Advertisement

396 ಅಂಗನವಾಡಿ ಕೇಂದ್ರಕ್ಕಿಲ್ಲ ಸ್ವಂತ ನೆಲೆ

09:22 AM Jul 09, 2019 | Team Udayavani |

ಕೊಪ್ಪಳ: ಪೂರ್ವ ಪ್ರಾಥಮಿಕ ಹಂತದಲ್ಲೇ ಅಂಗನವಾಡಿ ಮಕ್ಕಳಿಗೆ ಶಿಕ್ಷಣ ಸಿಗಬೇಕೆಂಬ ಕನಸು ಕಂಡಿರುವ ಸರ್ಕಾರಕ್ಕೆ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ನೆಲೆ ಒದಗಿಸಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಯಲ್ಲಿ ಈಗಲೂ ಮಸೀದಿ, ಮಂದಿರ, ಶಾಲೆ ಹಾಗೂ ಬಯಲು ಪ್ರದೇಶದಲ್ಲಿಯೇ ಕೇಂದ್ರ ನಡೆಸುವಂತಹ ಸ್ಥಿತಿ ಬಂದೊದಗಿದೆ.

Advertisement

ಹೌದು. ಜಿಲ್ಲೆಯಲ್ಲಿ 1850 ಅಂಗನವಾಡಿ ಕೇಂದ್ರಗಳು ಸರ್ಕಾರದಿಂದ ನಡೆಯುತ್ತಿವೆ. ಈ ಪೈಕಿ 1,258 ಕೇಂದ್ರಗಳಿಗೆ ಸ್ವಂತ ನೆಲೆಯಿದ್ದರೆ, ಇನ್ನೂ 396 ಅಂಗನವಾಡಿ ಕೇಂದ್ರಗಳಿಗೆ ಸ್ವಂತ ನೆಲೆ ಇಲ್ಲದಂತಹ ಸ್ಥಿತಿಯಿದೆ. ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಪ್ರತಿ ವರ್ಷವೂ ಕೋಟಿ ಕೋಟಿ ಅನುದಾನ ವಿನಿಯೋಗ ಮಾಡುತ್ತಿದೆ. ಆದರೆ ಮಕ್ಕಳು ನೆಮ್ಮದಿಯಿಂದ ಅಕ್ಷರ ಕಲಿಯಲು ಅವಕಾಶವನ್ನೇ ಮಾಡಿಕೊಡುತ್ತಿಲ್ಲ.

ಮಸೀದಿ, ಮಂದಿರದಲ್ಲಿ ಕೇಂದ್ರ: ಆಧುನಿಕ ಜಗತ್ತಿನಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕೆಂಬ ಮಾತು ಕೇಳುತ್ತಿದೆಯೇ ವಿನಃ ಅವರಿಗೆ ಅಗತ್ಯವಾಗಿ ಬೇಕಿರುವ ಸೌಕರ್ಯ ಕಲ್ಪಿಸಿಕೊಡುವಲ್ಲಿ ಹಿಂದೇಟು ಹಾಕುತ್ತಿದೆ. ಇನ್ನೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪೂರ್ವ ಪ್ರಾಥಮಿಕ ಕೇಂದ್ರಗಳನ್ನು ನೋಡಿದರೆ ನಿಜಕ್ಕೂ ಇಂತಹ ವಾತಾವರಣದಲ್ಲಿ ಮಕ್ಕಳು ಶಿಕ್ಷಣ ಪಡೆದರೆ ಭವಿಷ್ಯದಲ್ಲಿ ಉನ್ನತ ಸ್ಥಾನದಲ್ಲಿರುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಸರ್ಕಾರ ನಡೆಸುತ್ತಿರುವ ಅಂಗನವಾಡಿ ಕೇಂದ್ರಗಳನ್ನು ನೋಡಿದರೆ ಅಯ್ಯೋ.. ಸ್ಥಿತಿಯೇ ಎನ್ನುವಂತ ಮಾತುಗಳು ಸಹಜವಾಗಿಯೇ ಬರುತ್ತವೆ. ಜಿಲ್ಲೆಯಲ್ಲಿ ಈಗಲೂ ಮಂದಿರ, ಮಸೀದಿ, ಶಾಲೆ, ಮುರುಕಲು ಕೊಠಡಿ ಸೇರಿದಂತೆ ಬಯಲು ಪ್ರದೇಶದಲ್ಲೇ ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಲಾಗುತ್ತಿದೆ.

ಜಿಲ್ಲೆಯ 1850 ಕೇಂದ್ರಗಳ ಪೈಕಿ 1258 ಕೇಂದ್ರಕ್ಕೆ ನೆಲೆಯಿದ್ದರೆ, 396 ಕೇಂದ್ರಕ್ಕೆ ಸ್ವಂತ ನೆಲೆಯ ಅವಶ್ಯಕತೆಯಿದೆ. ಈ ಪೈಕಿ 62 ಕೇಂದ್ರಗಳಿಗೆ ಸರ್ಕಾರಿ ಜಮೀನು ಲಭ್ಯವಿದ್ದು, 5 ಕಡೆ ಶಾಲೆ ಆವರಣದಲ್ಲಿ ಸ್ಥಳಾವಕಾಶವಿದೆ. ಇನ್ನೂ 80 ಕಡೆ ನಿವೇಶನ ಖರೀದಿಗೆ ಭೂಮಿ ಲಭ್ಯತೆಯಿದೆ. ಪಕ್ಕಾ 249 ಕೇಂದ್ರಗಳಿಗೆ ನಿವೇಶನದ ಅವಶ್ಯಕತೆಯಿದೆ. ಆದರೆ ಸರ್ಕಾರದ ಮಟ್ಟದಲ್ಲಿ ಅಷ್ಟು ಕೇಂದ್ರಗಳಿಗೆ ಭೂಮಿ ಖರೀದಿಗೆ ಅನುದಾನದ ಕೊರತೆ, ಏಕ ಕಾಲಕ್ಕೆ ಬಿಡುಗಡೆಯಾಗುವಲ್ಲಿ ತೊಂದರೆ ಎನ್ನುವ ಮಾತು ಕೇಳಿ ಬಂದಿವೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಪ್ರತಿ ವರ್ಷ ಸಾವಿರಾರು ಕೋಟಿ ಅನುದಾನ ವಿನಿಯೋಗಿಸುತ್ತಿವೆ. ಮಕ್ಕಳ ಬಗೆಗೆ ದಾಖಲೆಗಳಲ್ಲಿ ಕಾಳಜಿ ತೋರುತ್ತಿದೆ. ಆದರೆ ಸ್ವಂತ ಕಟ್ಟಡ ನಿರ್ಮಿಸಿ ಉತ್ತಮ ಕಲಿಕೆಯ ವಾತಾವರಣ ನಿರ್ಮಿಸುವಲ್ಲಿ ಮುಂದಾಗುತ್ತಿಲ್ಲ. ಇಲ್ಲಿನ ಕೇಂದ್ರಗಳಿಗೆ ಸ್ವಂತ ನೆಲೆ ಕಲ್ಪಿಸುವಲ್ಲಿ ಇಚ್ಛಾಶಕ್ತಿಯ ಕೊರತೆಯೋ? ಅಥವಾ ಕೇಂದ್ರಗಳ ಬಗ್ಗೆ ಇರುವ ನಿರ್ಲಕ್ಷ್ಯವೋ ಎಂಬುದು ಸ್ಪಷ್ಟವಾಗುತ್ತಿಲ್ಲ.

Advertisement

ನಿವೇಶನ ಸಮಸ್ಯೆ ಅಂತಾರೆ?: ಇಲಾಖೆ ಅಧಿಕಾರಿಗಳು ಮಾತ್ರ ಅಂಗನವಾಡಿ ಕೇಂದ್ರ ಸ್ಥಾಪನೆಗೆ ನಿವೇಶನದ ಕೊರತೆಯೇ ನಮಗೆ ತುಂಬ ತಲೆನೋವಾಗಿದೆ ಎನ್ನುತ್ತಿದ್ದಾರೆ. ಎಲ್ಲಿ ಹುಡುಕಾಟ ನಡೆಸಿದರೂ ಜಾಗವೇ ಸಿಗುತ್ತಿಲ್ಲ. ದೂರದ ಪ್ರದೇಶದಲ್ಲಿ ಕೇಂದ್ರ ಆರಂಭಿಸಲು ಬರುವುದಿಲ್ಲ. ಆಯಾ ವಾರ್ಡಿನಲ್ಲೇ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆರಂಭಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಹೇಗೋ ಜಾಗದ ವ್ಯವಸ್ಥೆ ಮಾಡಬಹುದು. ಆದರೆ ನಗರ ಪ್ರದೇಶದಲ್ಲಿ ನಿವೇಶನಕ್ಕಾಗಿ ದೊಡ್ಡ ಸಮಸ್ಯೆಯಿದೆ.

ಜಿಲ್ಲೆಯಲ್ಲಿ ಅಗತ್ಯ ನಿವೇಶನ, ಸರ್ಕಾರಿ ಜಾಗ ಹಾಗೂ ಖರೀದಿಗೆ ಲಭ್ಯ ಭೂಮಿಯ ಕುರಿತು ಸರ್ಕಾರಕ್ಕೆ ವರದಿ ಮಾಡಿವೆ ಎನ್ನುವ ಮಾತನ್ನಾಡುತ್ತಿದ್ದಾರೆ.

ಅನುದಾನವಿಲ್ಲ: ಕೇಂದ್ರಗಳಿಗೆ ಸ್ವಂತ ನೆಲೆ ಕಲ್ಪಿಸಲು ಸರ್ಕಾರ ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ಇತರೆಡೆ ಮ್ಯಾಚಿಂಗ್‌ ಅನುದಾನವನ್ನು ಕೊಡುತ್ತಾ ಬಂದಿದೆ. ಹೀಗಾಗಿ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಎನ್ನುವ ಸ್ಥಿತಿಗೆ ಬಂದಿದೆ. ಒಂದೆ ಕಡೆ ಅನುದಾನ ಮಂಜೂರು ಮಾಡಿ ಕಟ್ಟಡಕ್ಕೆ ಜಾಗ ಹುಡುಕಿ ನಿರ್ಮಿಸಬೇಕಿದೆ ಎನ್ನುತ್ತಿದ್ದಾರೆ ಜಿಲ್ಲೆಯ ಜನತೆ.

 

•ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next