Advertisement

ಜಂಬೂರು: ಮಳೆಹಾನಿ ಸಂತ್ರಸ್ತರಿಗೆ 383 ನೂತನ ಮನೆಗಳ ಹಸ್ತಾಂತರ

08:21 AM Jun 06, 2020 | mahesh |

ಮಡಿಕೇರಿ: ಜಿಲ್ಲಾಡಳಿತ, ರಾಜೀವ್‌ ಗಾಂಧಿ ವಸತಿ ನಿಗಮ ನಿಯಮಿತದ ವತಿಯಿಂದ ಪುನರ್ವಸತಿ ಯೋಜನೆಯಡಿ ಜಂಬೂರಿನಲ್ಲಿ ಮಳೆಹಾನಿ ಸಂತ್ರಸ್ತರಿಗಾಗಿ ನಿರ್ಮಿಸಿರುವ 383 ಮನೆಗಳನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಹಾಗೂ ಕಂದಾಯ ಸಚಿವ ಆರ್‌. ಅಶೋಕ್‌ ಅವರು ಮನೆಯ ಹಕ್ಕು ಪತ್ರ ಹಾಗೂ ಕೀಲಿಕೈ ನೀಡುವ ಮೂಲಕ ಗುರುವಾರ ಹಸ್ತಾಂತರಿಸಿದರು.

Advertisement

ಸೋಮವಾರಪೇಟೆ ತಾಲೂಕಿನ ಜಂಬೂರು ಗ್ರಾಮದ ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾರ್ಯಪ್ಪ ಬಡಾವಣೆಯಲ್ಲಿ ಸಂತ್ರಸ್ತರಿಗೆ ಮನೆಗಳನ್ನು ಹಸ್ತಾಂತರಿಸುವ ಕಾರ್ಯಕ್ರಮ ನಡೆಯಿತು. ಜಿಲ್ಲೆಯಲ್ಲಿ 2018ರ ಆಗಸ್ಟ್‌ನಲ್ಲಿ ಧಾರಾಕಾರ ಮಳೆಗೆ ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನ ಹಲವು ಕುಟುಂಬಗಳು ಮನೆ ಕಳೆದುಕೊಂಡಿದ್ದವು. ಆ ಸಂತ್ರಸ್ತ ಕುಟುಂಬಗಳಿಗೆ ಶಾಶ್ವತ ಸೂರು ಕಲ್ಪಿಸುವ ನಿಟ್ಟಿನಲ್ಲಿ ಸರಕಾರ ಪ್ರತೀ ಮನೆಗೆ 9.85 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಮನೆಗಳನ್ನು ನಿರ್ಮಿಸಿದೆ.

ಕರ್ಣಂಗೇರಿ ಗ್ರಾಮದಲ್ಲಿ ನಿರ್ಮಿಸಿದ 35 ಮನೆಗಳನ್ನು ಈಗಾಗಲೇ ಸಂತ್ರಸ್ತರಿಗೆ ಹಸ್ತಾಂತರಿಸಲಾಗಿದೆ. ಅಲ್ಲದೆ ಸ್ವಂತ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳಲು ಬಯಸಿದ್ದ 65 ಫ‌ಲಾನುಭವಿಗಳಿಗೆ ತಲಾ 9.85 ಲಕ್ಷ ಮೊತ್ತವನ್ನು ಪಾವತಿಸಲಾಗಿದೆ. ಶಾಸಕ‌ರಾದ ಎಂ.ಪಿ. ಅಪ್ಪಚ್ಚು ರಂಜನ್‌, ಕೆ.ಜಿ. ಬೋಪಯ್ಯ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್‌, ಸಂಸದ ಪ್ರತಾಪ್‌ಸಿಂಹ, ವಿಧಾನ ಪರಿಷತ್‌ ಸದಸ್ಯರಾದ ಎಂ.ಪಿ. ಸುನೀಲ್‌ ಸುಬ್ರಮಣಿ, ಶಾಂತೆಯಂಡ ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌, ಎಸ್‌ಪಿ ಸುಮನ್‌ ಡಿ. ಪನ್ನೇಕರ್‌, ಜಿ.ಪಂ. ಸಿಇಒ ಕೆ.ಲಕ್ಷ್ಮೀಪ್ರಿಯ ಮೊದಲಾದವರು ಉಪಸ್ಥಿತರಿದ್ದರು.

ಇನ್ಫೋಸಿಸ್‌ನಿಂದ ಸದ್ಯದಲ್ಲೇ 100 ಮನೆ
ಇನ್ಫೋಸಿಸ್‌ ವತಿಯಿಂದಲೂ 100 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಆ ಮನೆಗಳ ಕಾಮಗಾರಿ ಸದ್ಯದಲ್ಲೇ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ತಿಳಿಸಿದರು.

10 ಕೋ.ರೂ. ವೆಚ್ಚದಲ್ಲಿ ಭವನ ನಿರ್ಮಾಣ
ಮಳೆಹಾನಿ ಸಂತ್ರಸ್ತರ ನೂತನ ಜಂಬೂರು ಬಡಾವಣೆಯಲ್ಲಿ ಸುಸಜ್ಜಿತ ಪ್ರಾಕೃತಿಕ ವಿಕೋಪ ನಿರ್ವಹಣ ಭವನವನ್ನು ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next