Advertisement
ಬಿಎಸ್‌ಕೆಬಿ ಅಸೋಸಿಯೇಶನ್ ಸಂಚಾಲಿತ ಆಶ್ರಯದ ಗೌರವ ಕಾರ್ಯ ನಿರ್ವಾಹಕಿ ಚಂದ್ರಾವತಿ ಕೆ. ರಾವ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನೆರೂಲ್‌ದಲ್ಲಿರುವ ಆಶ್ರಯ ವೃದ್ಧಾಶ್ರಮವಾಗಿರದೆ ಹಿರಿಯ ನಾಗರಿಕರ ಮನೆಯಾಗಿದೆ. ಇಂತಹ ಸಂಸ್ಥೆ ವ್ಯವಸ್ಥಿತವಾಗಿ ಮತ್ತು ಅರ್ಥಪೂರ್ಣವಾಗಿ ನಡೆಯಬೇಕಾದರೆ, ಸಂಬಂಧ ಪಟ್ಟ ಎಲ್ಲರೂ, ಸಮರ್ಪಣಾ ಭಾವವನ್ನು ಹೊಂದುವ ಆವಶ್ಯಕತೆಯಿದೆ. ಮನೆಯಲ್ಲಿ ಕನ್ನಡ ಮಾತನಾಡದಿದ್ದರೆ, ಕನಿಷ್ಠ ಪಕ್ಷ ಕನ್ನಡ ಕಲಿಕಾ ಕೇಂದ್ರದಲ್ಲಿ ಕನ್ನಡ ಕಲಿಯದಿದ್ದಲ್ಲಿ ಉಚ್ಚಾರ ದೋಷ, ಶಬ್ದ ಪ್ರಯೋಗದಲ್ಲಿನ ಅಡಚಣೆ ಎಲ್ಲ ಕಂಡು ಬರುತ್ತದೆ. ಯುವ ಪೀಳಿಗೆಯನ್ನು ಕನ್ನಡದ ರಾಯಭಾರಿಗಳನ್ನಾಗಿಸುವಲ್ಲಿ ಮಹಿಳೆಯರ ಪಾತ್ರ ಹೆಚ್ಚಿದೆ. ತಂದೆ ತಾಯಿ ಕನ್ನಡದಲ್ಲಿ ನುಡಿದರೆ, ಸಂಸ್ಕೃತಿಯ ಪಾಠ ನೀಡಿದರೆ, ಸಂಸ್ಕಾರದ ಔಚಿತ್ಯ ತಿಳಿಸಿದರೆ ಮಾತ್ರ ಪ್ರಬುದ್ಧ ನಾಗರಿಕರನ್ನು ಸಿದ್ಧಗೊಳಿಸುವುದು ಸಾಧ್ಯವಾಗುತ್ತದೆ. ಇಲ್ಲದಿದ್ದಲಿ ಮೊಬೈಲ್, ಫೇಸ್‌ಬುಕ್ ಇನ್ನಿತರ ಸಾಮಾಜಿಕ ಜಾಲತಾಣಗಳಿಂದ ಯುವಪೀಳಿಗೆ ಸಂಸ್ಕೃತಿಯನ್ನು ಮರೆಯುವುದರಲ್ಲಿ ಎರಡು ಮಾತಿಲ್ಲ. ಗಂಡ ಹೆಂಡತಿ ಇಬ್ಬರೂ ದುಡಿಯಬೇಕಾದ ಅನಿವಾರ್ಯತೆ ಇರುವ ಇಂದಿನ ದಿನಗಳಲ್ಲಿ ಮಕ್ಕಳನ್ನು ಮರೆಯದೆ, ಅವರಿಗೂ ಸಮಯ ಕೊಡುವ ಸತ್ಸಂಪ್ರದಾಯ ಉಳಿಸಿ, ಬೆಳೆಸಿಕೊಳ್ಳಬೇಕು ಎಂದು ನುಡಿದರು.
Related Articles
Advertisement
ಮಹಿಳಾ ವಿಭಾಗದ ಮುಖ್ಯಸ್ಥೆ ಪ್ರಫುಲ್ಲಾ ಶೆಟ್ಟಿ ಮತ್ತು ವಾರ್ಷಿಕೋತ್ಸವದ ಸಂಚಾಲಕರಾದ ಎ. ಎನ್. ರಾವ್ ಇವರು ಮಾತನಾಡಿ, ತಮಗೆ ದೊರೆತ ಸಹಕಾರವನ್ನು ಸ್ಮರಿಸಿಕೊಂಡರು. ಸಂಘದ ಅಧ್ಯಕ್ಷರಾದ ವಿಶ್ವನಾಥ ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ಎಲ್ಲ ಕಾರ್ಯಕ್ರಮಗಳ ಯಶಸ್ಸಿಗೆ ಕಾರಣರಾದ ಸರ್ವ ಸದಸ್ಯರ ಸಹಕಾರವನ್ನು ಅಭಿನಂದಿಸಿ ಕೃತಜ್ಞತೆ ಸಲ್ಲಿಸಿದರು.ಸಭಾ ಕಾರ್ಯಕ್ರಮದ ಅನಂತರದಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. 300 ಕ್ಕೂ ಹೆಚ್ಚಿನ ಸದಸ್ಯರು ಪಾಲ್ಗೊಂಡಿದ್ದರು. ಆನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಮಹಿಳಾ ವಿಭಾಗದ ಕಾರ್ಯದರ್ಶಿ ಲಲಿತಾ ಕಾರಂತ ವಂದಿಸಿದರು. ಕಾರ್ಯಕ್ರಮ ನಿರ್ವಹಿಸಿದ ಜಾನಕಿ ರಾವ್, ಆಶಾ ಹೆಗ್ಡೆ ಮತ್ತು ಅಶ್ವಿತಾ ಕೊಟ್ಯಾನ್‌ರನ್ನು ಅಭಿನಂದಿಸಲಾಯಿತು. ಸಂಘದ ಪದಾಧಿಕಾರಿಗಳು, ಸದಸ್ಯ-ಸದಸ್ಯೆಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.