ಕರಾಚಿ: ಮಧ್ಯಮ ಕ್ರಮಾಂಕದ ಬ್ಯಾಟರ್ ಹ್ಯಾರಿ ಬ್ರೂಕ್ ಅವರ ಹ್ಯಾಟ್ರಿಕ್ ಶತಕ ಸಾಹಸದಿಂದ ಕರಾಚಿ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 50 ರನ್ನುಗಳ ಇನಿಂಗ್ಸ್ ಮುನ್ನಡೆ ಸಾಧಿಸಿದೆ.
ಪಾಕಿಸ್ತಾನದ 304 ರನ್ನುಗಳ ಮೊದಲ ಇನಿಂಗ್ಸ್‌ಗೆ ಉತ್ತರವಾಗಿ 354 ರನ್ ಗಳಿಸಿದೆ. ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಪಾಕಿಸ್ತಾನದ ಸ್ಕೋರ್ ನೋಲಾಸ್ 21. ಮೊದಲೆರಡೂ ಟೆಸ್ಟ್‌ಗಳನ್ನು ಸೋತು ಈಗಾಗಲೇ ಸರಣಿ ಕಳೆದುಕೊಂಡಿರುವ ಪಾಕ್ ಪಾಲಿಗೆ ಇದು ಪ್ರತಿಷ್ಠೆಯ ಪಂದ್ಯವಾಗಿದೆ.
ಇಂಗ್ಲೆಂಡ್ ಮೊದಲ ದಿನದಾಟದ ಅಂತ್ಯಕ್ಕೆ ಒಂದು ವಿಕೆಟಿಗೆ 7 ರನ್ ಮಾಡಿತ್ತು. ಹ್ಯಾರಿ ಬ್ರೂಕ್ ಅವರ ಶತಕ ಇಂಗ್ಲೆಂಡ್ ಸರದಿಯ ಆಕರ್ಷಣೆಯಾಗಿತ್ತು. ಇದು ಬ್ರೂಕ್ ಅವರ ಕೇವಲ 4ನೇ ಟೆಸ್ಟ್ ಆಗಿದ್ದು, ಈ ಸರಣಿಯ ಮೂರೂ ಟೆಸ್ಟ್ ಪಂದ್ಯಗಳಲ್ಲಿ ಶತಕ ಬಾರಿಸಿದ ಹಿರಿಮೆಗೆ ಪಾತ್ರರಾದರು. ರಾವಲ್ಪಿಂಡಿಯಲ್ಲಿ 153 ರನ್, ಮುಲ್ತಾನ್‌ನಲ್ಲಿ 108 ರನ್ ಹೊಡೆದ ಸಾಹಸ ಬ್ರೂಕ್ ಅವರದು.
ಕೀಪರ್ ಬೆನ್ ಫೋಕ್ಸ್ (64)-ಮಾರ್ಕ್ ವುಡ್ (35) 8ನೇ ವಿಕೆಟಿಗೆ 51 ರನ್, ರಾಬಿನ್ಸನ್ (29)-ಜಾಕ್ ಲೀಚ್ (ಔಟಾಗದೆ 9) ಅಂತಿಮ ವಿಕೆಟಿಗೆ 30 ರನ್ ಒಟ್ಟುಗೂಡಿಸುವ ಮೂಲಕ ಇಂಗ್ಲೆಂಡ್‌ಗೆ ಮಹತ್ವದ ಮುನ್ನಡೆ ತಂದಿತ್ತರು. ಪಾಕ್ ಪರ ಅಬ್ರಾರ್ ಅಹ್ಮದ್ ಮತ್ತು ನೌಮಾನ್ ಅಲಿ ತಲಾ 4 ವಿಕೆಟ್ ಉರುಳಿಸಿದರೂ ಇದಕ್ಕೆ ನೂರಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟರು.
ಸಂಕ್ಷಿಪ್ತ ಸ್ಕೋರ್: ಪಾಕಿಸ್ತಾನ-304 ಮತ್ತು ವಿಕೆಟ್ ನಷ್ಟವಿಲ್ಲದೆ 21. ಇಂಗ್ಲೆಂಡ್-354 (ಬ್ರೂಕ್ 111, ಫೋಕ್ಸ್ 64, ಪೋಪ್ 51, ವುಡ್ 35, ಅಬ್ರಾರ್ ಅಹ್ಮದ್ 150ಕ್ಕೆ 4, ನೌಮಾನ್ ಅಲಿ 126ಕ್ಕೆ 4).