ಹೈದರಾಬಾದ್: ತೆಲಂಗಾಣದ ಜಗಿತ್ಯಾಲ್ ಪಟ್ಟಣದಲ್ಲಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರನ್ನು ಸುಟ್ಟು ಕೊಲ್ಲಲಾಗಿದೆ. ಮೃತರನ್ನು ಪವನ್ ಕುಮಾರ್ ಎಂದು ಗುರುತಿಸಲಾಗಿದೆ.
ಮೃತ ಪವನ್ ಅವರ ಪತ್ನಿ ಕೃಷ್ಣವೇಣಿಯ ಸಹೋದರ ಹೃದಯಾಘಾತದಿಂದ ಸಾವನ್ನಪ್ಪಿದ್ದು ಇದಕ್ಕೆ ತನ್ನ ಪತಿ ಮಾಡಿದ ಮಾಟದಿಂದಲೇ ಸಹೋದರ ಸಾವನ್ನಪ್ಪಿದ್ದಾನೆ ಎಂದು ಪತ್ನಿ ಹಾಗೂ ಆಕೆಯ ಕುಟುಂಬದವರು ನಂಬಿದ್ದರು. ಅದೇ ಕಾರಣದಿಂದ ಪತ್ನಿ ಕುಟುಂಬಸ್ಥರು ಪವನ್ ನನ್ನು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಪವನ್ ಕುಮಾರ್ ತಂದೆ ನೀಡಿದ ದೂರಿನ ಆಧಾರದ ಹಿನ್ನೆಲೆಯಲ್ಲಿ ಪೊಲೀಸರು ಪತ್ನಿ ಕೃಷ್ಣವೇಣಿ ಮತ್ತು ಆಕೆಯ ಕುಟುಂಬದ ಐವರನ್ನು ಬಂಧಿಸಿದ್ದಾರೆ.
ಪತ್ನಿಯ ಸಹೋದರ ಹೃದಯಾಘಾತದಿಂದ ಅಸುನೀಗಿದ್ದ ಹಿನ್ನೆಲೆಯಲ್ಲಿ ಸಂತಾಪ ಸೂಚಿಸುವ ನಿಟ್ಟಿನಲ್ಲಿ ಪವನ್ ಕುಮಾರ್ ಅವರ ಮನೆಗೆ ತೆರಳಿದ್ದರು. ಈ ಸಂದರ್ಭದಲ್ಲಿಯೇ ಅವರನ್ನು ಬಲವಂತಪುರ ಗ್ರಾಮದಲ್ಲಿರುವ ಆಶ್ರಮಕ್ಕೆ ಕರೆದೊಯ್ದು ಕೊಠಡಿಯೊಂದರಲ್ಲಿ ಕೂಡಿ ಹಾಕಿದ್ದು. ಬಳಿಕ ಪವನ್‌ನನ್ನು ಕುರ್ಚಿಯಲ್ಲಿ ಕುಳ್ಳಿರಿಸಿ, ಕೈ ಕಾಲುಗಳನ್ನು ಕಟ್ಟಿ ಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಈ ವೇಳೆ ನೋವಿನಿಂದ ಚೀರಾಡುತಿದ್ದ ಪವನ್ ನ ಧ್ವನಿ ಕೇಳಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಇದನ್ನೂ ಓದಿ:ಜ.1ರ ಬಳಿಕ ಲ್ಯಾಂಡ್‌ಲೈನ್‌ನಿಂದ ಮೊಬೈಲ್‌ಗೆ ಡಯಲ್ ಮಾಡಲು ‘0’ ಒತ್ತಿ
ಸಹೋದರನ ಸಾವಿಗೆ ಪವನ್ ಮಾಟ ಮಾಡಿಸಿದ್ದೇ ಕಾರಣ ಎಂದು ಪತ್ನಿಯ ಮನೆಯವರು ನಂಬಿ, ಪವನ್‌ರನ್ನು ಕೊಲ್ಲಲು ಯೋಜನೆ ಹಾಕಿದ್ದರು ಎನ್ನಲಾಗಿದ್ದು, ಪ್ರಕರಣದ ಬಗ್ಗೆ ತನಿಖೆ ಮುಂದುವರಿದಿದೆ.