಡಿ ಗ್ರಾಮದ 4 ಬಡ ಕುಟುಂಬಗಳ ಕಥೆಯೇ ಜ್ವಲಂತ ನಿದರ್ಶನ.

Advertisement

ಹೌದು, ಈ 4 ಬಡ ಕುಟುಂಬಗಳು ಇನ್ನೂ ಗುಡಿಸಲಿನಲ್ಲಿಯೇ ವಾಸಿಸುತ್ತಿವೆ. ವಸತಿ ಯೋಜನೆಯಡಿ ಅರ್ಜಿ ಸಲ್ಲಿಸಿ 6 ವರ್ಷಗಳು ಕಳೆದರೂ ಇನ್ನೂ ಈ ಕುಟುಂಬಗಳ ಗುಡಿಸಲಿನ ವಾಸಕ್ಕೆ ಮಾತ್ರ ಮುಕ್ತಿ ಸಿಕ್ಕಿಲ್ಲ. ಅಲ್ಲಿಂದ ಈ ವರೆಗೆ ಸಾಕಷ್ಟು ಬಾರಿ ಪಂಚಾಯತ್‌ಗೆ, ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಇವರು ಮೊರೆಯಿಡುತ್ತಲೇ ಇದ್ದಾರೆ. ಆದರೂ ಇವರಿಗೆ ಇನ್ನೂ ಮನೆ ಕಟ್ಟಲು ಅನುದಾನ ಮಾತ್ರ ಮಂಜೂರಾಗಿಲ್ಲ.

ಮನೆ ಮಂಜೂರಾಗಿತ್ತು…

ಕೆರಾಡಿ ಗ್ರಾಮದ ಗುಲಾಬಿ ಹಸ್ಲ, ರತ್ನಾ ಹಸ್ಲ, ಜಲಜಾ ಹಸ್ಲ ಹಾಗೂ ಸುನೀತಾ ಹಸ್ಲ ಅವರ ಕುಟುಂಬಗಳು ಮನೆಯಿಲ್ಲದೆ, ಈಗಲೂ ಗುಡಿಸಲಲ್ಲಿಯೇ ದಿನ ಕಳೆಯುತ್ತಿದ್ದಾರೆ. 2013-14ನೇ ಸಾಲಿನಲ್ಲಿ ಬಸವ ವಸತಿ ಯೋಜನೆಯಡಿ ಮನೆಗೆ ಅರ್ಜಿ ಸಲ್ಲಿಸಿದ್ದರು. ಆಗ ಅನುದಾನವು ಮಂಜೂರಾಗಿತ್ತು. ಆದರೆ ಇವರದು ಬಡ ಕುಟುಂಬವಾಗಿದ್ದರಿಂದ, ಕೂಲಿ ಮಾಡಿ ದಿನ ಕಳೆಯುತ್ತಿದ್ದುದರಿಂದ ಮನೆ ಕಟ್ಟುವ ಕಾರ್ಯ ಆರಂಭಿಸಲು ಹಣವಿಲ್ಲದೆ ವಿಳಂಬವಾಯಿತು. ಸಕಾಲದಲ್ಲಿ ಮನೆ ಕಟ್ಟಿಕೊಳ್ಳದ ಕಾರಣ ಅನುದಾನವೇ ಬಿಡುಗಡೆಯಾಗಿಲ್ಲ.

ಮನವಿಗೆ ಸ್ಪಂದನೆಯೇ ಇಲ್ಲ  :

Advertisement

ಕಳೆದ 4-5 ವರ್ಷಗಳಿಂದ ನಾವು ಬಸವ ವಸತಿ ಯೋಜನೆಯಡಿ ಮನೆ ಮಂಜೂರಾತಿಗೆ ಮನವಿ ಸಲ್ಲಿಸುತ್ತಲೇ ಇದ್ದೇವೆ. ಆದರೆ ಯಾವುದೇ ಸ್ಪಂದನೆಯೇ ಇಲ್ಲ. ಇನ್ನೆಷ್ಟು ದಿನ ಕಾಯಬೇಕೋ ಗೊತ್ತಿಲ್ಲ. ಒಬ್ಬರ ಮನೆ ಸಹ ಕಳೆದ ಮಳೆಗಾಲದಲ್ಲಿ ಕುಸಿದಿದೆ. ಇನ್ನೆಷ್ಟು ದಿನ ಈ ಗುಡಿಸಲಲ್ಲಿಯೇ ಕಾಲ ಕಳೆಯಬೇಕು ಎನ್ನುವುದಾಗಿ ಸಂತ್ರಸ್ತರು ಪ್ರಶ್ನಿಸುತ್ತಿದ್ದಾರೆ.

ಪ್ರಸ್ತಾವನೆ ಸಲ್ಲಿಕೆ :

2013-14 ರಲ್ಲಿ ಮನೆ ಮಂಜೂರಾಗಿದ್ದು, ತಲಾ1.30 ಲಕ್ಷ ರೂ. ಅನುದಾನ ಸಿಗುತ್ತಿತ್ತು. ಆದರೆ ಸಕಾಲದಲ್ಲಿ ಅವರು ಮನೆ ಕಟ್ಟಿಕೊಳ್ಳದ ಕಾರಣ ರಾಜ್ಯ ಮಟ್ಟದಲ್ಲಿಯೇ ವಸತಿ ಯೋಜನೆಯಡಿ ಬ್ಲಾಕ್‌ ಆಗಿದೆ. ಈಗ ಪಂಚಾಯತ್‌ನಿಂದ ಜಾಗ ಜಿಪಿಎಸ್‌ ಮಾಡಿ, ತಾ.ಪಂ. ಮೂಲಕ ರಾಜ್ಯ ವಸತಿ ನಿಗಮಕ್ಕೆ ಬ್ಲಾಕ್‌ ತೆಗೆಯಲು ಹಾಗೂ ಮನೆ ಮಂಜೂರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.  – ಗುರುಮೂರ್ತಿ, ಕೆರಾಡಿ  ಗ್ರಾ.ಪಂ. ಪಿಡಿಒ

ಮನೆ ಮಂಜೂರಿಗೆ ಪ್ರಯತ್ನ : 

ಕೆರಾಡಿ ಗ್ರಾಮದ 4 ಕುಟುಂಬಗಳ ವಸತಿ ಯೋಜನೆ ಬ್ಲಾಕ್‌ ಆಗಿರುವ ಬಗ್ಗೆ ಪಿಡಿಒ ಅವರಿಗೆ ಒಂದು ಪ್ರತ್ಯೇಕ ಫಾರ್ಮೆಟ್‌ನಲ್ಲಿ ಅರ್ಜಿಯನ್ನು ಸಿದ್ಧಪಡಿಸಿ ಅದನ್ನು ಭರ್ತಿ ಮಾಡಿ ಕಳುಹಿಸಲು ತಿಳಿಸಿದ್ದು, ಅದನ್ನು ಜಿ.ಪಂ.ಗೆ ಸಲ್ಲಿಸಿ, ವಸತಿ ನಿಗಮಕ್ಕೆ ಸಲ್ಲಿಸಿ, ಮನೆ ಮಂಜೂರಾತಿಗೆ ಪ್ರಯತ್ನಿಸಲಾಗುವುದು.ಭೋಜ ಪೂಜಾರಿ, ನೋಡಲ್‌ ಅಧಿಕಾರಿ, ವಸತಿ ಯೋಜನೆ ಕುಂದಾಪುರ

 

ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next