ಮುಂಡೋಳಿಯ ಕೃಷಿಕ ಸಂಜೀವ ಪೂಜಾರಿಯವರ ಹಟ್ಟಿಯಲ್ಲಿ ಬುಧವಾರ ಜಾನುವಾರುಗಳ ಅಡಿಗೆ ಕರಿ ಗೋಳಿ ಸೊಪ್ಪು ಹಾಕಲಾಗಿತ್ತು. ಆದರೆ ಹಸುಗಳೆಲ್ಲ ಅದನ್ನೇ ತಿಂದ ಅನಂತರ ತೀವ್ರ ಅಸ್ವಸ್ಥಕ್ಕೆ ಒಳಗಾದವು. ಕೆಲವು ಮಲಗಿದ್ದಲ್ಲೇ ಬಿದ್ದರೆ, ಇನ್ನುಳಿದವು ಕಾಲುಗಳನ್ನು ನೆಲಕ್ಕೆ ಹೊಡೆಯುವಂತೆ ವರ್ತಿಸಲಾರಂಭಿಸಿದ್ದವು. ಇದನ್ನು ಗಮನಿಸಿದ ಮನೆಮಂದಿ ಕೋಟೆಕಾರು ಪಶು ವೈದ್ಯರಿಗೆ ದೂರವಾಣಿ ಮೂಲಕ ತಿಳಿಸಿದ್ದರು. ಅವರು ಸಹಾಯಕ ಆಯುಕ್ತರ ತುರ್ತು ಸಭೆಯಲ್ಲಿದ್ದ ಕಾರಣ ಸಹಾಯಕರನ್ನು ಸ್ಥಳಕ್ಕೆ ಕಳುಹಿಸಿ ಪ್ರಾಥಮಿಕ ಚಿಕಿತ್ಸೆಯನ್ನು ಕೊಡಿಸಿದ್ದರು.
Advertisement
ಗುರುವಾರ ಮುಂಜಾನೆ ವಿಷಾಂಶ ಹಸುಗಳ ದೇಹವಿಡೀ ಪಸರಿಸಿ ಒಂದು ಹಸು ಸಾವನ್ನಪ್ಪಿತ್ತು. ಇನ್ನುಳಿದವು ಗಂಭೀರ ಸ್ಥಿತಿಗೆ ತಲುಪಿದ್ದವು. ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಮನೆ ಮುಂದೆ ಜಮಾಯಿಸಿದ್ದು, ಪಶುವೈದ್ಯರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ಸ್ಥಳಕ್ಕಾಗಮಿಸಿದ ಕೋಟೆಕಾರು ಪಶು ವೈದ್ಯಾಧಿಕಾರಿ ಡಾ| ಚಂದ್ರಹಾಸ್ ನೇತೃತ್ವದಲ್ಲಿ ತೀವ್ರ ಚಿಕಿತ್ಸೆಯನ್ನು ಆರಂಭಿಸಲಾಯಿತು. ತಲಪಾಡಿ ಪಶು ವೈದ್ಯಾಧಿಕಾರಿ ಡಾ| ರಚನಾ ಅವರೂ ಸ್ಥಳಕ್ಕಾಗಮಿಸಿ ಗಂಭೀರ ಸ್ಥಿತಿಯಲ್ಲಿರುವ ಜಾನುವಾರುಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
ಉಳ್ಳಾಲ ತಾಲೂಕಿನಲ್ಲಿ ಕೋಟೆಕಾರು ಮತ್ತು ತಲಪಾಡಿಗೆ ಪಶುವೈದ್ಯಾಧಿಕಾರಿಗಳಿದ್ದು, ಪಾವೂರು, ಕೊಣಾಜೆ, ಅಂಬ್ಲಿಮೊಗರು, ಕುರ್ನಾಡು ಪಶುಚಿಕಿತ್ಸಾಲಯಗಳಲ್ಲಿ ವೈದ್ಯಾಧಿಕಾರಿಗಳ ಕೊರತೆ ಇದೆ. ತಲಪಾಡಿಯ ಅಧಿಕಾರಿ ಡಾ| ರಚನಾ ಅವರಿಗೆ ಅಡ್ಯಾರು ಭಾಗದ ಜವಾಬ್ದಾರಿ ನೀಡಿದ್ದು, ಇಡೀ ಉಳ್ಳಾಲ ವ್ಯಾಪ್ತಿಯಲ್ಲಿ ಓರ್ವರೇ ಕಾರ್ಯನಿರ್ವಹಿಸುವಂತಾಗಿದೆ.