Advertisement

ಶಿಕ್ಷಣ ವ್ಯವಸ್ಥೆಯಲ್ಲಿ ಪರಿಷ್ಕರಣೆ ಅಗತ್ಯ: ಮುರಳೀಧರನ್‌

01:14 AM Feb 28, 2020 | mahesh |

ಉಳ್ಳಾಲ: ಪ್ರಸಕ್ತ ಕಾಲದ ಆವಶ್ಯಕತೆ, ಸವಾಲುಗಳಿಗೆ ಅನುಗುಣವಾಗಿ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಪರಿಷ್ಕರಣೆ ಆಗಬೇಕಿದೆ. ಪ್ರಾಚೀನ ಭಾರತದ ಬುದ್ಧಿವಂತಿಕೆಯ ಪ್ರಯೋಗಗಳನ್ನು ಆಧುನಿಕ ಪ್ರಪಂಚದ ಸವಾಲುಗಳ ಜತೆ ಸಂಯೋಜನೆ ಮಾಡುವುದರಿಂದ ಉತ್ತಮ ಫ‌ಲಿತಾಂಶ ಪಡೆಯಲು ಸಾಧ್ಯ ಎಂದು ಕೇಂದ್ರ ಸಂಸದೀಯ ವ್ಯವಹಾರ ಹಾಗೂ ವಿದೇಶಾಂಗ ಸಚಿವ ವಿ. ಮುರಳೀಧರನ್‌ ಹೇಳಿದರು.

Advertisement

ಅವರು ಮಂಗಳೂರು ವಿವಿ ಸಭಾಂಗಣದಲ್ಲಿ ಗುರುವಾರ ನಡೆದ ವಿ.ವಿ.ಯ 38ನೇ ಘಟಿಕೋತ್ಸವದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಪ.ಪೂ. ಶಿಕ್ಷಣ ವ್ಯವಸ್ಥೆಯಲ್ಲಿ ಕೌಶಲಾಧಾರಿತ ಶಿಕ್ಷಣವನ್ನು ಪರಿಚಯಿ ಸುವುದರಿಂದ ಭವಿಷ್ಯದ ಉದ್ಯೋಗ ಆವಶ್ಯಕತೆಗಳಿಗೆ ಪೂರಕವಾಗಲಿದೆ. ದೇಶಾದ್ಯಂತ ಜಾರಿಗೊಳಿಸಲು ಉದ್ದೇಶಿಸಿರುವ ಹೊಸ ಶಿಕ್ಷಣ ನೀತಿ ಈ ಎಲ್ಲ ಅಂಶಗಳನ್ನು ಒಳ ಗೊಂಡಿದ್ದು, ಪ್ರೌಢ ಶಿಕ್ಷಣದಿಂದ ಹಿಡಿದು ಸಂಶೋಧನೆಯವರೆಗೆ ವಿದ್ಯಾರ್ಥಿಗಳಿಗೆ ಬಹು ಆಯ್ಕೆಗಳನ್ನು ಒದಗಿಸಲಿದೆ ಎಂದರು.

ಪದವಿ ಪ್ರದಾನ
ಶಿಕ್ಷಣ, ಸಾಮಾಜಿಕ ಸೇವೆ ಪರಿಗಣಿಸಿ ಉದ್ಯಮಿ ಕೆ.ಸಿ. ನಾೖಕ್‌ ಅವರಿಗೆ ಮಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್‌ ನೀಡಿ ಗೌರವಿಸಲಾಯಿತು. ಇಬ್ಬರಿಗೆ ಡಾಕ್ಟರ್‌ ಆಫ್‌ ಲಿಟರೇಚರ್‌ ಹಾಗೂ 105 ಮಂದಿಗೆ ಪಿಎಚ್‌ಡಿ ಪದವಿ, ಪದವಿ ಮತ್ತು ಸ್ನಾತಕೋತ್ತರ ಪದವಿಯ 34 ಪದವೀಧ‌ರರಿಗೆ ಚಿನ್ನದ ಪದಕ ಹಾಗೂ 120 ಪದವೀಧರರಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ಮಂಗಳೂರು ವಿ.ವಿ. ಉಪಕುಲಪತಿ ಪ್ರೊ| ಪಿ.ಎಸ್‌. ಎಡಪಡಿತ್ತಾಯ ಘಟಕೋತ್ಸವಕ್ಕೆ ಚಾಲನೆ ನೀಡಿದರು. ಕುಲಸಚಿವ ಪ್ರೊ| ಎ.ಎಂ. ಖಾನ್‌ ಪ್ರಸ್ತಾವನೆಗೈದರು. ಕಲಾನಿಕಾಯದ ಡೀನ್‌ ಪ್ರೊ| ಪಿ.ಎಲ್‌. ಧರ್ಮ, ಶಿಕ್ಷಣ ನಿಕಾಯದ ಡೀನ್‌ ಪ್ರೊ| ಕಿಶೋರ್‌ ಕುಮಾರ್‌, ವಾಣಿಜ್ಯ ನಿಕಾಯದಲ್ಲಿ ಪ್ರೊ| ಶ್ರೀಧರ್‌. ವಿಜ್ಞಾನ ನಿಕಾಯದಲ್ಲಿ ಪ್ರೊ| ಶಿವಲಿಂಗಯ್ಯ ಪದವೀಧರರ ವಿವರ ನೀಡಿದರು. ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ| ಧನಂಜಯ ಕುಂಬ್ಳೆ ಮತ್ತು ಆಂಗ್ಲ ಅಧ್ಯಯನ ವಿಭಾಗದ ಡಾ| ರವಿಶಂಕರ್‌ ನಿರ್ವಹಿಸಿದರು.

ತರಕಾರಿ ವ್ಯಾಪಾರಿ ಪುತ್ರಿಗೆ ಚಿನ್ನದ ಪದಕ
ಬದಿಯಡ್ಕ ಮಾರ್ಪನಡ್ಕದ ತರಕಾರಿ ವ್ಯಾಪಾರಿ ಅಚ್ಯುತ ಮಣಿಯಾಣಿ ಪದ್ಮಾರ್‌ ಹಾಗೂ ಹೇಮಲತಾ ದಂಪತಿ ಪುತ್ರಿ ಶೋಭಿತಾ ಅವರಿಗೆ ಚಿನ್ನದ ಪದಕ ದೊರೆತಿದೆ. ಆನ್ವಯಿಕ ಪ್ರಾಣಿಶಾಸ್ತ್ರದ ಸ್ನಾತಕೋತ್ತರ ಪದವಿಯನ್ನು ಎರಡು ಚಿನ್ನದ ಪದಕ, ಒಂದು ನಗದು ಮತ್ತು ಒಂದು ಮೆರಿಟ್‌ ಸರ್ಟಿಫಿಕೆಟ್‌ನೊಂದಿಗೆ ಪಡೆದುಕೊಂಡಿದ್ದಾರೆ.

Advertisement

 ಘಟಕೋತ್ಸವ ಆರಂಭದಲ್ಲಿ ಮಂಗಳಾ ಆಡಿಟೋರಿಯಂ ಬಳಿ ಹುತಾತ್ಮ ಸೈನಿಕರ ನೆನಪಿಗಾಗಿ ನಿರ್ಮಿಸಿದ ಶಹೀದ್‌ ಸ್ಥಳ್‌(ಶಕ್ತಿ ಸ್ಥಳ)ವನ್ನು ವಿದೇಶಾಂಗ ಸಚಿವ ವಿ. ಮುರಳೀಧರನ್‌ ಅನಾವರಣ ಮಾಡಿದರು.

 ಮಂಗಳೂರು ವಿ.ವಿ. 2018- 19ನೇ ಸಾಲಿನಲ್ಲಿ ನಡೆಸಿದ ವಿವಿಧ ಪರೀಕ್ಷೆಗಳಿಗೆ ಹಾಜರಾದ 42,405 ವಿದ್ಯಾರ್ಥಿಗಳ ಪೈಕಿ 29,914 ಮಂದಿ ಉತ್ತೀರ್ಣರಾಗುವ ಮೂಲಕ ಶೇ. 70.54 ಫಲಿತಾಂಶ ದಾಖಲಿಸಿದೆ. ಸ್ನಾತಕೋತ್ತರ ಪದವಿ ಪರೀಕ್ಷೆಗೆ ಹಾಜರಾದ 6,663 ವಿದ್ಯಾರ್ಥಿಗಳಲ್ಲಿ 6,217 ಮಂದಿ ತೇರ್ಗಡೆಯಾಗಿದ್ದಾರೆ. ಪದವಿ ಪರೀಕ್ಷೆಗೆ ಹಾಜರಾದ 35,602 ವಿದ್ಯಾರ್ಥಿಗಳಲ್ಲಿ 23,561 ಮಂದಿ ಉತ್ತೀರ್ಣರಾಗಿದ್ದಾರೆ.

 ಗಮನ ಸೆಳೆದ ಬಣ್ಣ ಬಣ್ಣದ ನಿಲುವಂಗಿ: ಈ ಬಾರಿ ಘಟಿಕೋತ್ಸವದಲ್ಲಿ ಸಂಪ್ರದಾಯದಂತೆ ಧರಿಸುತ್ತಿದ್ದ ನಿಲುವಂಗಿಯಾದ ಕಪ್ಪು ಬಣ್ಣದ ಗೌನ್‌ಗೆ ತಿಲಾಂಜಲಿ ನೀಡಿದ್ದು, ಮುಖ್ಯ ಅತಿಥಿ, ವಿ.ವಿ. ಅಧಿಕಾರಿಗಳು, ನಿಕಾಯದ ಡೀನ್‌ಗಳು ಮತ್ತು ಸಿಂಡಿಕೇಟ್‌, ಶೈಕ್ಷಣಿಕ ಮಂಡಳಿ ಸದಸ್ಯರು ವಿವಿಧ ಬಣ್ಣಗಳ ಗೌನು ಧರಿಸಿದ್ದರು.

 ಕನ್ನಡ ಅಧ್ಯಯನ ವಿಭಾಗದಲ್ಲಿ ಪಲ್ಲವಿ ಎಸ್‌.ಎನ್‌. ಒಂದು ಚಿನ್ನದ ಪದಕ ಮತ್ತು ಐದು ನಗದು ಪುರಸ್ಕಾರ, ಇತಿಹಾಸ ವಿಭಾಗದಲ್ಲಿ ಸಣ್ಣ ರಾಘವೇಂದ್ರ ಒಂದು ಚಿನ್ನದ ಪದಕ ಮತ್ತು ಆರು ನಗದು ಪುರಸ್ಕಾರ, ಎಂಎಸ್ಸಿ ಭೌತಶಾಸ್ತ್ರದಲ್ಲಿ ಲಕ್ಷ್ಮೀ ಚಂದ್ರನ್‌ ಅವರು ಎರಡು ಚಿನ್ನದ ಪದಕ ಮತ್ತು ನಾಲ್ಕು ಪ್ರಶಸ್ತಿಗಳು ಮತ್ತು ಒಂದು ನಗದು ಪುರಸ್ಕಾರ, ಎಂಬಿಎ ವಿಭಾಗದಲ್ಲಿ ಸಿ.ಎಸ್‌. ರಶ್ಮಿ ಮತ್ತು ಬಿಕಾಂ ಪದವಿಯಲ್ಲಿ ಅರುಷಿ ಸಿ.ಎಸ್‌. ಅವರು ಎರಡು ಚಿನ್ನದ ಪದಕ ಮತ್ತು ಒಂದು ನಗದು ಬಹುಮಾನ ಪಡೆದರು. ಅರ್ಥಶಾಸ್ತ್ರದಲ್ಲಿ ರಾಕೇಶ್‌ ಆರ್‌. ಅಮೀನ್‌, ಎಂಎಸ್ಸಿ ರಸಾಯನಶಾಸ್ತ್ರದಲ್ಲಿ ಅಪೂರ್ವ ಶೆಟ್ಟಿ, ಗ್ರಂಥ ವಿಜ್ಞಾನದಲ್ಲಿ ತಶಿ ಲಮೋ ಅವರು ಒಂದು ಚಿನ್ನದ ಪದಕ ಮತ್ತು ಎರಡು ನಗದು ಪುರಸ್ಕಾರಗಳನ್ನು ಪಡೆದರು.

 ಶೈಕ್ಷಣಿಕ ವಿನಿಮಯ ಕಾರ್ಯಕ್ರಮದಡಿ ಪಶ್ವಿ‌ಮ ಆಫ್ರಿಕಾದ ಗಾಂಬಿಯಾ ದೇಶದಿಂದ ಮಂಗಳೂರು ವಿವಿಗೆ ಬಂದಿರುವ ಮೂಸಾ ಎಲ್‌.ಫಾಲ್‌ ಅವರು ಮಂಗಳೂರು ವಿವಿ ವ್ಯವಹಾರ ಆಡಳಿತ ವಿಭಾಗದಲ್ಲಿ ಮಂಡಿಸಿದ ಪ್ರಬಂಧ‌ಕ್ಕೆ ಪಿ.ಎಚ್‌.ಡಿ. ಪದವಿ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next