Advertisement

ಸರ್ಕಾರವನ್ನೇ ಕಿತ್ತೂಗೆದ “ಮೇಳಿ ಕಾಳಗ’ಕ್ಕೆ 39ವರ್ಷ

11:06 PM Jul 20, 2019 | Lakshmi GovindaRaj |

ನರಗುಂದ: 1980ರಲ್ಲಿ ರಾಜ್ಯ ಸರ್ಕಾರವನ್ನೇ ಕಿತ್ತೂಗೆದ “ಮೇಳಿ ಕಾಳಗ’ ಎಂದೇ ಪ್ರತೀತಿ ಪಡೆದ ನರಗುಂದ ರೈತ ಬಂಡಾಯ ಗತಿಸಿ ಇಂದಿಗೆ 39 ವರ್ಷಗಳಾಗಿವೆ. 1980ರಲ್ಲಿ ನವಿಲುತೀರ್ಥ ಜಲಾಶಯ ಕಾಲುವೆ ನೀರು ರೈತರ ಭೂಮಿಗೆ ದೊರಕದಿದ್ದರೂ ಅಂದಿನ ಗುಂಡೂರಾವ್‌ ಸರ್ಕಾರ ಬೆಟರಮೆಂಟ್‌ ಲೆವಿ(ನೀರಿನ ಕರ ಆಕರಣೆ) ಜಾರಿಗೊಳಿಸಿತು. ನೀರು ಸಿಗದಿದ್ದರೂ ಕರ ಯಾಕೆ ಕಟ್ಟಬೇಕೆಂಬ ತಾರ್ಕಿಕ ನಿಲುವು ರೈತರ 31 ದಿನ ಚಳವಳಿಗೆ ನಾಂದಿ ಹಾಡಿತು.

Advertisement

ಅತ್ತ ನವಲಗುಂದದಲ್ಲೂ ಚಳವಳಿ ಶುರುವಾಯಿತು. 1980 ಜು.21ರಂದು ರೈತರು ನರಗುಂದದ ಅಂದಿನ ತಹಸೀಲ್ದಾರ್‌ ಎಸ್‌.ಎಫ್‌. ವರೂರ ಅವರಿಗೆ ಕಚೇರಿ ಪ್ರವೇಶ ನಿರಾಕರಿಸಿ ಬೋರಲಾಗಿ ಮಲಗಿದ್ದರು. ಆದರೆ ತಹಸೀಲ್ದಾರ್‌ ರೈತರನ್ನು ಲೆಕ್ಕಿಸದೇ ಅವರ ಮೇಲೆಯೇ ಹಾಯ್ದು ಕಚೇರಿ ಪ್ರವೇಶಿಸಿದ್ದು ಬಂಡಾಯಕ್ಕೆ ನಾಂದಿಯಾಯಿತು. ಒಬ್ಬ ಅಧಿಕಾರಿ ರೈತರನ್ನು ದಾಟಿಕೊಂಡು ಹೋಗಿದ್ದು ರೈತರ ಸಹನೆ ಕೆರಳಿಸಿತ್ತು.

ಬಡವನ ಕೋಪ ದವಡೆಗೆ ಮೂಲ’ ಎಂಬಂತೆ ಮೇಳಿ(ಕೃಷಿ ಪರಿಕರ) ಹಿಡಿದು ಕುಳಿತಿದ್ದ ರೈತರು ಅಧಿಕಾರಿ, ಪೊಲೀಸರೆನ್ನದೇ ಸಿಕ್ಕಸಿಕ್ಕಂತೆ ಚಚ್ಚಿದ್ದರು. ವಿಚಲಿತರಾದ ಪೊಲೀಸರ ಗುಂಡಿಗೆ ಚಿಕ್ಕನರಗುಂದ ರೈತ ವೀರಪ್ಪ ಕಡ್ಲಿಕೊಪ್ಪ, ನವಲಗುಂದದಲ್ಲಿ ಅಳಗವಾಡಿ ರೈತ ಬಸಪ್ಪ ಕಡ್ಲಿಕೊಪ್ಪ ಬಲಿಯಾದರು. ಇದರಿಂದ ರೈತರ ಆಕ್ರೋಶ ತಾರಕಕ್ಕೇರಿತು. ಪರಿಣಾಮ ಓರ್ವ ಪೊಲೀಸ್‌ ಅಧಿಕಾರಿ ಸೇರಿ 4 ಪೊಲೀಸರು ಹತರಾದರು.

ರೈತ ಬಂಡಾಯಕ್ಕೆ ಎಚ್ಚೆತ್ತುಕೊಂಡ ಸರ್ಕಾರ ಬೆಟರಮೆಂಟ್‌ ಲೆವಿ ಹಿಂಪಡೆದರೂ ರೈತರ ಬೆಂಗಳೂರು ಚಲೋಗೆ ಕಾಂಗ್ರೆಸ್‌ನ ಗುಂಡೂರಾವ್‌ ಸರ್ಕಾರ ಪತನವಾಗಿತ್ತು. ಬಂಡಾಯ ನೆಲದ ಗುಡುಗು ನಾಡಿನಲ್ಲಿ ರೈತ ಸಂಘ ಅಸ್ತಿತ್ವಗೊಳಿಸಿತು. ಹೀಗೆ ಬಂಡಾಯದ ಹಿಂದೆ ರೈತರ ರಕ್ತ ಹರಿದಿದೆ. ನೋವು-ಹತಾಶೆ ಅಡಗಿದೆ.

ರೈತರನ್ನು ಕಾಡುತ್ತಿವೆ ಪ್ರಶ್ನೆಗಳು: ನೇಗಿಲಯೋಗಿ ನೆತ್ತರು ಹರಿಸಿದ ಈ ದಿನ ನಿಜಕ್ಕೂ ರೈತರ ಸ್ಮರಣೆಯಾದೀತೇ? ಕಳಸಾ ಬಂಡೂರಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸರ್ಕಾರಗಳಿಂದ ರೈತರಿಗೆ ಕೊಡುಗೆ ಸಿಗಬಹುದೇ? ನ್ಯಾಯಾಧಿಕರಣ ಹಂಚಿಕೆ ಮಾಡಿದ ನೀರು ಮಲಪ್ರಭೆ ಸೇರುವುದೇ? ಎಂಬಿತ್ಯಾದಿ ರೈತರ ಪ್ರಶ್ನೆಗಳೊಂದಿಗೆ ಮತ್ತೂಮ್ಮೆ ರೈತ ಹುತಾತ್ಮ ದಿನಾಚರಣೆಗೆ ಸಜ್ಜಾಗಲಾಗಿದೆ.

Advertisement

ರೈತರ ಕೂಗು ಅರಣ್ಯ ರೋಧನ: ಈ ನೆಲದ ಹಲವಾರು ನಾಯಕರು ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದರೂ ಹೆದ್ದಾರಿ ಬದಿಗಿರುವ‌ ಹುತಾತ್ಮ ರೈತನ ವೀರಗಲ್ಲು ಮಾತ್ರ ಸುಧಾರಣೆ ಕಂಡಿಲ್ಲ. ವರ್ಷಕ್ಕೊಮ್ಮೆ ಸರದಿಯಲ್ಲಿ ರಾಜಕಾರಣಿಗಳ ಹಾರ ತುರಾಯಿಗೆ ವೀರಗಲ್ಲು ಸೀಮಿತಗೊಂಡಿದೆ.ಇಲ್ಲಿ ರೈತ ಸ್ಮಾರಕ ಭವನ ನಿರ್ಮಿಸಬೇಕೆಂಬ ಬಂಡಾಯ ನಾಡಿನ ರೈತರ ಕೂಗು ಮಾತ್ರ ಅರಣ್ಯ ರೋಧನವಾಗಿದೆ.

ಸರ್ಕಾರಗಳ ಅಸಡ್ಡೆ: ರೈತ ಬಂಡಾಯ ನೆಲದಲ್ಲೇ 4 ವರ್ಷದಿಂದ ಮಹದಾಯಿ ಹೋರಾಟ ಹುಟ್ಟಿಕೊಂಡಿದೆೆ. 2015 ಜು.16ರಂದು ಮಹದಾಯಿ ಮತ್ತು ಕಳಸಾ-ಬಂಡೂರಿ ಜೀವಜಲಕ್ಕಾಗಿ ಹೋರಾಟ 5ನೇ ವರ್ಷಕ್ಕೆ ಕಾಲಿಟ್ಟಿದೆ. ಜನಾಂದೋಲನ ಸ್ವರೂಪ ಪಡೆದು ದೇಶದ ಇತಿಹಾಸದಲ್ಲೇ ಹೊಸ ಅಧ್ಯಾಯ ಬರೆದು ವಿಶ್ವ ದಾಖಲೆ ಸೃಷ್ಟಿಸಿದ ಹೋರಾಟ ಆಳುವ ಸರ್ಕಾರಗಳ ಅಸಡ್ಡೆ ಧೋರಣೆಗೆ ನಿದರ್ಶನವಾಗಿದೆ.

ಮಾಲಾರ್ಪಣೆಗೆ ಸೀಮಿತ: ರೈತ ಕುಲದ ಏಳ್ಗೆಗಾಗಿ ನೆತ್ತರು ಹರಿಸಿದ ಆ ದಿನಗಳ ರೈತ ಶೋಷಣೆ ಇಂದಿಗೂ ಮುಂದುವರಿದಿದೆ ಎಂಬುದಕ್ಕೆ ನಾಲ್ಕು ವರ್ಷಗಳಿಂದ ನಡೆದ ಮಹದಾಯಿ, ಕಳಸಾ-ಬಂಡೂರಿ ಹೋರಾಟ ಸಾಕ್ಷಿಯಾಗಿದೆ. ರೈತ ಬಂಡಾಯಕ್ಕೆ 39 ವರ್ಷ ಗತಿಸಿದರೂ ರೈತರ ಸ್ಥಿತಿ ಹಿಂದಿಗಿಂತ ಭಿನ್ನವಾಗಿಲ್ಲ. ರೈತ ಹುತಾತ್ಮ ದಿನಾಚರಣೆ ರಾಜಕಾರಣಿಗಳ ವೀರಾವೇಷದ ಮಾತುಗಳಿಗೆ ವೇದಿಕೆಯಾಗುತ್ತಿದೆ. ಕಾಲಕ್ರಮೇಣ ವೀರಗಲ್ಲಿಗೆ ಮಾಲಾರ್ಪಣೆಗೆ ಸೀಮಿತಗೊಂಡಿದೆ.

* ಸಿದ್ಧಲಿಂಗಯ್ಯ ಮಣ್ಣೂರಮಠ

Advertisement

Udayavani is now on Telegram. Click here to join our channel and stay updated with the latest news.

Next