Advertisement

ಇಎಸ್‌ಐ ಆಸ್ಪತ್ರೆ ಸ್ಥಾಪನೆಗೆ 4.80 ಕೋಟಿ ಮಂಜೂರು

04:44 PM Sep 28, 2022 | Team Udayavani |

ಕೋಲಾರ: ಸಾವಿರಾರು ಕಾರ್ಮಿಕರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ನರಸಾಪುರ ಕೈಗಾರಿಕಾ ಪ್ರದೇಶದ ಐದು ಎಕರೆ ಪ್ರದೇಶದಲ್ಲಿ ಸುಸಜ್ಜಿತ ಇಎಸ್‌ಐ ಆಸ್ಪತ್ರೆ ನಿರ್ಮಿಸಲು ಮೊದಲ ಹಂತವಾಗಿ 4.80 ಕೋಟಿ ರೂ. ಮಂಜೂರು ಮಾಡಿಸಿರುವುದಾಗಿ ಸಂಸದ ಎಸ್‌.ಮುನಿಸ್ವಾಮಿ ತಿಳಿಸಿದರು.

Advertisement

ಅ.2 ಬೃಹತ್‌ ರಕ್ತದಾನ ಶಿಬಿರದ ಪೂರ್ವಭಾವಿ ಯಾಗಿ ತಾಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ ವಿಸ್ಟ್ರಾನ್‌ ಕಂಪನಿ ಸಭಾಂಗಣದಲ್ಲಿ ನರಸಾಪುರ, ವೇಮಗಲ್‌, ಮಾಲೂರು ಕೈಗಾರಿಕಾ ಪ್ರದೇಶಗಳಲ್ಲಿನ ಕೈಗಾರಿಕೆಗಳ ಪ್ರತಿನಿಧಿಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಮಿಕರ ಆರೋಗ್ಯ ರಕ್ಷಣೆಗೆ ಒತ್ತು ನೀಡಲು ಇಎಸ್‌ಐ ಆಸ್ಪತ್ರೆಯ ಅಗತ್ಯತೆ ಮನಗಂಡು ಸರ್ಕಾರದ ಮೇಲೆ ಒತ್ತಡ ಹಾಕಿ ಇಲ್ಲಿನ ಐದು ಎಕರೆ ಪ್ರದೇಶದಲ್ಲಿ ಆಸ್ಪತ್ರೆ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿ, ಕಾರ್ಮಿಕ ಸ್ನೇಹಿ ವಾತಾವರಣ ಕೈಗಾರಿಕೆಗಳಲ್ಲಿ ಸೃಷ್ಟಿಯಾದರೆ ಯಾವುದೇ ಪ್ರತಿಭಟನೆ, ಧರಣಿಯಂತಹ ಸಮಸ್ಯೆಗಳು ಎದುರಾಗುವುದಿಲ್ಲ ಎಂದು ಹೇಳಿದರು.

ಕೈಗಾರಿಕೆಗಳವರು ತಮ್ಮ ಸಿಎಸ್‌ಆರ್‌ ನಿಧಿಯನ್ನು ಈ ಭಾಗದ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಬಳಸಲು ಮನವಿ ಮಾಡಿದ ಅವರು, ನರಸಾಪುರ ಕೈಗಾರಿಕಾ ಪ್ರದೇಶವನ್ನು ಹಸಿರಾಗಿಸಲು ಪ್ರತಿ ಕೈಗಾರಿಕೆಯಿಂದ ಒಂದಷ್ಟು ಹಣ್ಣಿನ ಗಿಡಗಳನ್ನು ನೆಟ್ಟು ಪೋಷಿಸಲು ಮನವಿ ಮಾಡಿದರು. ಬೆಂಗಳೂರಿನಲ್ಲಿ ಕೈಗಾರಿಕೆ ಸ್ಥಾಪಿಸಲು ಜಮೀನಿನ ಬೆಲೆ ಹೆಚ್ಚು ಹಾಗೂ ಟ್ರಾಫಿಕ್‌ ಸಮಸ್ಯೆ ಇದೆ. ಆದರೆ, ನರಸಾಪುರ ಕೈಗಾರಿಕಾ ಪ್ರದೇಶ ರಾಷ್ಟ್ರೀಯ ಹೆದ್ದಾರಿ, ಎಕ್ಸ್‌ಪ್ರೆಸ್‌ ಕಾರಿಡಾರ್‌ಗೆ ಹೊಂದಿಕೊಂಡಿದ್ದು, ಉದ್ಯಮಗಳ ಸ್ಥಾಪನೆಗೆ ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ರಕ್ತದಾನ ಶಿಬಿರಕ್ಕೆ ಪಟ್ಟಿಸಲ್ಲಿಸಿ;ತಾಕೀತು: ಜಿಲ್ಲೆಯಲ್ಲಿ ಲಿಮ್ಕಾ ದಾಖಲೆಯ ಯೋಗ ದಿನಾಚರಣೆ, ರಾಷ್ಟ್ರಮಟ್ಟದ ದಾಖಲೆಯ ರಾಷ್ಟ್ರಧ್ವಜಾರೋಹಣ ನಡೆಸಿ ಇತಿಹಾಸ ಸೃಷ್ಟಿಸಲಾಗಿದೆ, ಇದೀಗ ಬೃಹತ್‌ ರಕ್ತದಾನ ಶಿಬಿರ ನಡೆಸುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಲು ಕಂಪನಿಗಳ ಕಾರ್ಮಿಕರ ಸಹಕಾರ ಕೋರಿದರು. ಸ್ವಯಂಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗುವ ಕಾರ್ಮಿಕರ ಪಟ್ಟಿಯನ್ನು ಸಿದ್ದಪಡಿಸಿ ಸೆ.28 ರ ಸಂಜೆಯೊಳಗೆ ತಮಗೆ ತಲುಪಿಸುವಂತೆ ತಾಕೀತು ಮಾಡಿದ ಅವರು, ಪ್ರತಿ ಕೈಗಾರಿಕಾವಾರು ಪ್ರತಿನಿಧಿಗಳಿಂದ ನೌಕರರ ಸಂಖ್ಯೆ, ರಕ್ತದಾನ ನೀಡಲು ಬರುವವರ ಕುರಿತ ಅಂಕಿ ಅಂಶ ಸಂಗ್ರಹಿಸಿ, ನಿಮ್ಮ ಕಂಪನಿಗಳ ಕಾರ್ಮಿಕರನ್ನು ನೀವೇ ಅ.2 ರಂದು ನಿಮ್ಮ ವಾಹನದಲ್ಲೇ ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆ ಕರೆತರಲು ಮನವಿ ಮಾಡಿದರು.

Advertisement

ವಿಸ್ಟ್ರಾನ್‌ ಕಂಪನಿ ಎಂಡಿ ಎಂ.ನಾಗರಾಜನ್‌ ಮಾತನಾಡಿ, ರಕ್ತದಾನದಂತಹ ಶ್ರೇಷ್ಠ ಕಾರ್ಯಕ್ಕೆ ನಮ್ಮ ಕಂಪನಿ ಸೇರಿದಂತೆ ಎಲ್ಲಾ ಉದ್ಯಮಿಗಳು ಸಹಕಾರ ನೀಡಲು ಸಿದ್ಧರಿದ್ದು, ನಾಳೆ ಸಂಜೆಯೊಳಗೆ ರಕ್ತದಾನ ಮಾಡುವವರ ಪಟ್ಟಿ ಸಿದ್ದಪಡಿಸಿ ಒದಗಿಸುವ ಭರವಸೆ ನೀಡಿದರು.

ವಿಸ್ಟ್ರಾನ್‌ ಸೀನಿಯರ್‌ ಮ್ಯಾನೇಜರ್‌ ಹಾಗೂ ಇಆರ್‌ ಮಂಜುನಾಥ್‌ ಮಾತನಾಡಿ, ವಿಸ್ಟ್ರಾನ್‌ ಕಂಪನಿ ನೌಕರರಲ್ಲಿ ರಕ್ತದಾನ ನೀಡುವವರ ಪಟ್ಟಿ ಸಿದ್ದಪಡಿಸುವ ಕಾರ್ಯ ಪ್ರಗತಿಯಲ್ಲಿದ್ದು ಸಂಜೆ ವೇಳೆಗೆ ಒದಗಿಸುವುದಾಗಿ ನುಡಿದರು. ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಷರೀಫ್‌, ವೇಮಗಲ್‌ ವೃತ್ತ ನಿರೀಕ್ಷಕ ಶಿವರಾಜ್‌, ಕೈಗಾರಿಕಾ ಇಲಾಖೆ ಉಪನಿರ್ದೇಶಕ ಶ್ರೀನಿವಾಸರೆಡ್ಡಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಶಬಾನಾ ಅಜ್ಮಿ, ಮಾಲೂರು ಕೈಗಾರಿಕೆಗಳ ಅಸೋಸಿಯೇಷನ್‌ ಕಾರ್ಯದರ್ಶಿ ಕೇಶವ್‌ ಸೇರಿದಂತೆ ಕೈಗಾರಿಕಾ ಪ್ರತಿನಿಧಿಗಳಿದ್ದರು.

ಅಂಗಾಂಗ ದಾನ ನೋಂದಣಿಗೂ ಒತ್ತು: ಜಿಲ್ಲೆಯಲ್ಲಿ ಪ್ರತಿ ತಿಂಗಳಿಗೆ 1200 ಯೂನಿಟ್‌ ರಕ್ತದ ಅಗತ್ಯತೆ ಇದೆ. ಇದರ ಜತೆಗೆ ಸಮಾಜದ ಪ್ರತಿಯೊಬ್ಬರೂ. ಅಂಗಾಂಗದಾನಕ್ಕೆ ನೋಂದಣಿ ಮಾಡಿಕೊಳ್ಳಲು ಅರಿವು ಮೂಡಿಸಲು ಕೋರಿದರು. ಅಂಗಾಂಗಗಳ ನಾಶದಿಂದ ಅನೇಕರು ದಾನಿಗಳತ್ತ ಮುಖ ಮಾಡಿ ಜೀವನ್ಮರಣಸ್ಥಿತಿಯಲ್ಲಿ ಕಾಯುತ್ತಿದ್ದಾರೆ, ಇಂತಹ ಸಂದರ್ಭದಲ್ಲಿ ಅಂಗಾಂಗ ನೀಡಿಕೆ ವ್ಯಾಪಾರವಾಗುವುದನ್ನು ತಪ್ಪಿಸಲು ಅಂಗಾಂಗದಾನಕ್ಕೆ ನೋಂದಣಿಗಾಗಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದು, ಎಲ್ಲರೂ. ರಕ್ತದಾನ ನಡೆಯುವ ಅ.2 ರಂದು ನೋಂದಾಯಿಸಲು ಮನವಿ ಮಾಡಿ, ಈ ನೋಂದಣಿ ಕಾರ್ಯಕ್ಕೆ 100 ಮಂದಿಯನ್ನು ನೇಮಿಸಲಾಗಿದೆ, ಇದರಲ್ಲಿ ಅಂಗಾಂಗ ದಾನಕ್ಕೆ 10 ಕೌಂಟರ್‌ ಇರಲಿದೆ ಎಂದರು. ಕೈಗಾರಿಕೆ ಇಲ್ಲವೆಂದರೆ, ಬ್ಲಾಕ್‌ಲೀಸ್ಟ್‌ಗೆ : ಕೆಐಡಿಬಿಯಿಂದ ಕೈಗಾರಿಕೆ ಸ್ಥಾಪಿಸುವ ಉದ್ದೇಶದಿಂದ ಜಮೀನು ಪಡೆದಿರುವ ಉದ್ಯಮಿಗಳು ಕೂಡಲೇ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಸ್ಥಳೀಯ ನಿರುದ್ಯೋಗಿ ಸಮಸ್ಯೆ ನಿವಾರಣೆ ಜತೆಗೆ ಅಭಿವೃದ್ಧಿಗೆ ಸಹಕರಿಸಬೇಕು, ಈ ಕಾರ್ಯಕ್ಕೆ ಮುಂದಾಗದಿದ್ದರೆ ಅಂತಹ ಜಮೀನನ್ನು ಬ್ಲಾಕ್‌ಲೀಸ್ಟ್‌ಗೆ ಸೇರಿಸುವುದಾಗಿ ಸಂಸದ ಮುನಿಸ್ವಾಮಿ ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next