ಮೈಸೂರು: ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಜ.17ರಂದು ಸುತ್ತೂರಿನಲ್ಲಿ 38ನೇ ರಾಷ್ಟ್ರಮಟ್ಟದ ನಾಡ ಕುಸ್ತಿ ಪಂದ್ಯಾವಳಿ ನಡೆಯಲಿದೆ ಎಂದು ಜೆಎಸ್‌ಎಸ್ ಮಹಾ ವಿದ್ಯಾಪೀಠದ ಕಾರ್ಯದರ್ಶಿ ಎನ್.ಮಂಜುನಾಥ್ ತಿಳಿಸಿದರು. ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಮಂಗಳವಾರ ಸುತ್ತೂರು ಜಾತ್ರೆ ಅಂಗವಾಗಿ ನಡೆಯುವ ಕುಸ್ತಿ ಪಂದ್ಯಾವಳಿಯ ಪೋಸ್ಟರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಸುತ್ತೂರು ಜಾತ್ರಾ ಮಹೋತ್ಸವ ಜ.13ರಿಂದ 18ರವರೆಗೆ ಸುತ್ತೂರಿನಲ್ಲಿ ನಡೆಯಲಿದ್ದು, ಜಾತ್ರೆ ಅಂಗವಾಗಿ ಪ್ರತಿ ವರ್ಷದಂತೆ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ. ಈ ವರ್ಷ ಜ.17ರಂದು ಮಧ್ಯಾಹ್ನ 2 ಗಂಟೆಗೆ 48 ಜೊತೆ ನಾಡ ಕುಸ್ತಿ ಪಂದ್ಯಗಳು ನಡೆಯಲಿದೆ.
ಗ್ರಾಮೀಣ ಕ್ರೀಡೆಯಾಗಿರುವ ಕುಸ್ತಿಗೆ ಸುತ್ತೂರು ಸಂಸ್ಥಾನ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಗ್ರಾಮೀಣ ಕ್ರೀಡೆಗಳನ್ನು ಬೆಳೆಸಲು ಸದಾ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಹೀಗಾಗಿ ಗ್ರಾಮೀಣ ಕ್ರೀಡೆಯೆಡೆಗೆ ಯುವಕರನ್ನು ಸೆಳೆಯಲು ಈ ಕುಸ್ತಿ ಪಂದ್ಯಾವಳಿ ನೆರವಾಗಲಿದೆ ಎಂದು ಹೇಳಿದರು.
ಅಂತಾರಾಷ್ಟ್ರೀಯ ಪಟುಗಳು ಭಾಗಿ: ಕುಸ್ತಿ ಫೆಡರೇಷನ್ ಅಧ್ಯಕ್ಷ ಪೊ›.ಕೆ.ಆರ್.ರಂಗಯ್ಯ ಮಾತನಾಡಿ, ಈ ಬಾರಿಯ ಕುಸ್ತಿ ಪಂದ್ಯಾವಳಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿರುವ ಕುಸ್ತಿಪಟುಗಳು ಪಾಲ್ಗೊಳ್ಳಲಿದ್ದಾರೆ. ಕೊಲ್ಲಾಪುರದ ಪೈಲ್ವಾನ್ ಸಿಕಂದರ್ ಶೇಕ್ ಹಾಗೂ ಬೆಳಗಾವಿಯ ಪೈಲ್ವಾನ್ ಅಪ್ಪಾಸಿ ಅಪ್ಪು ಅವರ ನಡುವೆ ಮಾರ್ಫಿಟ್ ಕುಸ್ತಿ ಪಂದ್ಯಾವಳಿ ನಡೆಯಲಿದ್ದು,
ಇವರಲ್ಲಿ ಗೆದ್ದವರಿಗೆ ಸುತ್ತೂರು ಕೇಸರಿ ಹಾಗೂ ಮೈಸೂರಿನ ಪೈಲ್ವಾನ್ ಕಿಶೋರ್ ಪುರೋಹಿತ್ ಹಾಗೂ ಗಂಜಾಂನ ಪೈಲ್ವಾನ್ ಚಕ್ರವರ್ತಿ ಅವರ ನಡುವಿನ ಪಂದ್ಯಾವಳಿಯಲ್ಲಿ ಗೆದ್ದವರಿಗೆ ಸುತ್ತೂರು ಕುಮಾರ ಪ್ರಶಸ್ತಿ ನೀಡಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಗಂಗಾಧರ್, ರವಿಕುಮಾರ್, ಶಿವಕುಮಾರಸ್ವಾಮಿ, ಪ್ರಹ್ಲಾದ್, ಕೆ.ಕೆಂಪೇಗೌಡ, ಬನ್ನೂರು ರವಿ ಹಾಜರಿದ್ದರು.