Advertisement

4 ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡವೇ ಇಲ್ಲ

11:10 PM Jan 19, 2020 | Sriram |

ಗಂಗೊಳ್ಳಿ: ಬೇಬಿ ಸಿಟ್ಟಿಂಗ್‌, ನರ್ಸರಿಗಳ ಸಂಖ್ಯೆ ಹೆಚ್ಚಾದಂತೆ ಅಂಗನವಾಡಿಗೆ ಹೋಗುವ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿರುವ ಸಮಸ್ಯೆ ಒಂದೆಡೆ ಯಾದರೆ, ಮಕ್ಕಳ ಸಂಖ್ಯೆ ಉತ್ತಮ ವಾಗಿದ್ದರೂ, ಸ್ವಂತ ಕಟ್ಟಡವಿಲ್ಲದೆ ಗಂಗೊಳ್ಳಿಯ 4 ಅಂಗನವಾಡಿಗಳು ಬಳಲುತ್ತಿವೆ.

Advertisement

ಗಂಗೊಳ್ಳಿ ಒಂದೇ ಗ್ರಾಮದಲ್ಲಿ 8 ಅಂಗನವಾಡಿ ಕೇಂದ್ರಗಳಿವೆ. ದಾಕುಹಿತ್ಲು, ಮ್ಯಾಂಗನೀಸ್‌ ರಸ್ತೆ, ರಾಮ ಮಂದಿರ ಬಳಿ, ಮೇಲ್‌ ಗಂಗೊಳ್ಳಿ, ಖಾರ್ವಿಕೇರಿ, ಗುಡ್ಡೆಕೇರಿಯ ಉರ್ದು ಕೇರಿ, ಮಲ್ಯರಬೆಟ್ಟು ಹಾಗೂ ಬಂದರು ರಸ್ತೆಯ ಅಂಗನವಾಡಿ ಕೇಂದ್ರಗಳಿವೆ.

87 ಮಕ್ಕಳಿರುವ ಕೇಂದ್ರ
ಗಂಗೊಳ್ಳಿಯ ಉರ್ದು ಶಾಲೆಯ ಆಡಳಿತ ಮಂಡಳಿಯ ಕಟ್ಟಡದಲ್ಲೇ ಅಂಗನವಾಡಿ ನಡೆಸಲಾಗುತ್ತಿದೆ. ಈ ಅಂಗನವಾಡಿ ಕೇಂದ್ರದಲ್ಲಿ 87 ಮಕ್ಕಳಿದ್ದಾರೆ. ಒಂದೇ ಕೊಠಡಿಯಲ್ಲಿ ಇಷ್ಟೊಂದು ಮಕ್ಕಳಿಗೆ ಕುಳಿತುಕೊಳ್ಳಲು ಕಷ್ಟವಾಗುತ್ತಿದೆಯೆಂದು 2 ಕೊಠಡಿಗಳಲ್ಲಿ ಅಂಗನವಾಡಿ ನಡೆಸಲಾಗುತ್ತಿದೆ. ಖಾರ್ವಿಕೇರಿ ಯಲ್ಲಿರುವ ಅಂಗನವಾಡಿಗೆ ಕಳೆದ 35 ವರ್ಷಗಳಿಂದ ಸ್ವಂತ ಕಟ್ಟಡ ಇಲ್ಲ. ಇಲ್ಲಿನ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿ. ಪ್ರಾ. ಶಾಲೆಯ ಕಟ್ಟಡದಲ್ಲಿ ಅಂಗನವಾಡಿ ನಡೆಯುತ್ತಿದೆ. ಇಲ್ಲಿ 25 ಮಕ್ಕಳಿದ್ದಾರೆ. ಗುಡ್ಡೆಕೇರಿಯಲ್ಲಿರುವ ಉರ್ದು ಅಂಗನವಾಡಿ ಕೇಂದ್ರಕ್ಕೂ ಕಳೆದ 2-3 ವರ್ಷಗಳಿಂದ ಸ್ವಂತ ಕಟ್ಟಡವಿಲ್ಲ.

ಇಲ್ಲಿನ ಬಂದರು ರಸ್ತೆಯ ಅಂಗನವಾಡಿ ಕೇಂದ್ರಕ್ಕೆ ಕಳೆದ 35 ವರ್ಷಗಳಿಂದ ಸ್ವಂತ ಕಟ್ಟಡವಿಲ್ಲ. ಈಗ ಎಸ್‌.ವಿ. ಹಿ.ಪ್ರಾ. ಶಾಲೆಯ ಕಟ್ಟಡದಲ್ಲಿ ಅಂಗನವಾಡಿಯ ಕಾರ್ಯಚಟುವಟಿಕೆ ನಡೆಯುತ್ತಿದೆ. ಇಲ್ಲಿ 35 ಮಕ್ಕಳಿದ್ದಾರೆ. ಮಲ್ಯರಬೆಟ್ಟು ಅಂಗನವಾಡಿ ಕೇಂದ್ರಕ್ಕೂ ಕಳೆದ 2 ವರ್ಷದಿಂದ ಸ್ವಂತ ಕಟ್ಟಡವಿಲ್ಲ. ಇಲ್ಲಿ ಸದ್ಯ 30 ಮಕ್ಕಳಿದ್ದಾರೆ. ಮಲ್ಯರಬೆಟ್ಟುವಿನ ಶಾಲೆಯಲ್ಲಿ ಅಂಗನವಾಡಿಯ ಶೈಕ್ಷಣಿಕ ಚಟುವಟಿಕೆ ನಡೆಯುತ್ತಿದೆ.

ಇನ್ನು ಮೇಲ್‌ ಗಂಗೊಳ್ಳಿಯ ಅಂಗನವಾಡಿ ಕೇಂದ್ರಕ್ಕೂ ಸ್ವಂತ ಕಟ್ಟಡವಿಲ್ಲದೆ, ಹಲವು ವರ್ಷಗಳಿಂದ ಇಲ್ಲಿನ ಶಾಲೆಯ ರಂಗಮಂದಿರಲ್ಲಿ ನಡೆಸಲಾಗುತ್ತಿತ್ತು. ಒಂದು ವರ್ಷದ ಹಿಂದಷ್ಟೇ ಪ್ರತ್ಯೇಕ ಕಟ್ಟಡ ನಿರ್ಮಾಣವಾಗಿದ್ದು, ಅಲ್ಲಿಗೆ ಅಂಗನವಾಡಿ ಕೇಂದ್ರ ಸ್ಥಳಾಂತರಗೊಂಡಿತ್ತು.

Advertisement

ಜಾಗದ ಸಮಸ್ಯೆ
ಗಂಗೊಳ್ಳಿ ಪಂಚಾಯತ್‌ ವ್ಯಾಪ್ತಿಯಲ್ಲಿ ಈ ನಾಲ್ಕು ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅನುದಾನ ನೀಡಲು ಸಿದ್ಧವಿದ್ದರೂ, ಇಲ್ಲಿ ಜಾಗದ ಸಮಸ್ಯೆ ತೊಡಕಾಗಿ ಪರಿಣಮಿಸಿದೆ. ಈ ಹಿಂದೆ ಜಿಲ್ಲಾಧಿಕಾರಿ ಕೂಡ ಖಾಸಗಿ ಜಾಗ ಗುರುತಿಸಿ ಕೊಡಿ, ಅದಕ್ಕೆ ಭೂ ಪರಿಹಾರ ನೀಡುವುದಾಗಿಯೂ ತಿಳಿಸಿದ್ದರು.

ಎಲ್ಲೆಲ್ಲ ಸ್ವಂತ ಕಟ್ಟಡವಿಲ್ಲ
ಗಂಗೊಳ್ಳಿ ಒಂದೇ ಗ್ರಾಮದಲ್ಲಿ 8 ಅಂಗನವಾಡಿ ಕೇಂದ್ರಗಳಿವೆ. ಇವುಗಳ ಪೈಕಿ ಗುಡ್ಡೆಕೇರಿಯ ಉರ್ದು ಅಂಗನವಾಡಿ, ಖಾರ್ವಿಕೇರಿಯ ಅಂಗನವಾಡಿ, ಮಲ್ಯರಬೆಟ್ಟು ಹಾಗೂ ಬಂದರು ರಸ್ತೆಯ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲ. ದಾಕುಹಿತ್ಲು, ಮ್ಯಾಂಗನೀಸ್‌ ರಸ್ತೆ, ರಾಮ ಮಂದಿರ ಬಳಿ, ಮೇಲ್‌ ಗಂಗೊಳ್ಳಿ ಕೇಂದ್ರಗಳಿಗೆ ಸ್ವಂತ ಕಟ್ಟಡವಿದೆ.

ಎಲ್ಲರಿಗೂ ಮನವಿ
ಈ ಬಗ್ಗೆ ಸಾಕಷ್ಟು ಬಾರಿ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆದರೆ ಜಾಗದ ಸಮಸ್ಯೆಯಾಗಿರುವುದರಿಂದ ಸ್ವಂತ ಕಟ್ಟಡದ ಬೇಡಿಕೆ ಈಡೇರಿಲ್ಲ. ಡಿಸಿಯವರು ಜಾಗ ಗುರುತಿಸಿ, ಅದಕ್ಕೆ ಹಣ ಜಿಲ್ಲಾಡಳಿತದಿಂದ ಪಾವತಿಸುವುದಾಗಿ ತಿಳಿಸಿದ್ದು, ಈ ಪೈಕಿ ಬಂದರು ಅಂಗನವಾಡಿ ಕೇಂದ್ರ ಹಾಗೂ ಮಲ್ಯರಬೆಟ್ಟುವಿನ ಅಂಗನವಾಡಿ ಕೇಂದ್ರಗಳಿಗೆ ಜಾಗ ಗುರುತಿಸುವ ಪ್ರಯತ್ನ ನಡೆಯುತ್ತಿದೆ.
– ಫಿಲೋಮಿನಾ ಫೆರ್ನಾಂಡೀಸ್‌,
ಅಧ್ಯಕ್ಷರು,ಅಂಗನವಾಡಿ ಕಾರ್ಯಕರ್ತೆಯರ ಸಂಘ, ಕುಂದಾಪುರ

ಗಮನದಲ್ಲಿದೆ
ಗಂಗೊಳ್ಳಿಯ 4 ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲದ ಬಗ್ಗೆ ಇಲಾಖೆ ಗಮನದಲ್ಲಿದೆ. ಸರಕಾರಿ ನಿವೇಶನ ಇಲ್ಲದ ಕಾರಣ ಸ್ವಂತ ಕಟ್ಟಡಕ್ಕೆ ಅನುದಾನ ಮಂಜೂರಾತಿಗೆ ಸಮಸ್ಯೆಯಾಗಿದೆ. ಸ್ವಂತ ಕಟ್ಟಡವಿಲ್ಲದಿದ್ದರೂ ಸಮೀಪದ ಸರಕಾರಿ ಶಾಲೆಗಳಲ್ಲಿ, ಸಮುದಾಯ ಭವನಗಳಲ್ಲಿ ಅಂಗನವಾಡಿ ಕೇಂದ್ರ ನಡೆಸಲು ಅವಕಾಶವಿದೆ. ಎಲ್ಲಾದರೂ ಸರಕಾರಿ ಜಾಗವಿದ್ದರೆ ಗುರುತಿಸಿ, ಕಟ್ಟಡಕ್ಕೆ ಪ್ರಯತ್ನಿಸಲಾಗುವುದು.
– ಶ್ವೇತಾ,ಶಿಶು ಅಭಿವೃದ್ಧಿ
ಯೋಜನಾಧಿಕಾರಿ (ಪ್ರಭಾರ), ಕುಂದಾಪುರ

- ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next