Advertisement

ಮುಂಬೈ ಮಹಾಮಳೆಗೆ 38 ಬಲಿ

10:01 AM Jul 04, 2019 | mahesh |

ರಸ್ತೆ, ರೈಲ್ವೆ ಹಳಿಗಳು ಕೊಚ್ಚಿಹೋಗಿ, ರಸ್ತೆಗಳಲ್ಲಿ ನೀರು ತುಂಬಿ ಸಂಚಾರ ಅಸ್ತವ್ಯಸ್ತ
ಮನೆಗಳಿಂದ ಹೊರಗೆ ಬರದಂತೆ ನಾಗರಿಕರಿಗೆ ಸರ್ಕಾರದಿಂದ ಸೂಚನೆ
ಸಾವು, ನೋವುಗಳಿಗೆ ಸರ್ಕಾರವೇ ಕಾರಣ ಎಂದ ವಿಪಕ್ಷಗಳು

Advertisement

ಮುಂಬೈ: ವಾಣಿಜ್ಯ ನಗರಿಯಲ್ಲಿ ಸುರಿಯುತ್ತಿರುವ ವರುಣನ ರುದ್ರನರ್ತನಕ್ಕೆ ಸೋಮವಾರ ರಾತ್ರಿಯಿಂದ ಮಂಗಳವಾರ ಸಂಜೆಯೊಳಗೆ 38 ಮಂದಿ ಬಲಿಯಾಗಿದ್ದಾರೆ. ಸೋಮವಾರ ಮುಂಜಾನೆಯಿಂದ ಮಂಗಳವಾರ ಮಧ್ಯಾಹ್ನದವರೆಗೆ ನಗರದಲ್ಲಿ 100 ಮಿ.ಮೀ.ಗೂ ಹೆಚ್ಚು ಮಳೆಯಾಗಿದೆ. ಹಲವಾರು ಕಡೆ ಜನಜೀವನ ಅಸ್ತವ್ಯಸ್ತಗೊಂಡ ಪರಿಣಾಮ, ಮಹಾರಾಷ್ಟ್ರ ಸರ್ಕಾರ ಮಂಗಳವಾರ ಸರ್ಕಾರಿ ರಜೆ ಘೋಷಿಸಿತ್ತು.

ಹಲವೆಡೆ ರಸ್ತೆ, ರೈಲು ಮಾರ್ಗಗಳು ಮುಳುಗಿ ಸಂಚಾರ ವ್ಯವಸ್ಥೆ ಹದಗೆಟ್ಟಿದೆ. ಮುಂಬೈನಲ್ಲಿ ಮತ್ತಷ್ಟು ಭಾರಿ ಪ್ರಮಾಣದ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ, ತಮ್ಮ ಮನೆಗಳಿಂದ ಯಾರೂ ಹೊರಬಾರದಂತೆ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಇಂಥ ಸಂದರ್ಭದಲ್ಲಿ ಕೇವಲ ತುರ್ತು ಸೇವೆಗಳನ್ನು ಮಾತ್ರ ನೀಡಲು ಸಾಧ್ಯವಿದೆ ಎಂದು ಸರ್ಕಾರ ತಿಳಿಸಿದೆ.

ವಿಪಕ್ಷಗಳ ಟೀಕೆ: ಸರ್ಕಾರದ ದುರಹಂಕಾರ ಧೋರಣೆ, ಭ್ರಷ್ಟಾಚಾರ, ಮೂಲಸೌಕರ್ಯ ಕಲ್ಪಿಸುವಲ್ಲಿ ತಾತ್ಸಾರ ತೋರಿದ ಪರಿಣಾಮವಾಗಿಯೇ ಮುಂಬೈ ನಗರ ಮಹಾಮಳೆಗೆ ತತ್ತರಿಸುವಂತೆ ಆಗಿದೆ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲ ಟ್ವಿಟರ್‌ನಲ್ಲಿ ಆರೋಪಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಅಶೋಕ್‌ ಚವಾಣ್‌ ಕೂಡ ಇದೇ ಆರೋಪ ಮಾಡಿದ್ದು, ‘ಶಿವಸೇನೆಯ ಮುಖ್ಯಸ್ಥ ಉದ್ಧವ್‌ ಠಾಕ್ರೆ ವಾಸವಾಗಿರುವ ಬಾಂದ್ರಾ ಪ್ರಾಂತ್ಯದ ಕಾಲಾ ನಗರ್‌ನಲ್ಲಿರುವ ಕೆಲ ಪ್ರದೇಶಗಳೇ ಮುಳುಗಡೆಯಾಗಿವೆ. ಹಾಗಾಗಿ, ಠಾಕ್ರೆಯವರು ತಮ್ಮ ನಿರ್ಲಕ್ಷ್ಯಕ್ಕೆ ಅಲ್ಲಿನ ನಾಗರಿಕರ ಕ್ಷಮೆ ಕೋರಬೇಕು. ಲೋಕಸಭೆ ಚುನಾವಣೆ ಮುಗಿದ ಕೂಡಲೇ ತಮ್ಮ ಪಕ್ಷದ ಸಂಸದರನ್ನು ದೇಗುಲಗಳಿಗೆ ಕರೆದೊಯ್ಯದೇ ನಗರ ಪರಿಶೀಲನೆ ಮಾಡಿಸಿದ್ದರೆ ಹೀಗಾಗುತ್ತಿರಲಿಲ್ಲ’ ಎಂದು ಟೀಕಿಸಿದ್ದಾರೆ.

ಎನ್‌ಸಿಪಿ ಮುಖ್ಯಸ್ಥ ಧನಂಜಯ್‌ ಮುಂಡೆ ಅವರೂ ಟ್ವೀಟ್ ಮಾಡಿ, ಒಂದು ದೊಡ್ಡ ಮಳೆಗೆ ರಸ್ತೆಗಳು, ರೈಲ್ವೆ ಹಳಿಗಳು ಕೊಚ್ಚಿಕೊಂಡು ಹೋಗಿವೆ. ಇದು ಸರ್ಕಾರದ ಕಳಪೆ ಕಾಮಗಾರಿ ಹಾಗೂ ಭ್ರಷ್ಟಾಚಾರವನ್ನು ತೆರೆದಿಟ್ಟಿದೆ ಎಂದಿದ್ದಾರೆ.

Advertisement

ರನ್‌ವೇಯಿಂದ ಜಾರಿದ ವಿಮಾನ

ಜೈಪುರದಿಂದ ಆಗಮಿಸಿದ ಸ್ಪೈಸ್‌ ಜೆಟ್ ವಿಮಾನವೊಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ರನ್‌ವೇನಿಂದ ಆಚೆ ಸರಿದಿದೆ. ಘಟನೆಯಲ್ಲಿ ಪ್ರಯಾಣಿಕರಿಗೆ ತೊಂದರೆಯಾಗಿಲ್ಲ. ರನ್‌ವೇನಲ್ಲಿ ನೀರು ನಿಂತಿದ್ದರಿಂದ ಹೀಗಾಗಿದ್ದು, ಅದರ ಪರಿಣಾಮ, ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ 203 ವಿಮಾನಗಳ ಹಾರಾಟ ರದ್ದುಗೊಳಿಸಿ, ವಿಮಾನ ನಿಲ್ದಾಣಕ್ಕೆ ಬರಬೇಕಿದ್ದ 55 ವಿಮಾನಗಳಿಗೆ ಬೇರೆ ವಿಮಾನ ನಿಲ್ದಾಣಗಳಿಗೆ ತೆರಳುವಂತೆ ಸೂಚಿಸಲಾಗಿತ್ತು.

ಒಡಿಶಾದ 13 ಜಿಲ್ಲೆಗಳಿಗೆ ವರುಣನ ಬಾಧೆ

ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ, ಒಡಿಶಾದ ಸುಮಾರು 13 ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ. ವಾಯುಭಾರ ಕುಸಿತದಿಂದ ಉದ್ಭವಿಸಿರುವ ಚಂಡಮಾರುತಗಳು ಗಂಟೆಗೆ 40ರಿಂದ 50 ಕಿಮೀ. ವೇಗದಲ್ಲಿ ಒಡಿಶಾ ಮತ್ತು ಜಾರ್ಖಂಡ್‌ನ‌ ಆಗ್ನೇಯ ದಿಕ್ಕಿನ ಕಡೆಗೆ ಪ್ರಯಾಣಿಸುತ್ತಿವೆ. ಹಾಗಾಗಿ, 13 ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಲಿದ್ದು, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಇಬ್ಬರು ಹೋಟೆಲ್ ಸಿಬ್ಬಂದಿ ಸಾವು

ಹೋಟೆಲೊಂದರ ಅಡುಗೆ ಮನೆಗೆ ನೀರು ನುಗ್ಗಿದ್ದರಿಂದ ಆಗಿರುವ ಅಸ್ತವ್ಯಸ್ತವನ್ನು ಪರಿಶೀಲಿಸಲು ಹೋದ ಅದೇ ಹೋಟೆಲಿನ ಇಬ್ಬರು ಮಾಣಿಗಳು, ಅಲ್ಲಿ ವಿದ್ಯುತ್‌ ಪ್ರವಹಿಸಿದ್ದರಿಂದ ಮೃತಪಟ್ಟಿದ್ದಾರೆ. ರೆಫ್ರಿಜರೇಟರ್‌ನ ವೈರ್‌ನಿಂದಾಗಿ ಅಲ್ಲಿ ವಿದ್ಯುತ್‌ ಆವರಿಸಿತ್ತೆಂದು ಪೊಲೀಸರು ತಿಳಿಸಿದ್ದಾರೆ.
ದುರ್ಘ‌ಟನೆಗಳ ಸರಮಾಲೆ

ಮಲಾದ್‌
ಉತ್ತರ ಮುಂಬೈನ ಹೊರವಲಯದಲ್ಲಿರುವ ಮಲಾದ್‌ ಪ್ರಾಂತ್ಯದ ಪಿಂಪ್ರಿಪಾಡಾ ಎಂಬಲ್ಲಿ ಗುಡಿಸಲುಗಳ ಮೇಲೆ ಗೋಡೆ ಕುಸಿದು 21 ಜನ ಮೃತಪಟ್ಟು 45ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸೋಮವಾರ ಮಧ್ಯರಾತ್ರಿ 2 ಗಂಟೆಗೆ ಈ ಘಟನೆ ಜರುಗಿದೆ.

ಕಲ್ಯಾಣ್‌ ಪ್ರಾಂತ್ಯ
ದುರ್ಗಾ ಫೋರ್ಟ್‌ನ ಹಿಂಭಾಗದಲ್ಲಿರುವ ಉರ್ದು ಶಾಲೆಯೊಂದರ ಕಾಂಪೌಂಡ್‌ ಗೋಡೆ ಕುಸಿದ ಪರಿಣಾಮ, ಆ ಗೋಡೆಗೆ ಹೊಂದಿಕೊಂಡಿದ್ದ ಗುಡಿಸಲುಗಳಲ್ಲಿ ವಾಸವಾಗಿದ್ದ ಮೂವರು ಮೃತಪಟ್ಟಿದ್ದಾರೆ.

ಅಂಬೆಗಾಂವ್‌
ಪುಣೆಯ ಅಂಬೆಗಾಂವ್‌ನಲ್ಲಿರುವ ಸಿಘಂದ್‌ ಇನ್ಸ್ಟಿಟ್ಯೂಟ್ ಎಂಬ ಶಿಕ್ಷಣ ಸಂಸ್ಥೆಯೊಂದರ ಕಾಂಪೌಂಡ್‌ ಕುಸಿದುಬಿದ್ದ ಪರಿಣಾಮ ಛತ್ತೀಸ್‌ಗಡ, ಮಧ್ಯಪ್ರದೇಶದಿಂದ ಬಂದಿದ್ದ ಆರು ಜನ ಕೂಲಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಮಂಗಳವಾರ ಬೆಳಗ್ಗೆ 11:15ರ ಸುಮಾರಿಗೆ ಈ ಘಟನೆ ನಡೆದಿದೆ.

ಟ್ಯಾಂಕ್‌ ಕುಸಿತಕ್ಕೆ 4 ಬಲಿ
ನಾಸಿಕ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆಯೊಂದರ ನೀರಿನ ಟ್ಯಾಂಕ್‌ ಕುಸಿದಿದ್ದರಿಂದ ಅಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಗಾರೆ ಕೆಲಸಗಾರರು ಸಾವಿಗೀಡಾಗಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ. ಗಂಗಾಪುರ ರಸ್ತೆಯ ಸೋಮೇಶ್ವರ ಕಾಲೋನಿಯಲ್ಲಿ ಬೆಳಗ್ಗೆ 8:30ರ ಸುಮಾರಿಗೆ ಈ ಘಟನೆ ನಡೆದಿದೆ.

ಕಾರಿನಲ್ಲೇ ಜಲಸಮಾಧಿ
ಮುಂಬೈ ಹೊರವಲಯದ ಮಲಾದ್‌ ಬಳಿ, ನೀರು ತುಂಬಿದ್ದ ಅಂಡರ್‌ಪಾಸ್‌ನೊಳಗೆ ಕಾರು ಓಡಿಸಿದ ಪರಿಣಾಮ, ಕಾರಿನೊಳಗೆ ನೀರು ನುಗ್ಗಿ ಅದರಲ್ಲಿದ್ದ ಇರ್ಫಾನ್‌ ಖಾನ್‌ (37), ಗುಲಾದ್‌ ಶೇಖ್‌ (38) ಸಾವನ್ನಪ್ಪಿದ್ದಾರೆ. ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ಸ್ಕಾರ್ಪಿಯೋ ಕಾರು ಮುಳುಗಿದ್ದರಿಂದ ಇಂಜಿನ್‌ ನಿಷ್ಕ್ರಿಯವಾಗಿದೆ. ಕಾರಿನ ಬಾಗಿಲುಗಳು ಜಾಮ್‌ ಆಗಿದ್ದರಿಂದ ಕಾರಿನಲ್ಲಿದ್ದವರಿಗೆ ತಪ್ಪಿಸಿಕೊಳ್ಳಲು ಆಗದೇ, ಒಳನುಗ್ಗಿದ ನೀರಿನಲ್ಲಿ ಜಲಸಮಾಧಿಯಾಗಿದ್ದಾರೆ.

ಎಲ್ಲೆಲ್ಲಿ ಏನೇನು?

•ಮುಂಬೈ, ಸುತ್ತಲಿನ ಪ್ರದೇಶಗಳಲ್ಲಿ ವಿವಿಧ ಅವಘಡಗಳಲ್ಲಿ ಭಾರೀ ಸಾವು-ನೋವು

•ಮೂರು ಕಡೆ ಕಾಂಪೌಂಡ್‌ ಗೋಡೆಗಳ ಕುಸಿತದಿಂದಲೇ 30 ಮಂದಿ ಮರಣ

•ಸೋಮವಾರ ಬೆ. 8:30ರಿಂದ ಮಂಗಳವಾರ ಬೆ. 8:30ರವರೆಗೆ ಭರ್ತಿ ಮಳೆ

•1974ರ ಹಿಂದಿನ ದಾಖಲೆಯನ್ನು ಸರಿಗಟ್ಟಿದ ಮುಂಬೈ ವರ್ಷಧಾರೆ

•ಸೋಮವಾರ ಬೆಳಗ್ಗೆಯಿಂದ 24 ಗಂಟೆಯಲ್ಲಿ ಸುರಿದ ಮಳೆ 375.2 ಮಿ.ಮೀ.

•ರಸ್ತೆಗಳು ಕೊಚ್ಚಿ ಹೋಗಿದ್ದರಿಂದ ಅಲ್ಲಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತ

•ಮತ್ತಷ್ಟು ಮಳೆಯ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ

•ಐಎಂಡಿ ಸೂಚನೆ ಮೇರೆಗೆ ಮನೆಗಳಿಂದ ಹೊರಬರದಂತೆ ಜನರಿಗೆ ಸರ್ಕಾರ ಸೂಚನೆ

•ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದಲ್ಲಿ ರನ್‌ವೇನಲ್ಲಿದ್ದ ನೀರಿನಿಂದಾಗಿ ರನ್‌ವೇನಿಂದಾಚೆ ಜಾರಿದ ಜೆಟ್ ವಿಮಾನ

•ಛತ್ರಪತಿ ವಿಮಾನ ನಿಲ್ದಾಣದಿಂದ ತೆರಳಬೇಕಿದ್ದ 203 ವಿಮಾನಗಳ ಹಾರಾಟ ರದ್ದು; ಇತರೆಡೆಗಳಿಂದ ಬರಬೇಕಿದ್ದ 55 ವಿಮಾನಗಳಿಗೆ ಬೇರೆಡೆ ತೆರಳುವಂತೆ ಸೂಚನೆ.

Advertisement

Udayavani is now on Telegram. Click here to join our channel and stay updated with the latest news.

Next