ಮುಂಬೈ: 2006ರ ಮಾಲೇಗಾಂವ್ ಸರಣಿ ಬಾಂಬ್ ಸ್ಫೋಟ ಪ್ರಕರಣದ ನಾಲ್ವರು ಆರೋಪಿಗಳಿಗೆ ಬಾಂಬೆ ಹೈಕೋರ್ಟ್ ಶುಕ್ರವಾರ ಷರತ್ತುಬದ್ಧ ಜಾಮೀನು ನೀಡಿದೆ.
ಮಾಲೇಗಾಂವ್ ಸರಣಿ ಬಾಂಬ್ ಸ್ಫೋಟದ ಆರೋಪಿಗಳಾದ ಧಾನ್ ಸಿಂಗ್, ಲೋಕೇಶ್ ಶರ್ಮಾ, ಮನೋಹರ್ ನರ್ ವಾರಿಯಾ ಮತ್ತು ರಾಜೇಂದ್ರ ಚೌಧರಿಗೆ ಹೈಕೋರ್ಟ್ ವಿಭಾಗೀಯ ಪೀಠದ ಜಸ್ಟೀಸ್ ಐಎ ಮಹಾಂತಿ ಮತ್ತು ಜಸ್ಟೀಸ್ ಎಎಂ ಬದಾರ್ ಜಾಮೀನು ನೀಡಿರುವುದಾಗಿ ವರದಿ ತಿಳಿಸಿದೆ.
ಜಾಮೀನು ನೀಡಬೇಕೆಂಬ ಅರ್ಜಿಯನ್ನು ಪುರಸ್ಕರಿಸಿರುವುದಾಗಿ ಹೇಳಿರುವ ಪೀಠ, ತಲಾ 50 ಸಾವಿರ ರೂಪಾಯಿ ಬಾಂಡ್ ಮೇಲೆ ಜಾಮೀನು ನೀಡಲಾಗಿದೆ. ವಿಚಾರಣೆ ವೇಳೆ ವಿಶೇಷ ನ್ಯಾಯಾಲಯಕ್ಕೆ ತಪ್ಪದೆ ಹಾಜರಾಗಬೇಕು, ಯಾವುದೇ ಕಾರಣಕ್ಕೂ ಸಾಕ್ಷ್ಯಗಳ ನಾಶ ಹಾಗೂ ಸಾಕ್ಷಿದಾರರ ಮೇಲೆ ಪ್ರಭಾವ ಬೀರಬಾರದು ಎಂದು ತಿಳಿಸಿದೆ.
ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ನಾಲ್ವರನ್ನೂ 2013ರಲ್ಲಿ ಬಂಧಿಸಲಾಗಿತ್ತು. 2016ರ ಜೂನ್ ನಲ್ಲಿ ಜಾಮೀನು ನೀಡುವಂತೆ ಕೋರಿ ವಿಶೇಷ ಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನಂತರ ನಾಲ್ವರು ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.
2006ರ ಸೆಪ್ಟೆಂಬರ್ 8ರಂದು ಮಾಲೇಗಾಂವ್ ನ ಹಮಿದಿಯಾ ಮಸೀದಿ ಸಮಾಧಿ ಹೊರಭಾಗದಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ 37 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.