Advertisement

ಜಿಲ್ಲೆಯಲ್ಲಿ 388 ಅಬಕಾರಿ ಕೇಸ್‌ ದಾಖಲು

06:13 PM Apr 08, 2019 | Team Udayavani |

ಚಿಕ್ಕಬಳ್ಳಾಪುರ: ಬರದ ನಾಡು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನೀರಿಗೆ ಬರ ಇದ್ದರೂ ಮದ್ಯಕ್ಕೆ ಬರ ಇಲ್ಲ ಎನ್ನುವಂತೆ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಅಕ್ರಮವಾಗಿ ಮತದಾರರಿಗೆ ಹಣ, ಮದ್ಯದ ಹೊಳೆಯನ್ನೇ ಹರಿಸುತ್ತಿದ್ದು, ಅಧಿಕಾರಿಗಳು ಚಾಪೆ ಕೆಳಗೆ ತೂರಿದರೂ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ನಾವು ರಂಗೋಲಿ ಕೆಳಗೆ ತೂರುತ್ತೇವೆ ಎನ್ನುವ ಮೂಲಕ ಚುನಾವಣಾ ಅಧಿಕಾರಿಗಳಿಗೆ ಸವಾಲಾಗಿದ್ದಾರೆ.

Advertisement

ಚುನಾವಣಾ ಅಕ್ರಮಗಳಿಗೆ ಸಾಕ್ಷಿ: ಲೋಕಸಭಾ ಚುನಾವಣೆ ಮತದಾನಕ್ಕೆ ಕೇವಲ 10 ದಿನ ಮಾತ್ರ ಬಾಕಿ ಇದ್ದು, ರಾಜಕೀಯ ಪಕ್ಷಗಳು ಮತದಾರರಿಗೆ ಹಣ, ಹೆಂಡದ ಹೊಳೆ ಹರಿಸಲು ಮುಂದಾಗಿವೆ. ಇದುವರೆಗೂ ಚುನಾವಣಾ ಅಖಾಡದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂ ಸಿ ಸಾಗಿಸುತ್ತಿದ್ದ 9 ಸಾವಿರ ಲೀ.ಗೂ ಅಧಿಕ ಬಿಯರ್‌, ಸೇಂದಿ, ಐಎಂಲ್‌ ಮದ್ಯ ಹಾಗೂ 2 ಕೋಟಿಗೂ ಅಧಿಕ ನಗದು ಜಿಲ್ಲೆಯಲ್ಲಿ ಚುನಾವಣಾ ಅಕ್ರಮಗಳ ತಡೆಗೆ ನೇಮಕಗೊಂಡಿರುವ ಎಫ್ಎಸ್‌ ಹಾಗೂ ಎಸ್‌ಎಸ್‌ಟಿ ತಂಡಗಳು ಮಿಂಚಿನ ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಿರುವುದು ಚುನಾವಣಾ ಅಕ್ರಮಗಳಿಗೆ ಸಾಕ್ಷಿಯಾಗಿದೆ.

ಅಕ್ರಮಗಳನ್ನು ತಡೆಯಲು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರೋಬ್ಬರಿ 34 ಚೆಕ್‌ ಪೋಸ್ಟ್‌ಗಳನ್ನು ನಿರ್ಮಿಸಿದ್ದರೂ ರಾಜಕೀಯ ಪಕ್ಷಗಳು ಎಲ್ಲರನ್ನು ದಿಕ್ಕುತಪ್ಪಿಸುವ ಕೆಲಸದಲ್ಲಿ ತೊಡಗಿವೆ. ಕ್ಷೇತ್ರಕ್ಕೆ ರಾಜ್ಯದಲ್ಲಿ ನಡೆಯುವ ಮೊದಲ ಹಂತದ ಚುನಾವಣೆ ನಡೆಯಲಿದ್ದು, ಜಿಲ್ಲಾಡಳಿತ ಈಗಾಗಲೇ ಮತದಾನಕ್ಕೆ ಸಕಲ ಸಿದ್ಧತೆ ಕೈಗೊಂಡಿದೆ. ಈ ಬಾರಿ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಹಾಗೂ ಬಿಜೆಪಿ ನಡುವೆಯೇ ನೇರ ಹಣಾಹಣಿ ನಡೆಯುತ್ತಿರುವುದರಿಂದ ಕ್ಷೇತ್ರದಲ್ಲಿ ಚುನಾವಣಾ ಅಖಾಡ ಸಹಜವಾಗಿಯೆ ರಂಗೇರಿದೆ.

2.30 ಕೋಟಿ ನಗದು ವಶ: ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಗೊಂಡ ದಿನದಿಂದ ಇದುವರೆಗೂ ಒಟ್ಟು 2.30 ಕೋಟಿ ರೂ. ನಗದು ಹಣವನ್ನು ಕಾರ್ಯಾಚರಣೆಯ ವೇಳೆ ಫ್ಲೈಯಿಂಗ್‌ ಸ್ಕ್ವಾಡ್‌ (ಎಫ್ಎಸ್‌) ಜಪ್ತಿ ಮಾಡಿದೆ. ಆ ಪೈಕಿ 24,68,900 ರೂ. ನಗದು ಹಣವನ್ನು ಸೂಕ್ತ ದಾಖಲೆಗಳು ಒದಗಿಸಿದ ಹಿನ್ನೆಲೆಯಲ್ಲಿ ವಾಪಸ್ಸು ನೀಡಲಾಗಿದೆ.

ಉಳಿದಂತೆ 1.75.61,130 ರೂ.ಗೆ ಸೂಕ್ತ ದಾಖಲೆಗಳು ಒದಗಿಸಿಲ್ಲ. ಇನ್ನೂ ಸ್ಥಿರ ಕಣ್ಗಾವಲು ತಂಡ (ಎಸ್‌ಎಸ್‌ಟಿ) ಇದುವರೆಗೂ ಒಟ್ಟು 41,36,170 ರೂ. ವಶಕ್ಕೆ ಪಡೆದು ಆ ಪೈಕಿ ಸೂಕ್ತ ದಾಖಲೆಗಳು ನೀಡಿದ ಹಿನ್ನೆಲೆಯಲ್ಲಿ 31,36,170 ರೂ. ವಾಪಸ್ಸು ಕೊಟ್ಟಿದ್ದು ಇನ್ನೂ 10 ಲಕ್ಷಕ್ಕೆ ಸೂಕ್ತ ದಾಖಲೆಗಳು ಇಲ್ಲದಂತಾಗಿದೆ.

Advertisement

ಪ್ರಚಾರ ಸಾಮಗ್ರಿಗಳ ವಶ: ಚುನಾವಣಾ ಅಖಾಡದಲ್ಲಿ ರಾಜಕೀಯ ಪಕ್ಷಗಳು ಅನುಮತಿ ಇಲ್ಲದೇ ಬಳಕೆ ಮಾಡುತ್ತಿರುವ ವಿವಿಧ ಪಕ್ಷಗಳಿಗೆ ಸೇರಿದ ಚುನಾವಣಾ ಪ್ರಚಾರ ಸಾಮಗ್ರಿಗಳನ್ನು ಸಹ ಜಪ್ತಿ ಮಾಡಲಾಗಿದೆ. ಬಿಜೆಪಿಗೆ ಸಂಬಂಧಿಸಿದ 120 ಕ್ಯಾಪ್‌, 80 ಬ್ಯಾನರ್‌, 1000 ಕರಪತ್ರ, 13 ಧ್ವಜಗಳು, ಒಟ್ಟು 410 ಸೀರೆಗಳು, ಎರಡು ಕಾರುಗಳನ್ನು ಸಹ ವಶಕ್ಕೆ ಪಡೆಯಲಾಗಿದೆ.

ಮತದಾನಕ್ಕೆ ಒಂದೆರೆಡು ದಿನ ಇರುವಾಗಲೇ ಇನ್ನಷ್ಟು ಮದ್ಯ, ಹಣ ಸಾಗಾಟ ಮಾಡುವ ಸಾಧ್ಯತೆಗಳು ದಟ್ಟವಾಗಿದ್ದು, ಚುನಾವಣಾ ಅಧಿಕಾರಿಗಳು ನ್ಯಾಯ ಹಾಗೂ ಪಾರದರ್ಶಕ ಚುನಾವಣೆಗೆ ಇನ್ನಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಬೇಕಿದೆ.

36.82 ಲಕ್ಷ ರೂ. ಮೌಲ್ಯದ 9,010 ಲೀ. ಮದ್ಯ ಜಪ್ತಿ: ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಘೋಷಣೆಗೊಂಡ ದಿನದಿಂದ ಇದುವರೆಗೂ ರೂ. 36,82,114 ಲಕ್ಷ ಮೌಲ್ಯದ 9,010 ಲೀ. ಮದ್ಯವನ್ನು ಅಬಕಾರಿ ಹಾಗೂ ಪೊಲೀಸ್‌ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಿದ್ದಾರೆ.

ಆ ಪೈಕಿ ಅಬಕಾರಿ ಇಲಾಖೆ ಅಧಿಕಾರಿಗಳು ಒಟ್ಟು 8,623 ಲೀ. ಮದ್ಯ ವಶಕ್ಕೆ ಪಡೆದಿದ್ದು, ಅದರ ಒಟ್ಟು ಮೌಲ್ಯ 35,43,586 ರೂ. ಆಗಿದೆ. ಇದುವರೆಗೂ ಮದ್ಯ ಸಾಗಾಟಕ್ಕೆ ಬಳಕೆ ಮಾಡುತ್ತಿದ್ದ 25 ದ್ವಿಚಕ್ರವಾಹನ ವಾಹನ, 1 ತ್ರಿಚಕ್ರ ಹಾಗೂ 2 ನಾಲ್ಕು ಚಕ್ರದ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಅದರ ಒಟ್ಟು ಮೌಲ್ಯ 17,44 ಲಕ್ಷ ರೂ. ಆಗಿದೆ.

ಇನ್ನೂ ಪೊಲೀಸ್‌ ಇಲಾಖೆ ಜಿಲ್ಲೆಯಲ್ಲಿ ಇದುವರೆಗೂ ಒಟ್ಟು 386 ಲೀ. ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮದ್ಯವನ್ನು ವಶಕ್ಕೆ ಪಡೆದಿದೆ. ಅದರ ಮೌಲ್ಯ 1,38,528 ರೂ., 179 ರೇಷ್ಮೆ ಸೀರೆ, 3 ಕಾರುಗಳನ್ನು ಜಪ್ತಿ ಮಾಡಿದ್ದು, ಅದರ ಒಟ್ಟು ಮೌಲ್ಯ 32,81,00 ರೂ. ಆಗಿದೆ.

ವದಂತಿಗಳಿಗೆ ಹೈರಾಣಾಗುತ್ತಿರುವ ಅಧಿಕಾರಿಗಳು: ಜಿಲ್ಲೆಯಲ್ಲಿ ಲೋಕಸಭಾ ಚುನಾವಣಾ ಬಿಸಿ ರಂಗೇರುತ್ತಿದ್ದಂತೆ ರಾಜಕೀಯ ಪಕ್ಷಗಳು ಅಧಿಕಾರಿಗಳನ್ನು ದಿಕ್ಕು ತಪ್ಪಿಸಲು ವದಂತಿಗಳನ್ನು ಹಬ್ಬಿಸುತ್ತಿರುವುದು ಸಾಮನ್ಯವಾಗಿದೆ. ಸುಖಾ ಸುಮ್ಮನೆ ಚುನಾವಣಾ ಕಂಟ್ರೋಲ್‌ ರೂಂಗೆ ದೂರವಾಣಿ ಕರೆ ಮಾಡಿ ಅಲ್ಲಿ ಮದ್ಯ ಹಂಚುತ್ತಿದ್ದಾರೆ.

ಆ ಊರಲ್ಲಿ ಮತದಾರರಿಗೆ ಹಣ ಹಂಚುತ್ತಿದ್ದಾರೆಂದು ಹೇಳಿ ಅಧಿಕಾರಿಗಳಿಗೆ ತಿಳಿಸುತ್ತಿದ್ದು, ಅಧಿಕಾರಿಗಳು ಎದ್ದು ಬಿದ್ದು ಹೋಗುವಷ್ಟರಲ್ಲಿ ಬರೀ ಅದು ವಾಸ್ತವ ಸಂಗತಿ ಆಗದೇ ವದಂತಿ ಎನ್ನುವುದು ತಿಳಿಯುತ್ತಿದೆ. ಇದರಿಂದ ನಿತ್ಯ ಬರುತ್ತಿರುವ ವದಂತಿ ಕರೆಗಳನ್ನು ಅತ್ತ ನಿರ್ಲಕ್ಷಿಸಲಾಗದೇ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಹೋಗುತ್ತಿದ್ದಾರೆ. ಮತ್ತೂಂದೆಡೆ ಅಧಿಕಾರಿಗಳನ್ನು ದಿಕ್ಕು ತಪ್ಪಿಸಿ ರಾಜಕೀಯ ಪಕ್ಷಗಳು ಮತದಾರರಿಗೆ ಮದ್ಯ, ಹಣದ ಹೊಳೆ ಹರಿಸುತ್ತಿವೆ.

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next