ನವದೆಹಲಿ: ಕ್ರೀಡಾ ಲೋಕದಲ್ಲಿ ಇಂದು ಮಾಡಿದ ದಾಖಲೆ ನಾಳೆಯ ದಿನ ಯಾವುದೋ ಒಬ್ಬ ಹೊಸ ಆಟಗಾರ ಬಂದು ಬ್ರೇಕ್ ಮಾಡಬಹುದು. ಅದೇ ರೀತಿಯ ಒಂದು ವಿಶಿಷ್ಟ ದಾಖಲೆ ಕ್ರಿಕೆಟ್‌ನಲ್ಲಿ ಸೃಷ್ಟಿಯಾಗಿದೆ.
ಸಮೋವಾದ (Samoa) 28 ವರ್ಷದ ಡೇರಿಯಸ್ ವಿಸ್ಸರ್ (Darius Visser) T20Iಯಲ್ಲಿ ಯಾರೂ ಮಾಡದ ದಾಖಲೆಯೊಂದನ್ನು ಮಾಡಿ, ಈ ಹಿಂದಿನ ಎಲ್ಲಾ ರೆಕಾರ್ಡ್ಸ್‌ಗಳನ್ನು ಬ್ರೇಕ್ ಮಾಡಿದ್ದಾರೆ.
ಸಮೋವಾದ ಡೇರಿಯಸ್ ವಿಸ್ಸರ್ ಒಂದೇ ಓವರ್‌ನಲ್ಲಿ 39ರನ್ ಗಳನ್ನು ಸಿಡಿಸಿ ದಿಗ್ಗಜ ಯುವರಾಜ್ ಸಿಂಗ್(2007), ಕೀರಾನ್ ಪೊಲಾರ್ಡ್ (2021), ದೀಪೇಂದ್ರ ಸಿಂಗ್ ಐರಿ (2024) ಮತ್ತು ನಿಕೋಲಸ್ ಪೂರನ್ (2024) ಅವರ ದಾಖಲೆ ಒಂದೇ ಓವರ್‌ನಲ್ಲಿ 36 ರನ್ ಗಳನ್ನು ಸಿಡಿಸಿದ ದಾಖಲೆಯನ್ನು ಮುರಿದಿದ್ದಾರೆ.
2026ರ T20 ವಿಶ್ವಕಪ್ ಪ್ರಾದೇಶಿಕ ಅರ್ಹತಾ (2026 World Cup regional qualifier) ಸುತ್ತಿನ ವನುವಾಟು (Vanuatu) ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ವಿಸ್ಸರ್ ಈ ದಾಖಲೆಯನ್ನು ಬರೆದಿದ್ದಾರೆ.
ವಿಸ್ಸರ್ ಅವರು T20Iಯಲ್ಲಿ ಸಮೋವಾದ ಪರ ಶತಕ ಗಳಿಸಿದ ಮೊದಲ ಆಟಗಾರನಾಗಿ ಮೂಡಿಬಂದಿದ್ದಾರೆ. ವಿಸ್ಸರ್ ಅವರ 62 ಎಸೆತಗಳಲ್ಲಿ 132 ರನ್‌ಗಳಿಸಿದ್ದರು. ಸಮೋವಾ ತಂಡವು ವನುವಾಟು ವಿರುದ್ಧ 10 ರನ್‌ಗಳ ಜಯ ಸಾಧಿಸಿದೆ.
ವಿಸ್ಸರ್, 46 ರನ್ ಗಳಿಸಿದ್ದಾಗ ವನುವಾಟು ತಂಡದ ನಲಿನ್ ನಿಪಿಕೊ 15ನೇ ಓವರ್ ಬೌಲ್ ಮಾಡಲು ಮುಂದಾದರು. ಇದರಲ್ಲಿ ಸಮೋವಾ ಬ್ಯಾಟರ್ ಆರು ಸಿಕ್ಸರ್ ಗಳನ್ನು ಸಿಡಿಸಿದರು. ಮೂರು ನೋಬಾಲ್‌ಗಳನ್ನು ಎದುರಿಸಿದರು. ನಿಪಿಕೊ ಓವರ್‌ನ ಐದನೇ ಎಸೆತಕ್ಕೆ ಡಾಟ್ ಬಾಲ್ ಬೌಲ್ ಮಾಡಿದರು. ಒಟ್ಟು ಸಿಕ್ಸರ್ ಹಾಗೂ ನೋಬಾಲ್ ನೊಂದಿಗೆ ಒಂದೇ ಓವರ್‌ನಲ್ಲಿ 39 ರನ್ ಗಳಿಸುವ ಮೂಲಕ ಟಿ-20 ಇತಿಹಾಸದಲ್ಲಿ ಹೊಸ ದಾಖಲೆ ಮಾಡಿದ್ದಾರೆ.
ತನ್ನ ಇನ್ನಿಂಗ್ಸ್ ನಲ್ಲಿ ವಿಸ್ಸರ್ 14 ಸಿಕ್ಸ್ ಹಾಗೂ 5 ಬೌಂಡರಿ ಸಿಡಿಸಿದರು.
ಯುವರಾಜ್ 2007ರ T20 ವಿಶ್ವ ಕಪ್ ಪಂದ್ಯದಲ್ಲಿ ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್ ಅವರ ಒಂದು ಓವರ್‌ನಲ್ಲಿ ಆರು ಸಿಕ್ಸರ್‌ಗಳಿಗೆ ಸಿಡಿಸಿದ್ದರು. ಪೊಲಾರ್ಡ್ 2021 ರಲ್ಲಿ ಶ್ರೀಲಂಕಾದ ಅಕಿಲಾ ಧನಂಜಯ ಅವರ ಓವರ್ ನಲ್ಲಿ ಇದೇ ರೀತಿಯ ಆಟವನ್ನಾಡಿದ್ದರು. ನೇಪಾಳದ ದೀಪೇಂದ್ರ ಐರಿ ಇದೇ ವರ್ಷದ ಏಪ್ರಿಲ್‌ನಲ್ಲಿ ಒಂದೇ ಓವರ್‌ನಲ್ಲಿ 36 ರನ್ ಸಿಡಿಸಿದ್ದರು.
ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್ ಮತ್ತು ಯುಎಸ್ ಬ್ಯಾಟರ್ ಜಸ್ಕರನ್ ಮಲ್ಹೋತ್ರಾ 36 ರನ್ ಗಳಿಸಿದ್ದಾರೆ.