ಥಾಣೆ : ವಂಚನೆ ಪ್ರಕರಣವೊಂದರಲ್ಲಿ ನ್ಯಾಯಾಲಯದಿಂದ ಬಂಧನಪೂರ್ವ ಜಾಮೀನು ಪಡೆಯಲು ದಾಖಲೆಪತ್ರಗಳ ಫೋರ್ಜರಿ ಮಾಡಿದ ಆರೋಪದ ಮೇಲೆ ಓರ್ವ ಲಾಯರ್ ಮತ್ತು ಓರ್ವ ನೋಟರಿ ಸೇರಿದಂತೆ ಒಟ್ಟು ನಾಲ್ವರ ವಿರುದ್ಧ ಕೇಸು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಂಚನೆ ಎಸಗಿದ ಆರೋಪದ ಮೇಲೆ ಪೊಲೀಸರು ಉದ್ಯಮಿ ಅಮಿತ್ ಲಖನ್‌ಪಾಲ್ (33) ಮತ್ತು ಆತನ ಸಹಚರ ಕೋಮಲ್ ಶೀರ್ಸತ್ (25) ಎಂಬವರ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ಕೇಸು ದಾಖಲಿಸಿದ್ದಾರೆ. ಇವರ ವಿರುದ್ಧ ಚಿಟ್ ಫಂಡ್ ಕಾಯಿದೆ, ಎಂಪಿಐಡಿ ಕಾಯಿದೆ ಮತ್ತು ಐಟಿ ಕಾಯಿದೆಯಡಿ ಕೂಡ ಕೇಸು ದಾಖಲಾಗಿದೆ.
ಲಖನ್‌ಪಾಲ್ ಮತ್ತು ಶೀರ್ಸಾತ್ ಅವರು ಕಳೆದ ವರ್ಷ ಬಂಧನ ಪೂರ್ವ ಜಾಮೀನು ಪಡೆಯುವ ಸಲುವಾಗಿ ವಕೀಲ ಪ್ರಶಾಂತ್ ಮಾಲಿ ಅವರಿಂದ ಅಫಿದಾವಿತ್ ಮಾಡಿಸಿಕೊಂಡು ಅದಕ್ಕೆ ಡಿ ಆರ್ ಕುದ್ರಿಗಿ ಅವರಿಂದ ನೋಟರಿ ಸಹಿ ಮಾಡಿಸಿಕೊಂಡು ಅದನ್ನು ಸ್ಥಳೀಯ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಆದರೆ ತನಿಖಾಧಿಕಾರಿಗೆ ಈ ಅಫಿದಾವಿತ್ ನ ಸಾಚಾತನದ ಬಗ್ಗೆ ಶಂಕೆ ಉಂಟಾಗಿ ಇನ್ನಷ್ಟು ತನಿಖೆ ನಡೆಸಿದಾಗ ಆರೋಪಿಗಳು ದಾಖಲೆಪತ್ರಗಳ ಫೋರ್ಜರಿ ಮಾಡಿರುವುದು ಗೊತ್ತಾಯಿತು. ಈ ಬಗ್ಗೆ ನ್ಯಾಯಾಲಯ ತನಿಖೆಗೆ ಆದೇಶಿಸಿತು. ತನಿಖೆಯಲ್ಲಿ ಆರೋಪಿಗಳು ಕೋರ್ಟಿಗೆ ಮೋಸ ಮಾಡಲು ದಾಖಲೆಪತ್ರಗಳ ಫೋರ್ಜರಿ ಮಾಡಿರುವುದು ಖಾತರಿಯಾಯಿತು.
ಅಫಿದಾವಿತ್ ಮಾಡಲ್ಪಟ್ಟಾಗ ಇಬ್ಬರೂ ಉದ್ಯಮಗಳು ದೇಶದಲ್ಲೇ ಇರಲಿಲ್ಲ ಎಂಬುದನ್ನು ಪೊಲೀಸರು ತನಿಖೆಯಲ್ಲಿ ಕಂಡುಕೊಂಡರು.
ಅಂತೆಯೇ ಥಾಣೆ ನಗರ ಪೊಲೀಸರು ಆರೋಪಿಗಳು, ವಕೀಲ ಮತ್ತು ನೋಟರಿ ವಿರುದ್ಧ ಕೇಸು ದಾಖಲಿಸಿಕೊಂಡರು. ಈ ಫೋರ್ಜರಿ ಕೇಸಿಗೆ ಸಂಬಂಧಿಸಿ ಪೊಲೀಸರು ಈ ತನಕ ಯಾರನ್ನೂ ಬಂಧಿಸಿಲ್ಲ; ತನಿಖೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.