ಬಸವಕಲ್ಯಾಣ: ಹಿಂದುಳಿದ ಹೈದರಾಬಾದ್ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ವಿಶೇಷ ಸ್ಥಾನಮಾನ ಸಿಗಬೇಕು ಎಂಬ ಉದ್ದೇಶದಿಂದ 371(ಜೆ) ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಆದರೆ ಮಹಾರಾಷ್ಟ್ರ ಗಡಿಭಾಗದ ವಿದ್ಯಾರ್ಥಿಗಳು ಈ ಮೀಸಲಾತಿ ಸೌಲಭ್ಯದಿಂದ ವಂಚಿತರಾಗಿದ್ದಾರೆ.
ಜೂ.27ರಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಮಾಡಲಿರುವ ತಾಲೂಕಿನ ಗಡಿಭಾಗದ ಉಜಳಂಬ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಮತ್ತು ವಿದ್ಯಾರ್ಥಿಗಳಿಗೆ 371 (ಜೆ) ಕಾಯ್ದೆಯ ಉದ್ದೇಶ ಮತ್ತು ಮಹತ್ವದ ಬಗ್ಗೆ ಮಾಹಿತಿಯೇ ಇಲ್ಲ. ಉಜಳಂಬ ಗ್ರಾಮದಲ್ಲಿ 1ನೇ ತರಗತಿ ಯಿಂದ 10ನೇ ತರಗತಿ ವರೆಗೆ ಕನ್ನಡದ ಜೊತೆಗೆ ಮರಾಠಿ ಶಿಕ್ಷಣ ಪಡೆದರು, ಹೆಚ್ಚಿನ ಅಭ್ಯಾಸಕ್ಕೆ ಉಜಳಂಬ ಗ್ರಾಮದಿಂದ ಮಹಾರಾಷ್ಟ್ರದ ನಗರಕ್ಕೆ ಹೋಗುತ್ತಾರೆ. ಇದಕ್ಕೆ ಕಾರಣ ಕರ್ನಾಟಕದಲ್ಲಿ ಮರಾಠಿ ಶಿಕ್ಷಣ ಅಷ್ಟೊಂದು ಗುಣಮಟ್ಟದಲ್ಲಿ ಸಿಗುವುದಿಲ್ಲ ಎಂಬ ಪೋಷಕರ ನಂಬಿಕೆಯಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಬೇರೆ ಕಡೆ ಹೋಗಿ ಕಲಿಯುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ವಿದ್ಯಾರ್ಥಿಗಳು 371 (ಜೆ) ಕಾಯ್ದೆ ಯಿಂದ ವಂಚಿತರಾಗುತ್ತಿದ್ದಾರೆ ಎಂದು ಕೆಲ ಗ್ರಾಮದ ಹಿರಿಯರು ಹಾಗೂ ಶಿಕ್ಷಕರು ಮಾಹಿತಿ ನೀಡಿದ್ದಾರೆ.
ಗಡಿಭಾಗದ ಗ್ರಾಮಗಳಲ್ಲಿ ಮಾತೃಭಾಷೆಗಿಂತ ಮರಾಠಿ ಭಾಷೆಯ ಪ್ರಭಾವ ಹೆಚ್ಚಾಗಿದೆ. ಹಾಗಾಗಿ ಪಕ್ಕದ ಮಹಾರಾಷ್ಟ್ರದ ಉಮರ್ಗಾ ಹಾಗೂ ಸೊಲ್ಲಾಪೂರ ಕಾಲೇಜಿನಲ್ಲಿ ಉಜಳಂಬ ಗ್ರಾಮದ ವಿದ್ಯಾರ್ಥಿಗಳು ಪ್ರವೇಶ ಪಡೆದ ಸಾಕಷ್ಟು ವಿದ್ಯಾರ್ಥಿಗಳು ಇದ್ದಾರೆ.
ಗ್ರಾಮದಲ್ಲಿ ಕೆಲವರು ಮಾತ್ರ 371 (ಎ) ಪ್ರಮಾಣ ಪತ್ರ ತೆಗೆದುಕೊಂಡಿದ್ದರೆ, ಮತ್ತೆ ಕೆಲವರಿಗೆ ಅದು ಯಾವ ಕೆಲಸಕ್ಕೆ ನಮಗೆ ಉಪಯೋಗಕ್ಕೆ ಬರುತ್ತದೆ. ಅದನ್ನು ಪಡೆಯಲು ಯಾವ್ಯಾವ ದಾಖಲೆಗಳನ್ನು ಸಲ್ಲಿಸಬೇಕು ಎಂದು ಪ್ರಶ್ನಿಸುತ್ತಾರೆ. ಗಡಿಭಾಗದ ಪ್ರಮಾಣತ್ರ ತೆಗೆದುಕೊಂಡರೆ ಶೈಕ್ಷಣಿಕ ಕೆಲಸಕ್ಕೆ ಸಹಾಯವಾಗುತ್ತದೆ ಎಂದು ತಿಳಿದುಕೊಂಡಿದ್ದಿವು. ಆದರೆ ಅದರಿಂದ ಯಾವುದೇ ಪ್ರಯೋಜವಾಗಿಲ್ಲ. ನಾವು ಗಡಿಭಾಗದ ಬಹುತೇಕ ವಿದ್ಯಾರ್ಥಿಗಳು ಅನಿವಾರ್ಯವಾಗಿ ಮಹಾರಾಷ್ಟ್ರ ಶಾಲಾ-ಕಾಲೇಜುಗಳಲ್ಲಿ ಪ್ರವೇಶ ಪಡೆದುಕೊಂಡಿದ್ದೇವೆ ಎಂದು ತಿಳಿಸಿದರು.
ಹೀಗಾಗಿ ಕರ್ನಾಟಕ ಗಡಿ ಭಾಗದ ಗ್ರಾಮಗಳಿಂದ ಮಹಾರಾಷ್ಟ್ರದಲ್ಲಿ ಕಲಿತ ವಿದ್ಯಾರ್ಥಿಗಳಿಗೆ 371(ಎ) ಅನ್ವಯವಾಗುವಂತೆ ಮುಖ್ಯಮಂತ್ರಿಗಳು ಆದೇಶ ಮಾಡಿದರೆ, ಗಡಿಭಾಗದಲ್ಲಿರುವ ಎಲ್ಲ ವಿದ್ಯಾರ್ಥಿಗಳಿಗೆ ಸಹಾಯಕವಾಗುತ್ತದೆ ಎಂದು ವಿದ್ಯಾರ್ಥಿ ನಿತೀನ್ ಡೋಂಗ್ರೆ ಅಳಲು ತೋಡಿಕೊಂಡರು.
•ವೀರಾರೆಡ್ಡಿ ಆರ್.ಎಸ್.