ಬಂಟ್ವಾಳ: ಸಂಗಬೆಟ್ಟು ಗ್ರಾಮದ ಕೆರೆಬಳಿಯ ಮನೆಯೊಂದಕ್ಕೆ ನುಗ್ಗಿದ ಕಳ್ಳರು, ಚಿನ್ನಾಭರಣ ಹಾಗೂ ನಗದು ಸಹಿತ ಸುಮಾರು 4.65 ಲ.ರೂ. ಮೌಲ್ಯದ ಸೊತ್ತನ್ನು ಕಳವು ಮಾಡಿರುವುದು ಬುಧವಾರ ಬೆಳಕಿಗೆ ಬಂದಿದೆ.
ಕೆರೆಬಳಿ ನಿವಾಸಿ ನಝೀರ್ ಅಹ್ಮದ್ ಅವರು ಕಳಸದಲ್ಲಿ ದಿನಸಿ ಅಂಗಡಿ ಹೊಂದಿದ್ದು, ವಾರಕ್ಕೆ ಒಂದು ಬಾರಿ ಮನೆಗೆ ಬರುತ್ತಾರೆ. ಜ. 14ರಿಂದ 17ರ ವರೆಗೆ ಕಳಸದ ಶ್ರೀ ಚೆನ್ನಕೇಶವ ದೇವಸ್ಥಾನದ ಜಾತ್ರೆಯ ಹಿನ್ನೆಲೆಯಲ್ಲಿ ಮನೆಯವರೆಲ್ಲರನ್ನೂ ಜ. 14ರ ಸಂಜೆ ಅಲ್ಲಿಗೆ ಕರೆಸಿಕೊಂಡಿದ್ದರು.
ಬುಧವಾರ ಬೆಳಗ್ಗೆ ನಝೀರ್‌ನ ತಮ್ಮ ಬಶೀರ್ ಅವರು ಕರೆ ಮಾಡಿ, ಮನೆಯ ಬಾಗಿಲು ತೆರೆದಿದ್ದು, ಕಳವು ನಡೆದಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ ಮನೆಮಂದಿ ಬಂದು ನೋಡಿದಾಗ ಕಳವು ನಡೆದಿದ್ದುದು ತಿಳಿದು ಬಂತು.
ಮುಂಬಾಗಿಲಿನ ಬೀಗ ಮುರಿದು ನುಗ್ಗಿದ್ದ ಕಳ್ಳರು, ಕಪಾಟಿನ ಬಾಗಿಲು ಮುರಿದು ಅದರಲ್ಲಿದ್ದ ಸುಮಾರು 2.50 ಲ. ರೂ.ಮೌಲ್ಯದ 12.50 ಪವನ್ ಚಿನ್ನ, 2 ಲ.ರೂ.ನಗದು ಹಾಗೂ 15 ಸಾ. ರೂ. ಮೌಲ್ಯದ ವಾಚನ್ನು ಕದ್ದೊಯ್ದಿದ್ದಾರೆ ಎಂದು ನಝೀರ್ ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಬಂಟ್ವಾಳ ಸಿಐ ಟಿ.ಡಿ. ನಾಗರಾಜ್, ಗ್ರಾಮಾಂತರ ಎಸ್‌ಐ ಪ್ರಸನ್ನ ಎಂ.ಎಸ್., ಎಎಸ್‌ಐ ಕಲೈಮಾರ್, ಹೆಡ್ ಕಾನ್‌ಸ್ಟೆಬಲ್ ಸುರೇಶ್, ಸಿಬಂದಿ ಆದರ್ಶ್, ನಾಗನಾಥ್ ಹಾಗೂ ಮನೋಜ್ ಅವರು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.