Advertisement

ಹೆಮ್ಮಾಡಿ –ಶಿರೂರು ವರೆಗಿನ 38 ಕಿ.ಮೀ. ಕಾಮಗಾರಿ ಅಲ್ಲಲ್ಲಿ ಅಪೂರ್ಣ

10:32 AM Oct 04, 2019 | Team Udayavani |

ಕುಂದಾಪುರ: ನಗರದಿಂದಾಚೆಗೆ ಉಡುಪಿ ಜಿಲ್ಲೆಯ ಗಡಿಭಾಗವಾದ ಶಿರೂರು ತನಕವೂ ರಾಷ್ಟ್ರೀಯ ಹೆದ್ದಾರಿ 66 ಸುಸ್ಥಿತಿಯಲ್ಲಿಲ್ಲ. ಹೆಮ್ಮಾಡಿ ಜಂಕ್ಷನ್‌ನಿಂದ ಶಿರೂರು ವರೆಗಿನ 38 ಕಿ.ಮೀ. ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಅರ್ಧಂಬರ್ಧ ಕಾಮಗಾರಿ ವಾಹನ ಸವಾರರಲ್ಲಿ ಗೊಂದಲ ಮೂಡಿಸಿ ಅಪಘಾತಕ್ಕೆ ದಾರಿ ಮಾಡಿಕೊಡುತ್ತಿದೆ.

Advertisement

ಕುಂದಾಪುರದಿಂದ ಗೋವಾ ಗಡಿ ವರೆಗಿನ 189.6 ಕಿ.ಮೀ. ಉದ್ದದ ಚತುಷ್ಪಥಕ್ಕೆ 2,639 ಕೋ.ರೂ. ಮಂಜೂರಾಗಿತ್ತು. ಈ ಪೈಕಿ ಕುಂದಾಪುರದಿಂದ ಹೊನ್ನಾವರ ವರೆಗಿನ ಕಾಮಗಾರಿಯ ಗುತ್ತಿಗೆಯ ಹೊಣೆಯನ್ನು ಐಆರ್‌ಬಿ ಸಂಸ್ಥೆಗೆ ವಹಿಸಲಾಗಿದೆ. 2015ರ ಜನವರಿಯಲ್ಲಿ ಆರಂಭಗೊಂಡ ಕಾಮಗಾರಿ 2108ರೊಳಗೆ ಮುಗಿಯಬೇಕಿತ್ತು. ಆದರೆ ಮುಗಿದಿಲ್ಲ. ಕಾರಣ ಕೇಳಿದರೆ, ಅಧಿಕಾರಿಗಳು ಗುತ್ತಿಗೆ ಸಂಸ್ಥೆಯ ಮೇಲೆ – ಕಾಮಗಾರಿ ನಿರ್ವಹಿಸುತ್ತಿರುವ ಐಆರ್‌ಬಿಯವರು ಅಧಿಕಾರಿಗಳ ಮೇಲೆ ಗೂಬೆ ಕೂರಿಸುತ್ತಾರೆ.

ಏಳು ಅಂಡರ್‌ಪಾಸ್‌
ಹೆಮ್ಮಾಡಿಯಿಂದ ಶಿರೂರು ಗಡಿಭಾಗದವರೆಗಿನ 38 ಕಿ.ಮೀ. ವ್ಯಾಪ್ತಿಯಲ್ಲಿ ಪ್ರತಿ 5 ಕಿ.ಮೀ.ಗೊಂದರಂತೆ 7 ಅಂಡರ್‌ಪಾಸ್‌ಗಳಿವೆ. ಮುಳ್ಳಿಕಟ್ಟೆ-ತ್ರಾಸಿ ಮಧ್ಯೆ, ನಾವುಂದದ ಮಸ್ಕಿ, ಕಿರಿಮಂಜೇಶ್ವರ, ನಾಯ್ಕನಕಟ್ಟೆ, ಉಪ್ಪುಂದ, ಬೈಂದೂರು ಹಾಗೂ ಶಿರೂರು ಪೇಟೆಯಲ್ಲಿ ಅಂಡರ್‌ ಪಾಸ್‌ ನಿರ್ಮಾಣ ಯೋಜನೆಯಿದ್ದು, ಬೈಂದೂರು ಪೇಟೆ ಹೊರತುಪಡಿಸಿ ಉಳಿದೆಡೆ ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಅಲ್ಲೆಲ್ಲ ಸರ್ವಿಸ್‌ ರಸ್ತೆಗಳನ್ನೂ ನಿರ್ಮಿಸಲಾಗಿದೆ.

1 ಕಿ.ಮೀ. ಒಳಗೆ 2 ಅಂಡರ್‌ಪಾಸ್‌
ವಿಚಿತ್ರವೆಂದರೆ ಕೇವಲ 1 ಕಿ.ಮೀ. ವ್ಯಾಪ್ತಿಯೊಳಗೆ 2 ಅಂಡರ್‌ಪಾಸ್‌ಗಳು ಸಿಗುತ್ತವೆ. ನಾಯ್ಕನಕಟ್ಟೆ ಮತ್ತು ಉಪ್ಪುಂದ ಪೇಟೆಯ ನಡುವಿನ ಅಂತರ 1 ಕಿ.ಮೀ. ಕೂಡ ಇಲ್ಲ. ಈ ಮಧ್ಯೆ ಎರಡು ಅಂಡರ್‌ಪಾಸ್‌ ದಾಟಿ ಮುಂದಕ್ಕೆ ಸಾಗಬೇಕಾದ ಸಂಕಷ್ಟ ವಾಹನ ಸವಾರರದ್ದು. ಇಲ್ಲಿ ಎರಡೆರಡು ಅಂಡರ್‌ಪಾಸ್‌ ಅಗತ್ಯವಿರಲಿಲ್ಲ ಎನ್ನುವುದು ಸಾರ್ವಜನಿಕರ ವಾದ.

ಮರವಂತೆಯಲ್ಲಿ ಬೇಕು ರೆಸ್ಟ್‌ ಏರಿಯಾ
ನದಿ – ಸಮುದ್ರಗಳ ನಡುವೆ ಹೆದ್ದಾರಿ ಹಾದು ಹೋಗುವ ಮರವಂತೆಯ ಕಡಲ ತೀರದ ಬಳಿ ನಿತ್ಯ ಲಾರಿಗಳು ಸಾಲುಗಟ್ಟಿ ನಿಂತಿರುತ್ತವೆ. ಇದರಿಂದ ಇಲ್ಲಿ ಸಂಚರಿಸುವರಿಗೆ ಕಡಲು – ನದಿಗಳ ಸಂಗಮ ದೃಶ್ಯ ಆಸ್ವಾದಿಸುವ ಅವಕಾಶ ಸಿಗುತ್ತಿಲ್ಲ. ಆದ್ದರಿಂದ ಇಲ್ಲೊಂದು ರೆಸ್ಟ್‌ ಏರಿಯಾ ಬೇಕು ಎನ್ನುವ ಬೇಡಿಕೆಯಿದೆ.

Advertisement

ಒತ್ತಿನೆಣೆ ಗೋಳು
ಬೈಂದೂರು – ಶಿರೂರು ನಡುವಿನ ಒತ್ತಿನೆಣೆ ಗುಡ್ಡದ ಮಧ್ಯೆ ಹೆದ್ದಾರಿ ಸಂಚಾರ ನಿತ್ಯ ಅಪಾಯಕಾರಿ. ಪ್ರತಿ ಮಳೆಗಾಲದಲ್ಲೂ ಗುಡ್ಡ ಕುಸಿದು ಸಂಚಾರಕ್ಕೆ ಕಂಟಕವಾಗುತ್ತಿದೆ. ಕುಸಿತ ತಡೆಯಲು ಕಳೆದ ವರ್ಷ ನವೀನ ತಂತ್ರಜ್ಞಾನದ ಸ್ಲೋಪ್‌ ಪ್ರೊಟೆಕ್ಷನ್‌ ವಾಲ್‌ ಅಳವಡಿಸಲಾಗಿತ್ತು. ಅದು ಕೂಡ ಭಾರೀ ಮಳೆಗೆ ಬಿರುಕುಬಿಟ್ಟಿದೆ. ಶಾಶ್ವತ ಪರಿಹಾರ ಇನ್ನೂ ಸಿಕ್ಕಿಲ್ಲ.

9 ಕಡೆ ಕ್ರಾಸಿಂಗ್‌
ಹೆಮ್ಮಾಡಿಯಿಂದ ಶಿರೂರುವರೆಗೆ ಅಧಿಕೃತವಾಗಿ ಶಿರೂರು ಪೇಟೆ, ಬೈಂದೂರು, ನಾಯ್ಕನಕಟ್ಟೆ, ನಾಗೂರು (ಹಳಗೇರಿ), ಅರೆಹೊಳೆ, ಬಡಾಕೆರೆ, ಮರವಂತೆ, ತ್ರಾಸಿ, ಮುಳ್ಳಿಕಟ್ಟೆ ಒಟ್ಟು 9 ಕಡೆಗಳಲ್ಲಿ ಕ್ರಾಸಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ. ಮರವಂತೆಯಲ್ಲಿ ಪಡುಕೋಣೆ ಕಡೆಗೆ ಸಂಚರಿಸುವ ಮಾರ್ಗದಲ್ಲಿ ಬೇಡಿಕೆಯಿದ್ದರೂ ಇನ್ನೂ ಪತ್ರ ತಲುಪಿಲ್ಲ ಎನ್ನುತ್ತಾರೆ ಐಆರ್‌ಬಿಯವರು. ಆದರೆ ಅರೆಬರೆ ಕಾಮಗಾರಿ ಆಗಿರುವುದರಿಂದ ಅಲ್ಲಲ್ಲಿ ಅನಧಿಕೃತ ಕ್ರಾಸಿಂಗ್‌ಗಳು ಸಾಕಷ್ಟಿವೆ. ಇನ್ನು ಕೆಲವೆಡೆಗಳಲ್ಲಿ ಡಿವೈಡರ್‌ ಮಧ್ಯೆ ನೀರು ಹೋಗಲು ಇರುವ ಎಡೆಗಳಲ್ಲಿಯೇ ದ್ವಿಚಕ್ರ ವಾಹನಗಳನ್ನು ನುಗ್ಗಿಸುವವರೂ ಇದ್ದಾರೆ.

ಹೆದ್ದಾರಿ ಕಾಮಗಾರಿ ಆಮೆಗತಿಯಲ್ಲಿದ್ದರೂ ಉಡುಪಿ ಜಿಲ್ಲೆಯ ಗಡಿಭಾಗವಾದ ಶಿರೂರಿನಲ್ಲಿ ಟೋಲ್‌ಗೇಟ್‌ ನಿರ್ಮಾಣ ಕಾಮಗಾರಿ ಮಾತ್ರ ವೇಗವಾಗಿ ನಡೆಯುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಟೋಲ್‌ ಸಂಗ್ರಹ ಕಾರ್ಯ ಆರಂಭವಾಗುವ ಸಾಧ್ಯತೆಗಳಿವೆ.

ಬೈಂದೂರು ಪೇಟೆಯಲ್ಲಿ ಜನ ಹೈರಾಣು
ಬೈಂದೂರು ಪೇಟೆಯಲ್ಲಿ ಎದುರಾಗುವುದು ನಿರ್ಮಾಣ ಹಂತದಲ್ಲಿರುವ ಅಂಡರ್‌ಪಾಸ್‌. ನಿಧಾನಗತಿಯ ಕಾಮಗಾರಿಯಿಂದ ಜನ ಹೈರಾಣಾಗಿದ್ದಾರೆ. ಸರ್ವೀಸ್‌ ರಸ್ತೆಯೂ ಇಲ್ಲಿಲ್ಲ. ಹೆದ್ದಾರಿಯಿಂದ ಒಳ ರಸ್ತೆಗಳಿಗೆ ಹೋಗಬೇಕಾದರೆ ಸ್ಥಳೀಯ ವಾಹನ ಸವಾರ‌ರು ಪರದಾಡಬೇಕು.

ತ್ರಾಸಿಯಲ್ಲಿ ಅಪಾಯಕಾರಿ ಜಂಕ್ಷನ್‌
ತ್ರಾಸಿ ಜಂಕ್ಷನ್‌ ಅಪಾಯಕಾರಿಯಾಗಿದ್ದು, ಬೈಂದೂರು ಕಡೆಯಿಂದ ಬಂದು ಗಂಗೊಳ್ಳಿ ಕಡೆಗೆ ಸಂಚರಿಸಬೇಕಾದರೆ ಹರಸಾಹಸ ಪಡಬೇಕಾಗುತ್ತದೆ. ಇಲ್ಲಿ ಸುಗಮ ಸಂಚಾರಕ್ಕೆ ಸರಿಯಾದ ವ್ಯವಸ್ಥೆಯಿಲ್ಲ.

- ಉಡುಪಿ ಟೀಮ್‌

Advertisement

Udayavani is now on Telegram. Click here to join our channel and stay updated with the latest news.

Next