ಬೊಗೋಟಾ (ಕೊಲಂಬಿಯಾ): ವಿಮಾನ ಅಪಘಾತವಾಗಿ ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು ಎರಡು ವಾರದ ಬಳಿಕ ಸುರಕ್ಷಿತವಾಗಿ ದಟ್ಟ ಕಾಡೊಂದರಲ್ಲಿ ಪತ್ತೆಯಾಗಿರುವ ಘಟನೆ ಕೊಲಂಬಿಯಾ ನಡೆದಿದೆ.
ಮೇ 1 ರಂದು ಸೆಸ್ನಾ 206 ಎಂಬ ವಿಮಾನ ಸ್ಥಳೀಯ ಮಕ್ಕಳು, ಅಪ್ರಾಪ್ತರನ್ನು ಸೇರಿದಂತೆ ಒಟ್ಟು 7 ಮಂದಿಯನ್ನು ಹೊತ್ತುಕೊಂಡು ಅಮೆಜಾನ್ ಪ್ರಾಂತ್ಯದ ಅರರಾಕುರಾ ಮತ್ತು ಗುವಿಯಾರ್ ಪ್ರಾಂತ್ಯದ ಸ್ಯಾನ್ ಜೋಸ್ ಡೆಲ್ ಗುವಿಯಾರ್ ನಡುವೆ ಸಂಚರಿಸುತ್ತಿದ್ದ ವೇಳೆ ವಿಮಾನ ಇಂಜಿನ್ ನಲ್ಲಿ ವೈಫಲ್ಯ ಕಂಡು ಬಂದಿತ್ತು. ಈ ವೇಳೆ ಪೈಲಟ್ ಎಷ್ಟೇ ಸಾಹಸಪಟ್ಟು ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಲು ಯತ್ನಿಸಿದರೂ ಅದು ಸಾಧ್ಯವಾಗದೇ ಪತನಗೊಂಡಿತು.
ಪತನಗೊಂಡ ಬಳಿಕ ರಕ್ಷಣಾ ಕಾರ್ಯಾಚರಣೆಗೆ ಇಳಿದ ತಂಡ ಪೈಲೆಟ್ ಸೇರಿದಂತೆ ಮೂವರು ವಯಸ್ಕರ ಮೃತದೇಹ ವಿಮಾನದೊಳಗೆ ಸುಟ್ಟ ಸ್ಥಿತಿಯಲ್ಲಿ ಪತ್ತೆ ಮಾಡಿತ್ತು. ಆದರೆ ಇನ್ನುಳಿದ ನಾಲ್ವರ ಸುಳಿವು ಸಿಕ್ಕಿರಲಿಲ್ಲ. ಇದಕ್ಕಾಗಿ ಸರ್ಕಾರ ಪೊಲೀಸ್ ಸ್ನಿಫರ್ ಡಾಗ್‌ಗಳೊಂದಿಗೆ 100 ಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಿದ್ದರು.
ಸೈನಿಕರು ಸತತ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಕಾಡಿನ ದಾರಿಯಲ್ಲಿ ಕೊಂಬೆಗಳ ನಡುವೆ ಕತ್ತರಿ ಮತ್ತು ಹೇರ್ ಟೈ ಪತ್ತೆಯಾಗಿತ್ತು. ಮಗು ಹಾಲು ಕುಡಿಯುವ ಬಾಟಲಿ ಹಾಗೂ ಅರ್ಧ ತಿಂದ ಹಣ್ಣು ಕೂಡ ಹುಡುಕಾಟದ ದಾರಿಯಲ್ಲಿ ಪತ್ತೆಯಾಗಿತ್ತು. ನಿರಂತರವಾಗಿ ಕಾರ್ಯಾಚರಣೆ ನಡೆಸಿದ ತಂಡಕ್ಕೆ ಕಾಡಿನಲ್ಲಿ ಅಲೆದಾಡುತ್ತಿದ್ದ 11 ತಿಂಗಳ ಮಗು, 4 ವರ್ಷದ ಮಗು 13, 9 ವರ್ಷದ ಮಕ್ಕಳು ಪತ್ತೆಯಾಗಿದ್ದಾರೆ.
ವಿಮಾನ ಪತನಗೊಂಡ ಎರಡೂ ವಾರದ ಬಳಿಕ ನಾಲ್ವರು ಮಕ್ಕಳು ಜೀವಂತವಾಗಿ ಕಾಡಿನಲ್ಲಿ ಪತ್ತೆಯಾದ ಬಗ್ಗೆ ಕೊಲಂಬಿಯಾ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಟ್ವೀಟ್ ಮಾಡಿದ್ದಾರೆ.
ವಿಮಾನ ಪತನಕ್ಕೆ ಕಾರಣವೇನು ಎಂಬುದನ್ನು ಅಧಿಕಾರಿಗಳು ಸೂಚಿಸಿಲ್ಲ. ರಾಡಾರ್‌ಗಳಿಂದ ವಿಮಾನ ಕಣ್ಮರೆಯಾಗುವ ಕೆಲವೇ ನಿಮಿಷಗಳ ಮೊದಲು ಪೈಲಟ್ ಇಂಜಿನ್‌ನಲ್ಲಿ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ ಎಂದು ಕೊಲಂಬಿಯಾದ ವಿಪತ್ತು ಪ್ರತಿಕ್ರಿಯೆ ಸಂಸ್ಥೆ ತಿಳಿಸಿದೆ.