Advertisement

ವ್ಯಾಪಾರಿಯಿಂದ ಹಣ ದೋಚಿದ ಪ್ರಕರಣ : ಹನೂರು ಪೊಲೀಸರಿಂದ 4 ಮಂದಿ ಆರೋಪಿಗಳ ಬಂಧನ

05:47 PM Jan 18, 2021 | Team Udayavani |

ಹನೂರು (ಚಾಮರಾಜನಗರ): ಹಾಡಹಗಲೇ ಕಾರಿನಿಂದ ಡಿಕ್ಕಿ ಹೊಡೆಸಿ ವ್ಯಾಪಾರಿಯೊಬ್ಬರಿಂದ ಹಣ ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 4 ಜನ ಆರೋಪಿಗಳನ್ನು ಬಂಧಿಸುವಲ್ಲಿ ಹನೂರು ಪೊಲೀಸರು ಯಶಸ್ವಿಯಾಗಿದ್ದು ನಾಪತ್ತೆಯಾಗಿರುವ ಮತ್ತಿಬ್ಬರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

Advertisement

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮೈಲಾಂಡಳ್ಳಿ ಗ್ರಾಮದ ಮಂಜುನಾಥ್(28), ಮನು(21), ರಿತೇಶ್(21) ಮತ್ತು ಹನೂರು ತಾಲೂಕಿನ ಚಿಂಚಳ್ಳಿ ಗ್ರಾಮದ ಮಲ್ಲೇಶ್(23) ಎಂಬುವವರೇ ಬಂಧಿತ ಆರೋಪಿಗಳಾಗಿದ್ದು, ಹನೂರು ತಾಲೂಕಿನ ಭೈರನತ್ತ ಗ್ರಾಮದ ಶೇಖರ್(23), ಬಂಡಳ್ಳಿ ಗ್ರಾಮದ ಮಹೇಂದ್ರ (26) ಎಂಬುವವರೇ ತಲೆಮರೆಸಿಕೊಂಡಿರುವ ಆರೋಪಿಗಳಾಗಿದ್ದಾರೆ. ಈ 6 ಜನರ ತಂಡ ಜನವರಿ 10 ರಂದು ಹನೂರು ಪಟ್ಟಣದ ಹೊರವಲಯದ ಅರಣ್ಯ ಇಲಾಖಾ ನರ್ಸರಿ ಸಮೀಪ ವ್ಯಾಪಾರಿ ನಿತಿನ್ ಬೈಸಾನಿ ಎಂಬುವವರಿಗೆ ಕಾರಿನಿಂದ ಡಿಕ್ಕಿ ಹೊಡೆದು 1.75ಲಕ್ಷ ಹಣ ದೋಚಿದ್ದರು. ಈ ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ:ಕರ್ನಾಟಕದ ಒಂದಿಂಚು ಭೂಮಿಯನ್ನು ಬಿಟ್ಟು ಕೊಡೆವು : ಉದ್ಧವ್ ಠಾಕ್ರೆ ಹೇಳಿಕೆಗೆ BSY ಖಂಡನೆ

ಈ ಪ್ರಕರಣದ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್, ಹೆಡಚ್ಚುವರಿ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣನವರ್ ಮತ್ತು ಡಿವೈಎಸ್ಪಿ ನಾಗರಾಜು ಮಾರ್ಗದರ್ಶನದಲ್ಲಿ ಕಾರ್ಯಾಚರಣೆಗಿಳಿದ ಪೊಲೀಸರು ಭಾನುವಾರ ಪ್ರಕರಣದ ಆರೋಪಿ ಮಲ್ಲೇಶ್ ಅವರ ತೋಟದ ಮನೆಯ ಮೇಲೆ ದಾಳಿ ನಡೆಸಿದಾಗ 4 ಜನ ಆರೋಪಿಗಳನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ 1 ಟಾಟಾ ಇಂಡಿಕಾ ಕಾರು, 3 ಬೈಕು, 2 ಮೊಬೈಲ್ ಫೋನ್ ಮತ್ತು 25ಸಾವಿರ ನಗದನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನಾಪತ್ತೆಯಾಗಿರುವ ಇನ್ನಿಬ್ಬರ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

ದಾಳಿಯಲ್ಲಿ ರಾಮಾಪುರ ವೃತ್ತ ನಿರೀಕ್ಷಕ ನಂಜುಂಡಸ್ವಾಮಿ, ಪಿಎಎಸ್‍ಐ ಮಂಜುನಾಥ್ ಪ್ರಸಾದ್, ನಾಗೇಶ್, ಎಎಸ್‍ಐ ರಾಜಶೇಖರ್ ಅರಸ್, ಮುಖ್ಯ ಪೇದೆ ಸೈಯದ್ ಜಮೀಲ್ ಅಹಮ್ಮದ್, ಪೇದೆಗಳಾದ ಕಾಮರಾಜು, ಲಿಯಾಖತ್‍ಅಲಿಖಾನ್, ಚಂದ್ರಶೇಖರ್, ಶಿವಕುಮಾರ್‍ಸ್ವಾಮಿ, ರಾಘವೇಂದ್ರ, ಚೇತನ್‍ಕುಮಾರ್, ಚಾಲಕರಾದ ಶಿವಕುಮಾರ್, ಸಿದ್ಧಾರ್ಥ್ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next