Advertisement

4.5 ಕೋ.ರೂ. ವೆಚ್ಚದಲ್ಲಿ ಕುಂದಾಪುರ ಬಸ್‌ ಡಿಪೋ ನವೀಕರಣ

11:32 PM Jul 01, 2019 | Sriram |

ಕುಂದಾಪುರ: ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್‌ ಡಿಪೋದ ಕಟ್ಟಡ ಹಾಗೂ ಎಲ್ಲ ಸೌಕರ್ಯಗಳನ್ನು 4.5 ಕೋ.ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಈಗಾಗಲೇ ಇಲಾಖೆಯು ಯೋಜನೆ ಸಿದ್ಧಪಡಿಸಿದ್ದು, ಮುಂದಿನ ತಿಂಗಳಾಂತ್ಯದೊಳಗೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆಯಿದೆ.


Advertisement

ಮುಂದಿನ ತಿಂಗಳೊಳಗೆ ಅಂತಿಮ
ಕುಂದಾಪುರದ ಕೆಎಸ್‌ಆರ್‌ಟಿಸಿ ಘಟಕದ ಕಟ್ಟಡ ಸಹಿತ ಬಸ್‌ ಬೇ, ಇಲ್ಲಿನ ಎಲ್ಲ ರೀತಿಯ ಸೌಕರ್ಯಗಳನ್ನು ಪುನರ್‌ ನವೀಕರಿಸಲು ರಾಜ್ಯ ರಸ್ತೆ ಸಾರಿಗೆ ನಿಗಮದಿಂದ 4.5 ಕೋ.ರೂ. ಮಂಜೂರಾಗಿತ್ತು. ಈ ವಿಚಾರವನ್ನು ಕಳೆದ ನವೆಂಬರ್‌ನಲ್ಲಿ ಕುಂದಾಪುರಕ್ಕೆ ಭೇಟಿ ನೀಡಿದ್ದ ರಾಜ್ಯ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಅವರೇ ಘೋಷಿಸಿದ್ದರು. ಆ ಬಳಿಕ ಚುನಾವಣಾ ನೀತಿ ಸಂಹಿತೆ ಸಹಿತ ಇತರೆ ಕಾರಣಗಳಿಂದ ವಿಳಂಬವಾಗಿತ್ತು. ಆದರೆ ಈಗ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದ್ದು, ಮುಂದಿನ ತಿಂಗಳೊಳಗೆ ಅಂತಿಮವಾಗಲಿದೆ.

ಹೆಚ್ಚು ಬಸ್‌ ನಿಲುಗಡೆ
ಈಗ ಸುಮಾರು 56-60 ಬಸ್‌ಗಳನ್ನು ಈ ಘಟಕದಲ್ಲಿ ಪ್ರತಿ ನಿತ್ಯ ನಿಲ್ಲಿಸಲಾಗುತ್ತದೆ. ಹೊಸದಾಗಿ ಡಿಪೋ ನವೀಕರಣಗೊಂಡ ಬಳಿಕ 80ಕ್ಕೂ ಹೆಚ್ಚು ಬಸ್‌ಗಳ ನಿಲುಗಡೆಗೆ ಜಾಗ ಸಿಗಲಿದೆ ಎನ್ನುವ ಮಾಹಿತಿ ಸಿಕ್ಕಿದೆ.

ಕುಂದಾಪುರದಿಂದ ಬೆಂಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಹುಬ್ಬಳ್ಳಿ ಸಹಿತ ಹೆಚ್ಚಿನ ಎಲ್ಲ ಜಿಲ್ಲೆಗಳಿಗೂ ಬಸ್‌ ಸಂಪರ್ಕವಿದೆ. ಇನ್ನು ಬಸ್‌ ಸಂಪರ್ಕವಿಲ್ಲದ ಕೆಲವು ಕಡೆಗಳಿಗೆ ಹೊಸದಾಗಿ ಬಸ್‌ ಆರಂಭಿಸಲು ಕೂಡ ಇದು ಅನುಕೂಲವಾಗಲಿದೆ.

ಏನೇನು ಇರಲಿದೆ?
ಬಸ್ರೂರು ಮೂರುಕೈ ಸಮೀಪ ಈಗಿರುವ ಕೆಎಸ್‌ಆರ್‌ಟಿಸಿ ಡಿಪೋ ಜಾಗದಲ್ಲಿಯೇ ಅದನ್ನು ಕೆಡವಿ ಹೊಸದಾಗಿ ಕಟ್ಟಡ, ಬಸ್‌ ನಿಲ್ಲಿಸುವ ಬೇ, ಹೊಸ ಜನರೇಟರ್‌, ಚಾಲಕ – ನಿರ್ವಾಹಕರಿಗೆ ವಿಶ್ರಾಂತಿ ಕೊಠಡಿ, ವಾಷಿಂಗ್‌ ರ್‍ಯಾಂಪ್‌, ಆವರಣ ಗೋಡೆ ಸಹ ಹೊಸದಾಗಿ ನಿರ್ಮಾಣವಾಗಲಿದೆ.

Advertisement

ಬೈಂದೂರು ಡಿಪೋ ವಿಳಂಬ
ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಬೈಂದೂರಿನಲ್ಲಿ ಬಸ್‌ ಡಿಪೋ ಆರಂಭಕ್ಕೆ ಹಸುರು ನಿಶಾನೆ ಸಿಕ್ಕಿದ್ದು, ಆದರೆ ಅಲ್ಲಿ ಬಸ್‌ ಡಿಪೋಗೆ ಬೇಕಾದ ಜಾಗದ ತಕರಾರು ಇರುವುದರಿಂದ ಇನ್ನೂ ಕೂಡ ಡಿಪೋ ಆರಂಭವಾಗಿಲ್ಲ. ಹಿಂದೆ ಬೈಂದೂರು ಶಾಸಕರಾಗಿದ್ದ ಗೋಪಾಲ ಪೂಜಾರಿಯವರು ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿದ್ದ ವೇಳೆ ಬೈಂದೂರು ಹಾಗೂ ಕಾರ್ಕಳಕ್ಕೆ ಬಸ್‌ ಡಿಪೋ ಘೋಷಿಸಿದ್ದರು. ಇದಕ್ಕಾಗಿ 5 ಕೋ.ರೂ. ಅನುದಾನ ಕೂಡ ಮಂಜೂರಾಗಿದೆ. ಆದರೆ ಭೂವಿವಾದದಿಂದಾಗಿ ಡಿಪೋ ಆರಂಭ ಮತ್ತಷ್ಟು ತಡವಾಗುವ ಸಾಧ್ಯತೆಗಳಿವೆ.

ಶೀಘ್ರ ನವೀಕರಣ ಕಾರ್ಯ
ಈಗಾಗಲೇ ಕುಂದಾಪುರ ಕೆಎಸ್‌ಆರ್‌ಟಿಸಿ ಘಟಕದ ಪುನರ್‌ ನವೀಕರಣ ಸಂಬಂಧ ಕರಡು ಯೋಜನೆ ಸಿದ್ಧಪಡಿಸಿ, ನಿಗಮಕ್ಕೆ ಕಳುಹಿಸಲಾಗಿದೆ. 4.5 ಕೋ.ರೂ. ವೆಚ್ಚದಲ್ಲಿ ಡಿಪೋ ಅಭಿವೃದ್ಧಿಗೊಳ್ಳಲಿದೆ. ಈಗ ಟೆಂಡರ್‌ ಕರೆಯಲಾಗಿದ್ದು, ಮುಂದಿನ ತಿಂಗಳೊಳಗೆ ಟೆಂಡರ್‌ ಪ್ರಕ್ರಿಯೆ ಅಂತಿಮಗೊಳ್ಳಲಿದೆ. ಆ ಬಳಿಕ ನವೀಕರಣ ಕಾರ್ಯ ಆರಂಭವಾಗಲಿದೆ.
-ವಾಸುದೇವ ಗುಡಿಗಾರ್‌, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌,
ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗ

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next