ಚಿತ್ರದುರ್ಗ: ಲೋಕಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ನೂತನ ಕಟ್ಟಡದಲ್ಲಿ ಮೇ 23 ರಂದು ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಲಿದ್ದು, 384 ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಕಲಂ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ತಿಳಿಸಿದರು.
ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮತಗಳ ಎಣಿಕೆಗಾಗಿ 128 ಮೈಕ್ರೋ ಅಬ್ಸರ್ವರ್, 128 ಮತ ಎಣಿಕೆ ಮೇಲ್ವಿಚಾರಕರು ಹಾಗೂ 128 ಮತ ಎಣಿಕೆ ಸಹಾಯಕರು ಸೇರಿದಂತೆ ಒಟ್ಟು 384 ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಮೇ 23 ರಂದು ಬೆಳಿಗ್ಗೆ 6 ಗಂಟೆಗೆ ಮತ ಎಣಿಕೆ ಕೇಂದ್ರಕ್ಕೆ ಅಧಿಕಾರಿಗಳು ಆಗಮಿಸುವರು. ಮತ ಎಣಿಕೆ ಕಾರ್ಯಕ್ಕೆ ನೇಮಕಗೊಂಡಿರುವ ಅಧಿಕಾರಿಗಳು, ಸಿಬ್ಬಂದಿಗಳಿಗೆ ಆಯಾ ತಾಲೂಕುಗಳಿಂದ ನಗರಕ್ಕೆ ಆಗಮಿಸಲು ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಮತಗಳ ಎಣಿಕೆ ನಂತರ ಪ್ರತಿ ವಿಧಾನಸಭಾ ಕ್ಷೇತ್ರದ 5 ಮತಗಟ್ಟೆಗಳ ವಿವಿ ಪ್ಯಾಟ್‌ಗಳನ್ನು ರ್‍ಯಾಂಡಮ್ ಆಗಿ ಆಯ್ಕೆ ಮಾಡಿ ಮತಗಳ ಎಣಿಕೆ ಮಾಡಲಾಗುವುದು ಎಂದರು.
ಸರ್ಕಾರಿ ವಿಜ್ಞಾನ ಕಾಲೇಜಿನ ಹೊಸ ಕಟ್ಟಡದ ನೆಲ ಮಹಡಿಯ ಕೊಠಡಿ ಸಂಖ್ಯೆ 97 ರಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಳ ಎಣಿಕೆ ನಡೆಯಲಿದೆ. ಕೊಠಡಿ ಸಂಖ್ಯೆ 101 ರಲ್ಲಿ ಹೊಸದುರ್ಗ, ಕೊಠಡಿ ಸಂಖ್ಯೆ 136 ರಲ್ಲಿ ಶಿರಾ ಹಾಗೂ ಕೊಠಡಿ ಸಂಖ್ಯೆ 137 ರಲ್ಲಿ ಪಾವಗಡ ಕ್ಷೇತ್ರ ವ್ಯಾಪ್ತಿಯ ಮತ ಎಣಿಕೆ ಮಾಡಲಾಗುವುದು. ಮೊದಲನೇ ಮಹಡಿಯ ಕೊಠಡಿ ಸಂಖ್ಯೆ 99ರಲ್ಲಿ ಚಿತ್ರದುರ್ಗ, ಕೊಠಡಿ ಸಂಖ್ಯೆ 98ರಲ್ಲಿ ಚಳ್ಳಕೆರೆ, ಕೊಠಡಿ ಸಂಖ್ಯೆ 100ರಲ್ಲಿ ಹಿರಿಯೂರು ಹಾಗೂ ಕೊಠಡಿ ಸಂಖ್ಯೆ 102 ರಲ್ಲಿ ಹೊಳಲ್ಕೆರೆ ಕ್ಷೇತ್ರ ವ್ಯಾಪ್ತಿಯ ಮತಗಳ ಎಣಿಕೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಮತಗಳ ಎಣಿಕೆ ಕೈಗೊಳ್ಳಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 14 ಟೇಬಲ್ಗಳಂತೆ 8 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗಾಗಿ 112 ಟೇಬಲ್ಗಳು ಹಾಗೂ ಅಂಚೆ ಮತಪತ್ರಗಳ ಎಣಿಕೆಗಾಗಿ ಪ್ರತ್ಯೇಕ 4 ಟೇಬಲ್ಗಳನ್ನು ಹಾಕಲಾಗಿದೆ. ಮೊಳಕಾಲ್ಮೂರು ಕ್ಷೇತ್ರದಲ್ಲಿ ಗರಿಷ್ಠ 21 ಸುತ್ತು, ಚಳ್ಳಕೆರೆ-19, ಚಿತ್ರದುರ್ಗ ಹಾಗೂ ಹಿರಿಯೂರು-21, ಹೊಸದುರ್ಗ ಹಾಗೂ ಪಾವಗಡ-18, ಹೊಳಲ್ಕೆರೆ-22, ಶಿರಾ- 20 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ ಎಂದರು.
ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣ ತರುವಂತಿಲ್ಲ. ಮೊಬೈಲ್, ಪೇಜರ್, ಎಲೆಕ್ಟ್ರಾನಿಕ್ ಗ್ಲಾಡ್‌ಗೇಟ್ಸ್‌ಗಳು, ಕ್ಯಾಲ್ಕುಲೇಟರ್, ಸಿಗರೇಟ್, ಬೀಡಿ, ಬೆಂಕಿಪೊಟ್ಟಣ, ಲೈಟರ್, ನೀರಿನ ಬಾಟಲಿಗಳು ಅಥವಾ ಯಾವುದೇ ಬಾಟಲಿಗಳು, ಛತ್ರಿ, ಹರಿತವಾದ ಆಯುಧಗಳು, ಸ್ಫೋಟಕ ವಸ್ತುಗಳು, ಬೆಂಕಿ ಹತ್ತುವ ಪದಾರ್ಥಗಳು, ಇಂಕ್ ಪೆನ್‌ಗಳನ್ನು ಎಣಿಕೆ ಕೇಂದ್ರದೊಳಗೆ ತರುವಂತಿಲ್ಲ ಎಂದು ತಿಳಿಸಿದರು.
ನಿಷೇಧಾಜ್ಞೆ ಜಾರಿ: ಮತ ಎಣಿಕೆ ನಡೆಯಲಿರುವ ಮೇ 23 ರಂದು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಉದ್ದೇಶದಿಂದ ಹಾಗೂ ಅಹಿತಕರ ಘಟನೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಕಲಂ 144 ಸೆಕ್ಷನ್ ಅನ್ವಯ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅಲ್ಲದೆ ಮದ್ಯಪಾನ ಹಾಗೂ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಸಂಗಪ್ಪ ಇದ್ದರು.