Advertisement
ಪುನೀತ್ ಇಸ್ಸಾರ್ ಬಾಲಿವುಡ್ ನಟ, ರಂಗಭೂಮಿ ಕಲಾವಿದ, ಬಿ.ಆರ್.ಛೋಪ್ರಾ ನಿರ್ದೇಶನದ “ಮಹಾಭಾರತ” ಧಾರವಾಹಿಯಲ್ಲಿ ದುರ್ಯೋಧನ ಪಾತ್ರದ ಮೂಲಕ ಖ್ಯಾತಿಗಳಿಸಿದ ಹೆಮ್ಮೆ ಇವರದ್ದಾಗಿದೆ. ಪುನೀತ್ ಎಂಬ ವಿಲನ್ ಪಾತ್ರಧಾರಿ ದುರ್ಯೋಧನನಾಗಿ ಮಿಂಚುವ ಮೊದಲು ಬಾಲಿವುಡ್ ನ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಸದ್ದು ಮಾಡಿದ್ದ, ಬಿಗ್ ಬಿ ನಟಿಸಿದ್ದ “ಕೂಲಿ” ಸಿನಿಮಾದ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ಆದರೆ ಅದೇನೋ ದೃಢಕಾಯದ, ಸ್ಟಂಟ್ ಗೆ ಹೇಳಿ ಮಾಡಿಸಿದಂತಿದ್ದ ಪುನೀತ್ ಬದುಕಿಗೆ ಅದೊಂದು ಘಟನೆ ಕಪ್ಪು ಚುಕ್ಕೆಯಾಗಿಬಿಟ್ಟಿತ್ತು. ಅಂದಿನ ಘಟನೆಗೆ ರೆಕ್ಕೆ ಪುಕ್ಕ ಸೇರಿ ಪುನೀತ್ ಗೆ ತಲೆಎತ್ತದಂತೆ ಮಾಡಿಬಿಟ್ಟಿತ್ತು ಎಂಬುದು ಬಹುತೇಕರಿಗೆ ತಿಳಿದಿರಲಿಕ್ಕಿಲ್ಲ!
ಸಲ್ಮಾನ್ ಖಾನ್ ನಟನೆಯ ಪ್ರೈಡ್ ಆ್ಯಂಡ್ ಹಾನರ್ ಸಿನಿಮಾ ನಿರ್ದೇಶಿಸಿದ್ದ ಪುನೀತ್ ಇಸ್ಸಾರ್ 1997ರಲ್ಲಿ ಬಿಡುಗಡೆಯಾಗಿದ್ದ ಬಾರ್ಡರ್ ಸಿನಿಮಾದಲ್ಲಿ ನಟಿಸಿದ್ದರು. 1983ರ ಪುರಾನಾ ಮಂದಿರ್ ಎಂಬ ಹಾರರ್ ಚಿತ್ರದಲ್ಲಿ ನಟಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. 1980, 90ರ ದಶಕದಲ್ಲಿ ವಿಲನ್ ಆಗಿ ಸುಮಾರು 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಝಾಕ್ಮಿ ಔರತ್, ಕಲ್ ಕೀ ಅವಾಝ್, ತೇಜಾ, ಪ್ರೇಮ್ ಶಕ್ತಿ, ಮೋಹನ್ ಲಾಲ್ ನಟನೆಯ ಯೋಧಾ, ಶಾರುಖ್ ಖಾನ್ ನಟನೆಯ ರಾಮ್ ಜಾನೆ ಸಿನಿಮಾದಲ್ಲಿ ನಟಿಸಿದ್ದರು.
Related Articles
1982ರ ಜುಲೈ 26ರಂದು ಬೆಂಗಳೂರು ಯೂನಿರ್ವಸಿಟಿ ಕ್ಯಾಂಪಸ್ ನಲ್ಲಿ ಸೂಪರ್ ಸ್ಟಾರ್ ಅಮಿತಾಬ್ ನಟನೆಯ “ಕೂಲಿ” ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಅಲ್ಲಿ ಸಹ ನಟ ಪುನೀತ್ ಇಸ್ಸಾರ್ ಜತೆ ಫೈಟಿಂಗ್ ದೃಶ್ಯದ ಚಿತ್ರೀಕರಣ ನಡೆಯುತ್ತಿದ್ದಾಗ ಬಚ್ಚನ್ ಮೇಲಕ್ಕೆ ಹಾರಿ ಟೇಬಲ್ ಮೇಲೆ ನಿಲ್ಲಬೇಕಾಗಿತ್ತು. ಆದರೆ ಅಮಿತಾಬ್ ಆಯತಪ್ಪಿ ಬಿದ್ದ ಪರಿಣಾಮ ಬೆನ್ನು ಮೂಳೆಗೆ ಬಲವಾದ ಪೆಟ್ಟು ಬಿದ್ದಿತ್ತು. ಇದರಿಂದಾಗಿ ಅಮಿತಾಬ್ ಆರು ತಿಂಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿತ್ತು. ಅಷ್ಟೇ ಅಲ್ಲ ಅಮಿತಾಬ್ ಗೆ ಮರುಜನ್ಮ ನೀಡಿದ ಘಟನೆಯಾಗಿತ್ತು. ಹೀಗಾಗಿ ಕೂಲಿ ಸಿನಿಮಾ ಬಿಡುಗಡೆಗೂ ಮುನ್ನ ಹೆಚ್ಚು ಸದ್ದು ಮಾಡುವಂತಾಗಿತ್ತು. ಈ ಸುದ್ದಿ ದೇಶ, ವಿದೇಶಗಳಲ್ಲಿ ಹರಿದಾಡುವ ಮೂಲಕ ಬಚ್ಚನ್ ಆರೋಗ್ಯವಂತರಾಗಿ ಚೇತರಿಸಿಕೊಳ್ಳುವಂತಾಗಲಿ ಎಂದು ಪ್ರಾರ್ಥನೆ, ಪೂಜೆ ನಡೆದಿತ್ತು. ಅಂದು ರಾಜೀವ್ ಗಾಂಧಿ ಕೂಡಾ ತಮ್ಮ ವಿದೇಶ ಪ್ರವಾಸವನ್ನು ರದ್ದುಗೊಳಿಸಿ ಬಚ್ಚನ್ ಆರೋಗ್ಯ ವಿಚಾರಿಸುವ ಮೂಲಕ ಕುಟುಂಬದ ಜತೆಗಿದ್ದಿದ್ದರು!
Advertisement
ಬಚ್ಚನ್ ಗೆ ಅಂದು 200 ಮಂದಿ ರಕ್ತದಾನಿಗಳಿಂದ 60 ಬಾಟಲಿ ರಕ್ತ ನೀಡಲಾಗಿತ್ತು. (ಅದರಲ್ಲಿ ಒಬ್ಬ ಹೆಪಟೈಟೀಸ್ ಬಿ ವೈರಸ್ ಇದ್ದ ವ್ಯಕ್ತಿ ರಕ್ತ ದಾನ ಮಾಡಿಬಿಟ್ಟಿದ್ದ. ಇದು 2000ನೇ ಇಸವಿ ಹೊತ್ತಿಗೆ ಬಚ್ಚನ್ ಲಿವರ್ ಅನ್ನು ಶೇ.75ರಷ್ಟು ಹಾನಿಗೊಳಿಸಿಬಿಟ್ಟಿತ್ತು.) ಅಂತೂ ಬಚ್ಚನ್ ಚೇತರಿಸಿಕೊಂಡು 1983ರ ಜನವರಿ 7ರಂದು ಶೂಟಿಂಗ್ ಗೆ ಆಗಮಿಸಿದ್ದರು.
ಈ ಎಲ್ಲಾ ಸದ್ದುಗದ್ದಲದ ನಡುವೆ ಅಪವಾದ ಹೊತ್ತು ತಿರುಗಿದ್ದು ಮಾತ್ರ ಪುನೀತ್ ಇಸ್ಸಾರ್! ಘಟನೆ ಆಕಸ್ಮಿಕವಾಗಿ ನಡೆದಿದ್ದರೂ ಕೂಡಾ ಪುನೀತ್ ಅವರಿಂದಾಗಿಯೇ ಬಚ್ಚನ್ ಗೆ ಈ ಸ್ಥಿತಿ ಬರುವಂತಾಯ್ತು ಎಂಬ ಸುದ್ದಿ ಅಂದು ಹೆಚ್ಚು ಸದ್ದು ಮಾಡಿತ್ತು. ತುಂಬಾ ವರ್ಷಗಳ ನಂತರ ಪುನೀತ್ ಈ ಬಗ್ಗೆ ಬಾಯ್ಬಿಟ್ಟಿದ್ದರು. ಹೌದು ತಪ್ಪು ಗ್ರಹಿಕೆಯಿಂದಾಗಿ ನನ್ನ ಸಿನಿಮಾ ಜೀವನಕ್ಕೆ ಆ ಘಟನೆ ದೊಡ್ಡ ಹೊಡೆತ ಕೊಟ್ಟಿತ್ತು ಎಂದು ಹೇಳಿದ್ದರು. ಅಂದು ನಡೆದ ಘಟನೆಗೆ ನಾನು ಕಾರಣನಾಗಿಲ್ಲವಾಗಿತ್ತು. ಆದರೆ ಬಾಲಿವುಡ್ ನಲ್ಲಿ ಅದರಿಂದ ನನಗೆ ಅವಕಾಶಗಳೇ ಕಳೆದುಹೋಗಿದ್ದವು. ಸಿನಿಮಾ ಮರು ಚಿತ್ರೀಕರಣ ಆರಂಭಗೊಂಡಾಗ ಖುದ್ದು ಬಚ್ಚನ್ ಬಂದು ನನಗೆ ಸಮಾಧಾನ ಹೇಳಿದ್ದರು ಎಂದು ಹಳೇ ಘಟನೆಯನ್ನು ಇಸ್ಸಾರ್ ಒಮ್ಮೆ ಮೆಲುಕು ಹಾಕಿದ್ದರು. ಹೀಗೆ ಪುನೀತ್ ನಂತರ ಬಿಆರ್ ಛೋಪ್ರಾ ಅವರ ಮಹಾಭಾರತ (1988ರಲ್ಲಿ) ಧಾರವಾಹಿಯಲ್ಲಿ ದುರ್ಯೋಧನ ಪಾತ್ರದೊಂದಿಗೆ ಜನಪ್ರಿಯತೆ ಗಳಿಸಿಕೊಂಡರುವುದು ನಮ್ಮ ಕಣ್ಣಮುಂದಿರುವ ಇತಿಹಾಸ.
ಫೈಟ್ ದೃಶ್ಯದಲ್ಲಿ ಅಮಿತಾಬ್ ಗಂಭೀರವಾಗಿ ಗಾಯಗೊಂಡು ಚೇತರಿಸಿಕೊಂಡ ಬಳಿಕ “ಕೂಲಿ” ಸಿನಿಮಾದ ಕ್ಲೈಮ್ಯಾಕ್ಸ್ ಅನ್ನು ಚಿತ್ರದ ನಿರ್ದೇಶಕ ಮನಮೋಹನ್ ದೇಸಾಯಿ ಸಂಪೂರ್ಣ ಬದಲಾಯಿಸಿಬಿಟ್ಟಿದ್ದರು. ಕೂಲಿ ಸಿನಿಮಾದ ಮೂಲ ಕಥೆಯಲ್ಲಿ ಖಾದರ್ ಖಾನ್ ಗುಂಡೇಟಿಗೆ ಅಮಿತಾಬ್ ಬಚ್ಚನ್ ಸಾವನ್ನಪ್ಪುವುದು ಎಂದಾಗಿತ್ತು! ಆದರೆ ಫೈಟ್ ದೃಶ್ಯದಲ್ಲಿ ಗಾಯಗೊಂಡು ಅಮಿತಾಬ್ ಚೇತರಿಸಿಕೊಂಡ ನಂತರ ದೇಸಾಯಿ ಮನಸ್ಸು ಬದಲಾಯಿಸಿದ್ದರು. ಒಂದು ವೇಳೆ ಬಚ್ಚನ್ ಸಾವನ್ನಪ್ಪಿದರೆ ಪ್ರೇಕ್ಷಕರ ಮೇಲೆ ನೆಗೆಟೀವ್ ಪರಿಣಾಮ ಬೀರುತ್ತದೆ ಎಂದು ಭಾವಿಸಿ “ಹೀರೋ” ಗುಂಡೇಟು ತಿಂದ ಮೇಲೆ ಆಪರೇಶನ್ ಬಳಿಕ ಚೇತರಿಸಿಕೊಳ್ಳುವುದಾಗಿ ಕಥೆಯನ್ನು ಬದಲಾಯಿಸಿಬಿಟ್ಟಿದ್ದರು! ಆ ನಂತರ ಕೂಲಿ ಸಿನಿಮಾ ರಿಲೀಸ್ ಆಗಿದ್ದು ಸೂಪರ್ ಹಿಟ್ ಆಗಿದ್ದು, ಬಚ್ಚನ್ ಅದೃಷ್ಟ
ಖುಲಾಯಿಸಿದ್ದು ಎಲ್ಲವೂ ನಮ್ಮ ಇತಿಹಾಸವಾಗಿದೆ. *ನಾಗೇಂದ್ರ ತ್ರಾಸಿ