Advertisement

ಉತ್ತರಾಖಂಡದಲ್ಲಿ ರಾಜ್ಯದ 9 ಚಾರಣಿಗರು ಸಾವು, ಹಲವರು ನಾಪತ್ತೆ

09:58 PM Jun 05, 2024 | Team Udayavani |

ಬೆಂಗಳೂರು: ಉತ್ತರಾಖಂಡದ ಸಹಸ್ತ್ರ ತಾಲ್‌ (ಲೇಕ್‌) ಎಂಬ ಹಿಮಾಲಯ ಪ್ರದೇಶಕ್ಕೆ ಚಾರಣ ಹೋಗಿದ್ದ 22 ಮಂದಿ ಚಾರಣಿಗರ ಪೈಕಿ 9 ಜನರು ಹವಾಮಾನ ವೈಪರೀತ್ಯಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.

Advertisement

ಮೃತಪಟ್ಟವರ ಪೈಕಿ ರಾಜ್ಯದ ಸಿಂಧೂ ವಾಕಿಲಂ, ಆಶಾ ಸುಧಾಕರ್‌, ಸುಜಾತಾ ಮುಂಗುರುವಾಡಿ, ವಿನಾಯಕ್‌ ಮುಂಗುರುವಾಡಿ ಮತ್ತು ಚೈತ್ರಾ ಪ್ರಣೀತ್‌ ಎಂಬುವರ ಗುರುತು ಪತ್ತೆ ಹಚ್ಚಲಾಗಿದೆ. ಮೃತರ ದೇಹವನ್ನು ಉತ್ತರ ಕಾಶಿಯಲ್ಲಿ ಇಡಲಾಗಿದ್ದು ಬೆಂಗಳೂರಿಗೆ ಸ್ಥಳಾಂತರಿಸುವುದಕ್ಕೆ ಕ್ರಮ ವಹಿಸಲಾಗಿದೆ. ನಾಲ್ವರ ಮೃತದೇಹ ಇನ್ನೂ ಚಾರಣ ಮಾರ್ಗದಲ್ಲೇ ಇದೆ ಎಂದು ರಾಜ್ಯ ಕಂದಾಯ ಇಲಾಖೆ ತಿಳಿಸಿದೆ.

ಚಾರಣಿಗರು ದುರ್ಗಮ ಪ್ರದೇಶದಲ್ಲಿ ಸಿಲುಕಿಕೊಂಡಿರುವ ಬಗ್ಗೆ ಮಾಹಿತಿ ಲಭಿಸುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಉತ್ತರಾಖಂಡಕ್ಕೆ ತೆರಳಿದ್ದು, ರಕ್ಷಣಾ ಕಾರ್ಯದ ಮೇಲ್ವಿಚಾರಣೆ ಹೊತ್ತಿದ್ದಾರೆ. ಕ್ಷಣ ಕ್ಷಣದ ಮಾಹಿತಿಯನ್ನು ರಾಜ್ಯಕ್ಕೆ ರವಾನಿಸುತ್ತಿದ್ದು, ರಕ್ಷಿಸಲ್ಪಟ್ಟ ಚಾರಣಿಗರನ್ನು ಸ್ಥಳೀಯ ಸರ್ಕಾರಿ ಅತಿಥಿ ಗೃಹಕ್ಕೆ ಕರೆತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಸಂತ್ರಸ್ತರ ಪೈಕಿ ಅನಿಲ್‌ ಭಟ್‌ ಎಂಬುವರು ಕೃಷ್ಣ ಬೈರೇಗೌಡರ ಮೊಬೈಲ್‌ನಿಂದಲೇ ಸಿದ್ದರಾಮಯ್ಯ ಅವರ ಜತೆಗೆ ದೂರವಾಣಿ ಸಂಭಾಷಣೆ ನಡೆಸಿದ್ದು ಘಟನೆಯ ವಿವರ ನೀಡಿದ್ದಾರೆ. ರಾಜ್ಯ ಸರ್ಕಾರದ ಸಕಾಲಿಕ ನೆರವಿಗಾಗಿ ಚಾರಣಿಗರ ಪರವಾಗಿ ಧನ್ಯವಾದ ಸಲ್ಲಿಸಿದ್ದಾರೆ.

ಯಾರ್ಯಾರ ರಕ್ಷಣೆ ?:
ಇನ್ನು ಅಪಾಯದಲ್ಲಿ ಸಿಲುಕಿದ್ದ ಸೌಮ್ಯಾ ಕಣಾಳೆ, ಸ್ಮತಿ ಡೋಲ್ಸ್‌, ಶೀನಾ ಲಕ್ಷ್ಮಿ, ಎಸ್‌.ಶಿವ ಜ್ಯೋತಿ, ಅನಿಲ್‌ ಭಟ್‌ , ಭರತ್‌ ಬೊಮ್ಮನಗೊಂಡೂರ್‌, ಮಧು ಕಿರಣ್‌ ರೆಡ್ಡಿ, ಜಯಪ್ರಕಾಶ್‌ ಅವರನ್ನು ರಕ್ಷಿಸಿ ಡೆಹ್ರಾಡೂನ್‌ಗೆ ಕಳುಹಿಸಲಾಗಿದೆ. ಹಾಗೆಯೇ ಎಸ್‌.ಸುಧಾಕರ್‌, ಎಂ.ಕೆ.ವಿನಾಯಕ್‌, ವಿವೇಕ್‌ ಶ್ರೀಧರ್‌ ಮತ್ತು ಎ.ನವೀನ್‌, ರೀತಿಕಾ ಜಿಂದಾಲ್‌ ಅವರನ್ನು ರಕ್ಷಿಸಿ ಸಿಲ್ಲಾ ಗ್ರಾಮಕ್ಕೆ ಕಳುಹಿಸಿದ್ದು ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಇನ್ನು ನಾಪತ್ತೆಯಾಗಿರುವ ಇತರ ನಾಲ್ವರಿಗಾಗಿ ಶೋಧ ಕಾರ್ಯ ನಡೆಯುತ್ತಿತ್ತು. ಆದರೆ ಹವಾಮಾನ ವೈಪರೀತ್ಯದಿಂದಾಗಿ ಬುಧವಾರ ಸಂಜೆ ಕಾರ್ಯಾಚರಣೆ ಸ್ಥಗಿತಗೊಳಿಸಿ, ಗುರುವಾರ ಮುಂಜಾನೆಯಿಂದಲೇ ನಾಪತ್ತೆಯಾದವರ ಶೋಧ ನಡೆಸಲಾಗುತ್ತಿದೆ.

Advertisement

15 ಸಾವಿರ ಅಡಿ ಎತ್ತರದ ಪ್ರದೇಶ
ಮೂವರು ಸ್ಥಳೀಯರ ಮಾರ್ಗದರ್ಶಕ ಸೇರಿ ಕರ್ನಾಟಕದ 18 ಮಂದಿ, ಮಹಾರಾಷ್ಟ್ರದ ಒಬ್ಬ ಸೇರಿ 22 ಮಂದಿ ಉತ್ತರಾಖಂಡದ ಎತ್ತರ 15 ಸಾವಿರ ಎತ್ತರದ ಸಹಸ್ತ್ರ ತಾಲ್‌ ಮಯಳಿ ಪ್ರದೇಶಕ್ಕೆ ತೆರಳಿದ್ದು ಮಂಗಳವಾರ ಬೆಳಗ್ಗೆ ಚಾರಣ ಆರಂಭಿಸಿದ್ದರು. ಚಾರಣ ಮುಗಿಸಿದ ಬಳಿಕ ಮಧ್ಯಾಹ್ನ 2 ಗಂಟೆ ಸುಮಾರಿಗೆ ವಾಪಸ್‌ ಬರುವಾಗ ಹವಾಮಾನದ ವೈಪರೀತ್ಯದಿಂದಾಗಿ ಕೆಳಗೆ ಇಳಿಯಲು ಸಾಧ್ಯವಾಗದೆ ಗಾಳಿ, ಮಳೆಯ ಅಪಾಯಕ್ಕೆ ಸಿಲುಕಿದ್ದಾರೆ. ಈ ವಿಚಾರ ತಿಳಿದ ಕೂಡಲೇ ಉತ್ತರಾಖಂಡ ಸರ್ಕಾರ, ಕೇಂದ್ರ ಗೃಹ ಸಚಿವಾಲಯವನ್ನು ಸಂಪರ್ಕಿಸಿ, ಮಂಗಳವಾರ ಸಂಜೆಯಿಂದಲೇ ರಾಜ್ಯದ ಚಾರಣಿಗರ ರಕ್ಷಣಾ ಕಾರ್ಯ ಆರಂಭಿಸಲಾಗಿದೆ. ಉತ್ತರಖಂಡದ ಎಸ್‌ಡಿಆರ್‌ಎಫ್, ಐಎಂಎಫ್, ಭಾರತೀಯ ವಾಯುಸೇನೆ ಮತ್ತು ಭಾರತ ಸರ್ಕಾರದ ಕೆಲ ರಕ್ಷಣಾ ತಂಡಗಳ ಜತೆ ಸಚಿವರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಬುಧವಾರ ನಿರಂತರ ಕಾರ್ಯಾಚರಣೆ ನಡೆಸಿ 13 ಮಂದಿಯನ್ನು ರಕ್ಷಿಸಲಾಗಿದೆ. ಇನ್ನುಳಿದ ನಾಲ್ವರಿಗಾಗಿ ಗುರುವಾರ ಶೋಧ ಕಾರ್ಯ ಮುಂದುವರಿಯಲಿದೆ.

ಮೃತ ದೇಹ ತಲುಪಿಸಲು ವ್ಯವಸ್ಥೆ; ಸಿಎಂ
ಚಾರಣಕ್ಕೆ ತೆರಳಿ ಮೃತಪಟ್ಟಿರುವವರ ಮೃತದೇಹಗಳನ್ನು ಕುಟುಂಬದವರಿಗೆ ತಲುಪಿಸುವ ಮತ್ತು ರಕ್ಷಿಸಲ್ಪಟ್ಟಿರುವ ಉಳಿದ ಚಾರಣಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡೆಹ್ರಾಡೂನ್‌ ನಲ್ಲಿರುವ ಕಂದಾಯ ಸಚಿವ ಕೃಷ್ಣಬೈರೇಗೌಡ ಮತ್ತು ರಕ್ಷಿಸಲ್ಪಟ್ಟ ಚಾರಣಿಗರ ಜೊತೆ ದೂರವಾಣಿ ಮೂಲಕ ಮಾತನಾಡಿದರು. 9 ಮಂದಿಯ ಸಾವಿನ ಸುದ್ದಿ ತಿಳಿದು ಬಹಳ ನೋವಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ರಕ್ಷಿಸಲ್ಪಟ್ಟಿರುವ ಎಲ್ಲರನ್ನೂ ಯಾವುದೇ ಅಡಚಣೆ ಆಗದಂತೆ ಸುರಕ್ಷಿತವಾಗಿ ಮನೆಗಳಿಗೆ ಸೇರಿಸಬೇಕು. ಮೃತ ದೇಹಗಳನ್ನು ಕುಟುಂಬದವರಿಗೆ ತಲುಪಿಸುವ ನಿಟ್ಟಿನಲ್ಲೂ ಅಗತ್ಯವಾದ ಎಲ್ಲಾ ಪ್ರಕ್ರಿಯೆಗಳನ್ನು ತುರ್ತಾಗಿ ನಿರ್ವಹಿಸಬೇಕು ಎನ್ನುವ ಸೂಚನೆಗಳನ್ನು ಸಚಿವ ಕೃಷ್ಣಬೈರೇಗೌಡರಿಗೆ ನೀಡಿದ್ದಾರೆ. ರಕ್ಷಿಸಲ್ಪಟ್ಟು ಸುರಕ್ಷಿತ ನೆಲೆಗೆ ಕರೆತರಲಾಗಿರುವ ಚಾರಣಿಗರ ಜೊತೆಗೂ ಮಾತನಾಡಿದ ಮುಖ್ಯಮಂತ್ರಿಗಳು, ಬಾಕಿ ಉಳಿದಿರುವ ಪ್ರತಿಯೊಬ್ಬರನ್ನೂ ಸುರಕ್ಷಿತವಾಗಿ ಕಾಪಾಡಿ ಕರೆತರುವ ಬಗ್ಗೆ ಸರ್ಕಾರಗಳ ಮಟ್ಟದಲ್ಲಿ ಸಕಲ ಪ್ರಯತ್ನಗಳೂ ನಡೆಯುತ್ತಿವೆ ಎಂದು ಸಿಎಂ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: Environment Day; ವೃಕ್ಷ ಸಂರಕ್ಷಣಾ ಕಾಯಿದೆ 1976 ತಿದ್ದುಪಡಿಗೆ ಚಿಂತನೆ: ಈಶ್ವರ ಖಂಡ್ರೆ

Advertisement

Udayavani is now on Telegram. Click here to join our channel and stay updated with the latest news.

Next