Advertisement

370 ವಿಧಿ ರದ್ದು ದೊಡ್ಡ ಕ್ರಾಂತಿಯಲ್ಲ

04:00 PM Aug 19, 2019 | Team Udayavani |

ಕೋಲಾರ: ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ತೆಗೆದಿದ್ದರಿಂದ ದೊಡ್ಡ ಕ್ರಾಂತಿಯಾಗದು, ಈ ವಿಧಿ ಇದ್ದರೂ ಅಭಿವೃದ್ಧಿ ಸಾಧ್ಯವಿತ್ತು, ಏಕೆಂದರೆ ಈಗಾಗಲೇ ಜಮ್ಮು ಕಾಶ್ಮೀರದಲ್ಲಿ ಭಾರತ ಸರ್ಕಾರದಿಂದಲೇ ಹೆದ್ದಾರಿ, ಸೇತುವೆಗಳ ಅಭಿವೃದ್ಧಿಯಾಗುತ್ತಿದೆ ಎಂದು ಸಮ್ಮೇಳನಾಧ್ಯಕ್ಷ ಡಾ.ಎಲ್.ಹನುಮಂತಯ್ಯ ಅಭಿಪ್ರಾಯಪಟ್ಟರು.

Advertisement

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಭಾನುವಾರ ಸಮ್ಮೇಳನಾಧ್ಯಕ್ಷರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ ಈ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಅಂಬೇಡ್ಕರ್‌ ಜಮ್ಮು -ಕಾಶ್ಮೀರಕ್ಕೆ 370ನೇ ವಿಧಿ ಅನ್ವಯಿಸುವುದನ್ನು ವಿರೋಧಿಸಿದ್ದರೆಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅಂಬೇಡ್ಕರ್‌ ಆಗಿನ ನಿಲುವಿಗೆ ಮತ್ತು ಈಗಿನ ಕೇಂದ್ರ ಸರ್ಕಾರದ ನಿಲುವಿಗೂ ವ್ಯತ್ಯಾಸಗಳಿವೆ, ಹಾಗಂತ ಕಾಶ್ಮೀರ ರಾಜಹರಿಸಿಂಗ್‌ರ ಷರತ್ತಿಗೊಳಪಟ್ಟು ವಿಶೇಷ ಸ್ಥಾನಮಾನ ನೀಡಲು ವಿರೋಧಿಸಿದ್ದ ಅಂಬೇಡ್ಕರ್‌, ಆಗಿನ ನಿಲುವನ್ನು ತಪ್ಪು ಎನ್ನಲಾಗದು ಎಂದರು.

ಅಸ್ಪೃಶ್ಯತೆ ಇನ್ನೂ ಇದೆ: ಬಸವಣ್ಣ 850 ವರ್ಷಗಳ ಹಿಂದೆ ಜಾತಿ ಅಸ್ಪೃಶ್ಯತೆ ತೊಡೆದು ಹಾಕಲು ಕಲ್ಯಾಣ ನಡೆಸಿದ್ದರು. ಈಗ ಮತ್ತೇ ಕಲ್ಯಾಣ ಆರಂಭವಾಗಿದೆ. ಇದರ ಅರ್ಥ ಇನ್ನೂ ಸಮಾಜದಲ್ಲಿ ಅಸ್ಪೃಶ್ಯತೆ ಇದೆ ಎನ್ನುವುದೇ ಆಗಿದೆ. ದೇಶದಲ್ಲಿ ಅಸ್ಪೃಶ್ಯತೆ ಇಲ್ಲದ 50 ಗ್ರಾಮಗಳನ್ನು ಹುಡುಕಲು ಸಾಧ್ಯವಿಲ್ಲ. ತಾವೇ ತಮ್ಮ ಊರಿನ ದೇವಾಲಯಕ್ಕೆ ಪ್ರವೇಶ ಪಡೆಯಲು 60 ವರ್ಷ ಕಾಯಬೇಕಾಗಿತ್ತು. ತೀರಾ ಇತ್ತೀಚಿಗೆ ದೇವಾಲಯಕ್ಕೆ ಹೋಗಿದ್ದಾಗಿ ತಿಳಿಸಿದರು.

ಬದಲಾವಣೆಗೆ ಎಷ್ಟು ದಿನ ಕಾಯಬೇಕು: ಕೋಲಾರದಲ್ಲಿ ಅಸ್ಪೃಶ್ಯತೆ ತೊಡೆದು ಹಾಕಲು ಅರಿವು ಶಿವಪ್ಪರ ತಂಡ ಗೃಹ ಪ್ರವೇಶ ಮತ್ತು ದೇವಾಲಯ ಪ್ರವೇಶ ಕಾರ್ಯಕ್ರಮಗಳನ್ನು ಆಯೋಜಿಸುತ್ತಿ ರುವುದು ಬದಲಾವಣೆ ಗಾಳಿ ಬೀಸುವ ಸೂಚನೆ ಯಾಗಿದೆ. ಸಂಪೂರ್ಣ ಬದಲಾವಣೆಗೆ ಮತ್ತೆಷ್ಟು ದಿನ ಕಾಯಬೇಕು ಎನ್ನುವುದು ಪ್ರಶ್ನೆಯಾಗಿದೆ ಎಂದರು.

ಸಮಾನ ಶಿಕ್ಷಣ: ಮಾತೃ ಭಾಷೆಯಲ್ಲಿ ಶಿಕ್ಷಣ ಎನ್ನುವುದು ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಮುಂದಿನ 10 ವರ್ಷಗಳಲ್ಲಿ 20 ಸಾವಿರ ಕನ್ನಡ ಶಾಲೆಗಳು ಮುಚ್ಚಲ್ಪಡುತ್ತವೆ ಎಂಬ ವರದಿ ಇದೆ. ಎಲ್ಲರಿಗೂ ಸಮಾನ ಶಿಕ್ಷಣ ಕೈಗೊಳ್ಳದೆ ತಾರತಮ್ಯ ನಿವಾರಿಸಲು ಸಾಧ್ಯವಿಲ್ಲ, ಪ್ರಾಥಮಿಕ ಶಿಕ್ಷಣವಾದರೂ ರಾಷ್ಟ್ರೀಕರಣವಾಗಬೇಕು, ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿಯಲ್ಲಿ ರಾಜ್ಯ ಭಾಷೆಯಲ್ಲಿಯೇ ಶಿಕ್ಷಣ ಎಂಬ ಅಂಶವಿದೆ, ಇದು ಎಷ್ಟರ ಮಟ್ಟಿಗೆ ಪಾಲನೆಯಾಗುತ್ತದೋ ನೋಡಬೇಕು ಎಂದರು.

Advertisement

ಒಳ ಮೀಸಲಾತಿ: ಒಳ ಮೀಸಲಾತಿಯ ವಿಚಾರದ ಕರ್ನಾಟಕದ್ದಲ್ಲ, ಇಡೀ ದೇಶದ ಪ್ರಶ್ನೆಯಾಗಿದೆ. ಮೀಸಲಾತಿಯ ಹಂಚಿಕೆಯಿಂದ ಒಗ್ಗಟ್ಟು ಸಾಧ್ಯ ವಿದೆಯೆಂದು ಕೆಲವರು ವಾದಿಸುತ್ತಿದ್ದಾರೆ, ಕೆಲವರಿಗೆ ಹಂಚಿಕೆ ಕುರಿತು ಅನುಮಾನಗಳಿವೆ ಎಂದರು.

ಸಂಸ್ಕೃತ ಆಡಳಿತ ಭಾಷೆ: ಅಂಬೇಡ್ಕರ್‌ ಸಂಸ್ಕೃತ ಆಡಳಿತ ಭಾಷೆಯಾಗಬೇಕೆಂದು ಬಯಸಿದ್ದು ಆ ಕಾಲಘಟ್ಟದಲ್ಲಿ, ಆದರೆ, ಈಗ ಬಯಸುವುದು ಪ್ರಾಯೋಗಿಕವಾಗಿ ಕಾಣುವುದಿಲ್ಲ, ಹಿಂದಿ ರಾಷ್ಟ್ರ ಭಾಷೆಯೇ ಅವೈಜ್ಞಾನಿಕವಾಗಿದೆ. ಏಕೆಂದರೆ, ರಾಜ್ಯ ಭಾಷೆಗಳು ವೈದ್ಯಕೀಯ, ಇಂಜಿನಿಯರಿಂಗ್‌ ವ್ಯಾಸಾಂಗವನ್ನು ಅದೇ ಭಾಷೆಯಲ್ಲಿ ನೀಡುವಷ್ಟು ಸಮರ್ಥವಾಗಿದೆ. ಆದ್ದರಿಂದ ಈಗ ಸಂಸ್ಕೃತ ರಾಷ್ಟ್ರ ಭಾಷೆಯಾಗುವುದು ಕಷ್ಟ ಎಂದರು.

ತೃಪ್ತಿ ಇದೆ: ರಾಜಕಾರಣಿಯಾಗಿ ಅಥವಾ ಸಾಹಿತಿಯಾಗಿ ತೃಪ್ತಿ ಇದೆಯೇ ಎಂಬ ಪ್ರಶ್ನೆಗೆ ಎರಡೂ ಬೇರೆ ಅಲ್ಲ. ಸಾಹಿತ್ಯ ಆತ್ಮ ತೃಪ್ತಿ ಸಿಕ್ಕರೆ, ರಾಜಕಾರಣಿಯಾಗಿ ಸಮುದಾಯಿಕ ಸೇವೆಯ ತೃಪ್ತಿ ಲಭಿಸುತ್ತದೆ. ಆದರೂ, ಯಾವುದರಲ್ಲೂ ತೃಪ್ತಿ ಕಾರಣದಿರುವುದು ಮುಂದಿನ ದಾರಿಗೆ ಒಳಿತು ಎಂದ ಅವರು, ಹೋರಾಟ ಮುಖ್ಯವೇ ರಾಜಕಾರಣ ಮುಖ್ಯವೇ ಎಂಬ ಪ್ರಶ್ನೆಗೆ ದಲಿತರಿಗೆ ಸದ್ಯದ ಪರಿಸ್ಥಿತಿಯಲ್ಲಿ ಎರಡೂ ಮುಖ್ಯವೇ ಎಂದರು. ಸಂವಾದದಲ್ಲಿ ಲಕ್ಷ್ಮೀನಾರಾಯಣ, ಗಂಗಾರಾಂ ಚಂಡಾಳ, ಶಿವರಾಂ, ಹ.ಮಾ.ರಾಮಚಂದ್ರ, ಬೆಳ್ಳಾರಪ್ಪ, ಈರಣ್ಣ ಬೆಂಗಾಲ, ಕೆ.ಕೃಷ್ಣಪ್ಪ. ಆರ್‌.ರಾಮಕೃಷ್ಣಪ್ಪ, ಸಂತೋಷ್‌, ರವಿ,ಡಾ.ನಾರಾಯಣ ಇದ್ದರು.

ಡಾ.ಅಂಬೇಡ್ಕರ್‌ ಅವರ ನಿರೀಕ್ಷೆ ಸಾಕಾರಗೊಳ್ಳಲಿಲ್ಲ:

ದಲಿತ ಕಾವ್ಯದಲ್ಲಿ ನಿರಾಸೆ ಅಡಗಿದೆಯೆಂಬ ವಿಚಾರದ ಸಂವಾದಕ್ಕೆ ಉತ್ತರಿಸಿದ ಸಮ್ಮೇಳನಾಧ್ಯಕ್ಷರು, ಅಂಬೇಡ್ಕರ್‌ ಏನನ್ನು ನಿರೀಕ್ಷೆ ಇಟ್ಟುಕೊಂಡಿದ್ದರೂ ಅದು ಸಾಕಾರಗೊಳ್ಳಲಿಲ್ಲ, ಆದ್ದರಿಂದ ಸಹಜವಾಗಿಯೇ ದಲಿತರ ಕಾವ್ಯ ನಿರಾಸೆಯನ್ನೇ ಪ್ರತಿಧ್ವನಿಸುತ್ತದೆ. ಆದರೂ, ಕಾವ್ಯ ಏನನ್ನು ಪ್ರತ್ಯಕ್ಷವಾಗಿ ಬಿಂಬಿಸುತ್ತದೋ ಅದರ ವಿರುದ್ಧದ ಆಶಯವನ್ನು ಹೊಂದಿರುತ್ತದೆ ಎಂದು ಸಮ್ಮೇಳನಾಧ್ಯಕ್ಷ ಹನುಮಂತಯ್ಯ ಸೂಚ್ಯವಾಗಿ ವಿವರಿಸಿದರು. ಬಾಲ್ಯದ ಅನುಭವಗಳು ಹೇಗೆ ಕಟ್ಟಿಕೊಡುತ್ತಾನೆ ಎಂಬುದರ ಆಧಾರದ ಮೇಲೆ ಸಾಹಿತ್ಯದ ಗಟ್ಟಿತನ ಉಳಿಯುತ್ತದೆ, ಬಹುತೇಕ ತನ್ನ ಸಾಹಿತ್ಯಕ್ಕೆ ಬಾಲ್ಯದ ಅನುಭವಗಳೇ ಆಧಾರ, ಬೆಂಗಳೂರಿನಲ್ಲಿ ವಾಸವಾಗಿದ್ದರೂ ನಾನು ಬಾಲ್ಯದ ಹಳ್ಳಿ ಜೀವನದಿಂದ ಹೊರಕ್ಕೆ ಬಂದಿಲ್ಲ, ಇದನ್ನು ಕುವೆಂಪು ಸಾಹಿತ್ಯದಲ್ಲೂ ಗುರುತಿಸಬಹುದಾಗಿದೆ, ನನ್ನ ಬಹುತೇಕ ಸಾಹಿತ್ಯ ರಚನೆಯಾಗಿರುವುದು ಹೋಟೆಲ್ನಲ್ಲಿ, ದಲಿತ ಸಂಸ್ಕೃತಿ ಪರಿಚಯವಾಗುವುದೇ ದಲಿತ ಸಾಹಿತ್ಯದಲ್ಲಿ ಎಂದ ಅವರು, ತಮ್ಮ ಕಾವ್ಯಕ್ಕೆ ದೊಡ್ಡ ಪ್ರೇರಣೆ ಬಡತನ ಮತ್ತು ಜಾತಿ ಅಸಮಾನತೆಯಾಗಿತ್ತು ಎಂದು ಹೇಳಿದರು.
ಸಮ್ಮೇಳನದ ಮೂಲಕ ದಲಿತರು ಒಗ್ಗೂಡುವಂತಾಗಲಿ:

ಕಸಾಪದಲ್ಲಿ ಮನುಬಳಿಗಾರ್‌ ಅವಧಿ ಸುವರ್ಣ ಯುಗವಾಗಿದೆ, ದಲಿತ ಸಾಹಿತ್ಯ ಸಮ್ಮೇಳನದ ಮುಂದಿನ ಜಾಗ ಇಲ್ಲಿಯೇ ನಿರ್ಧಾರವಾಗಬೇಕು, ದಲಿತ ಸಂಘಟನೆಗಳನ್ನು ಸಮ್ಮೇಳನ ಒಗ್ಗೂಡಿಸಬೇಕು, ಶ್ರಮ ಸಂಸ್ಕೃತಿಯ ದಲಿತರನ್ನು ದೇಶ ಕಟ್ಟಲು ಬಳಸಿಕೊಳ್ಳಬೇಕು, ಜಿಲ್ಲಾಧ್ಯಕ್ಷರಲ್ಲಿ ದಲಿತರಿಗೆ ಮೀಸಲಾತಿ ನೀಡಬೇಕು, ದಲಿತರ ಬದುಕು ಏನಾಗಿತ್ತು, ಏನಾಗಿದೆ ಮತ್ತು ಏನಾಗಬೇಕು ಎಂಬುದರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕೆಂದು ಸಂವಾದ ನಿರ್ವಹಿಸಿದ ಡಾ.ಸುಬ್ಬರಾವ್‌ ಎಂಟೆತ್ತಿನಕುಂಟೆ ಮನವಿ ಮಾಡಿಕೊಂಡರು.
Advertisement

Udayavani is now on Telegram. Click here to join our channel and stay updated with the latest news.

Next