Advertisement

ರಾಷ್ಟ್ರೀಯ ಹಿತಾಸಕ್ತಿಯಿಂದ 370ನೇ ವಿಧಿ ರದ್ದು : ಮುರಳೀಧರ ರಾವ್‌

01:32 AM Sep 30, 2019 | Team Udayavani |

ಮಂಗಳೂರು: ಜಮ್ಮು ಕಾಶ್ಮೀರದ 370ನೇ ಮತ್ತು 35 ಎ ವಿಧಿಗಳ ರದ್ದತಿಯನ್ನು ರಾಜಕೀಯದ ಬದಲು ರಾಷ್ಟ್ರೀಯ ಹಿತಾಸಕ್ತಿಯಿಂದ ನೋಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿ. ಮುರಳೀಧರ ರಾವ್‌ ಹೇಳಿದರು.

Advertisement

ದ.ಕ. ಜಿಲ್ಲಾ ಬಿಜೆಪಿ ಆಶ್ರಯದಲ್ಲಿ ನಗರದ ಟಿ.ವಿ. ರಮಣ ಪೈ ಹಾಲ್‌ನಲ್ಲಿ ರವಿವಾರ ಆಯೋಜಿಸಿದ್ದ 370ನೇ ವಿಧಿ ರದ್ದತಿ ಕುರಿತು ಜನ ಜಾಗರಣ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

370ನೇ ವಿಧಿಯಿಂದಾಗಿ ದೇಶ 2 ಸಂವಿಧಾನ, 2 ವಿಧಾನಗಳನ್ನು ಕಾಣು ವಂತಾಯಿತು. ಇದರ ಅಪಾಯವನ್ನು ಮನಗಂಡಿದ್ದ ಶ್ಯಾಮ್‌ ಪ್ರಸಾದ್‌ ಮುಖರ್ಜಿ ಹೋರಾಟ ಸಂಘಟಿಸಿ ಹುತಾತ್ಮರಾದರು. ಈಗ 370ನೇ ವಿಧಿಯನ್ನು ಪ್ರಧಾನಿ ನರೇಂದ್ರ ಮೋದಿ,ಗೃಹಸಚಿವ ಅಮಿತ್‌ ಶಾ ಅವರು ರದ್ದುಗೊಳಿಸುವ ಮೂಲಕ ಶ್ಯಾಮ್‌ಮುಖರ್ಜಿಯವರು ಕಂಡಿದ್ದ ಕನಸನ್ನು ಸಾಕಾರಗೊಳಿಸಿದ್ದಾರೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಮಾತನಾಡಿ, ಕಾಶ್ಮೀರ ಕಳೆದ ಹಲವು ದಶಕಗಳಿಂದ ಎದುರಿಸಿದ ತೀವ್ರತರ ಸಮಸ್ಯೆಗಳಿಗೆ 370ನೇ ವಿಧಿಯೇ ಕಾರಣವಾಗಿತ್ತು. ಬಿಜೆಪಿ ಕಳೆದ ಹಲವಾರು ಚುನಾ ವಣೆ ಗಳಲ್ಲಿ ಜನರಿಗೆ ನೀಡಿದ್ದ ಭರವಸೆ ಯಂತೆ ಆ ವಿಧಿಯನ್ನು ರದ್ದು ಗೊಳಿಸಿದೆ. ಕಾಶ್ಮೀರದ ಗತ ವೈಭವ ಮರುಕಳಿಸಲಿದೆ ಎಂದರು.

1952ರಲ್ಲಿ ಶ್ಯಾಮ್‌ ಪ್ರಸಾದ್‌ ಮುಖರ್ಜಿಯವರು 370ನೇ ವಿಧಿ ರದ್ದತಿಗಾಗಿ ನಡೆಸಿದ್ದ ಹೋರಾಟದಲ್ಲಿ ಭಾಗಿಯಾಗಿದ್ದ ಜನಸಂಘದ ಹಿರಿಯ ನೇತಾರ ಮುಂಡ್ಕೂರು ವಾಸುದೇವ ಕಾಮತ್‌ ಕಾರ್ಯಕ್ರಮ ಉದ್ಘಾಟಿಸಿದರು. ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.

Advertisement

ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಇನ್ನು ಮುಂದಕ್ಕೆ ಕಾಶ್ಮೀರದ ಪ್ರತಿಯೊಂದು ಪಂಚಾ ಯತ್‌ನಲ್ಲೂ ಭಾರತದ ತ್ರಿವರ್ಣ ಧ್ವಜ ಹಾರಾಡಲಿದೆ ಎಂದರು.

ಶಾಸಕರಾದ ಡಿ. ವೇದವ್ಯಾಸ ಕಾಮತ್‌, ಡಾ| ಭರತ್‌ ಶೆಟ್ಟಿ , ರಾಜೇಶ್‌ ನಾೖಕ್‌ , ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಪಕ್ಷದ ವಿಭಾಗ ಪ್ರಭಾರಿ ಉದಯ ಕುಮಾರ್‌ ಶೆಟ್ಟಿ, ಉಪಸ್ಥಿತರಿದ್ದರು. ಬಿಜೆಪಿ ಜಿಲ್ಲಾ ಧ್ಯಕ್ಷ, ಸಂಜೀವ ಮಠಂದೂರು ಸ್ವಾಗತಿಸಿ ಪ್ರಸ್ತಾವನೆಗೈದರು. ಮುಖಂಡ ಸತೀಶ್‌ ಕುಂಪಲ ಹಾಗೂ ಜಿಲ್ಲಾ ಮಹಿಳಾಮೋರ್ಚಾ ಅಧ್ಯಕ್ಷೆ ಪೂಜಾ ಪೈ ನಿರೂಪಿಸಿದರು.

ಪಿಒಕೆಯೂ ನಮ್ಮದಾಗಲಿದೆ
ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ ಮತ್ತು ಅವಿಭಾಜ್ಯ ಅಂಗವಾಗಿಯೇ ಉಳಿಯಲಿದೆ. ಜಗತ್ತಿನ ಯಾವುದೇ ಶಕ್ತಿಗೂ ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಇದೀಗ 370ನೇ ವಿಧಿ ರದ್ದಾಗುವ ಮೂಲಕ ಮುಂದಿನ ದಿನಗಳಲ್ಲಿ ಪಿಒಕೆ ಕೂಡ ನಮ್ಮದಾಗಲಿದೆ ಎಂದು ಮುರಳೀಧರ ರಾವ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next