ಮೊಳಕಾಲ್ಮೂರು: ಚಿತ್ರದುರ್ಗ ಹಾಗೂ ಬಳ್ಳಾರಿ ಜಿಲ್ಲೆ ಗಡಿ ಭಾಗದ ಮೊಳಕಾಲ್ಮೂರು ತಾಲೂಕಿನ ವಡೇರಹಳ್ಳಿ ಗ್ರಾಮದ ಬಳಿ ಕೋಟ್ಯಂತರ ರೂ. ಮೌಲ್ಯದ ಗಾಂಜಾ ಬೆಳೆಯನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ಸುಮಾರು 4.20 ಎಕರೆ ಪ್ರದೇಶವನ್ನು ಲೀಸ್‌ಗೆ ಪಡೆದು ಒಂದು ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ ಗಾಂಜಾವನ್ನು ಬೆಳೆದಿರುವುದು ಪತ್ತೆಯಾಗಿದ್ದು, ಜಮೀನಿನ ಮಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಾಂಜಾ ಬೆಳೆದ ಬಳ್ಳಾರಿ ಮೂಲದ ವ್ಯಕ್ತಿ ನಾಪತ್ತೆಯಾಗಿದ್ದಾನೆ. ತೋಟಗಾರಿಕೆ ಬೆಳೆ ಮಾದರಿಯಲ್ಲೇ ಗಾಂಜಾ ಬೆಳೆಯಲಾಗಿದ್ದು, ಪೊಲೀಸರು ಸಹಿತ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.
ಲೀಸ್‌ಗೆ ನೀಡಿದ್ದ ಜಮೀನು
ಈ ಜಮೀನನ್ನು ವರ್ಷಕ್ಕೆ ಒಂದು ಲಕ್ಷ ರೂ.ಗೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಅಂತಾಪುರ ಗ್ರಾಮದ ರುದ್ರೇಶ, ಕೂಡ್ಲಗಿ ತಾಲೂಕು ಮಹದೇವಪುರದ ಸಮಂತ ಗೌಡ ಎಂಬವರಿಗೆ ಲೀಸ್‌ಗೆ ನೀಡಲಾಗಿತ್ತು. ಇಲ್ಲಿ ರುದ್ರೇಶನೇ ಗಾಂಜಾ ಬೆಳೆದಿದ್ದಾನೆ ಎಂಬ ವಿಚಾರ ಬಯಲಾಗಿದೆ. ಆತ ನಾಪತ್ತೆಯಾಗಿದ್ದು, ಶೋಧ ಮುಂದುವರಿದಿದೆ ಎಂದು ಸಿಪಿಐ ಜಿ.ವಿ. ಉಮೇಶ್ ತಿಳಿಸಿದ್ದಾರೆ.
ಗಾಂಜಾ ಬೆಳೆ ಕಟಾವಿನ ಹಂತಕ್ಕೆ ಬಂದಿದೆ. ಗಿಡದಲ್ಲಿ ಬೀಜಗಳನ್ನು ಮತ್ತು ಎಲೆಗಳನ್ನು ಒಣಗಿಸಲಾಗಿದೆ. ಒಂದು ಕೆಜಿ ಅಂದಾಜು 10 ಸಾ. ರೂ. ಬೆಲೆಗೆ ಮಾರಾಟವಾಗಲಿದ್ದು, ಸುಮಾರು 4.20 ಎಕರೆ ಜಮೀನಿನಲ್ಲಿನ ಗಾಂಜಾ ಒಂದು ಕೋ. ರೂ.ಗಿಂತ ಹೆಚ್ಚು ಮೌಲ್ಯದ್ದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶ್ರೀ ಕೆಮಲೆಸಿದ್ದೇಶ್ವರಸ್ವಾಮಿ ದೇವಸ್ಥಾನದ ಪೀಠಾಧಿ ಪತಿ ಶ್ರೀ ಮಂಗಲ್‌ನಾಥ್ ಸ್ವಾಮೀಜಿ ,ಕಂದಾಯ ಮತ್ತು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.