Advertisement

370 ವಿಧಿ ರದ್ದು ದೇಶಪ್ರೇಮಿಗಳಿಗೆ ಸಂಭ್ರಮದ ಕ್ಷಣ

11:12 PM Sep 18, 2019 | Team Udayavani |

ಪುತ್ತೂರು: ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿ ಸಂವಿಧಾನದ ವಿಧಿ 370 ಹಾಗೂ 35 ಎ ರದ್ದಾಗುವ ಮೂಲಕ ಕಣಿವೆ ರಾಜ್ಯ ಭಾರತದ ಜತೆಗೆ ಸಂಪೂರ್ಣ ವಿಲೀನಗೊಂಡಿರುವುದು ದೇಶದ ಗಾಳಿ, ನೀರು ಸೇವಿಸುವ ಯಾವುದೇ ದೇಶಪ್ರೇಮಿಗೆ ಅತ್ಯಂತ ಸಂತೋಷದ ಹಾಗೂ ಜೀವಮಾನದಲ್ಲಿ ಮರೆಯಲಾಗದ ಕ್ಷಣ ಎಂದು ಕುಡಚಿ ಕ್ಷೇತ್ರದ ಶಾಸಕ ಪಿ. ರಾಜೀವ್‌ ಬಣ್ಣಿಸಿದರು.

Advertisement

ಒಂದು ದೇಶ ಒಂದು ಸಂವಿಧಾನ ಕಲ್ಪನೆಯೊಂದಿಗೆ ಸಾರ್ವಜನಿಕ ಅಭಿಪ್ರಾಯ ಮೂಡಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಬುಧವಾರ ಪೂರ್ವಾಹ್ನ ನಗರದ ಕೋ ಆಪರೇಟಿವ್‌ ಟೌನ್‌ ಬ್ಯಾಂಕಿನ ಸಭಾಂಗಣದಲ್ಲಿ ಪುತ್ತೂರು ಬಿಜೆಪಿ ಆಯೋಜಿಸಿದ ರಾಷ್ಟ್ರೀಯ ಏಕತೆ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.

ದೇಶದ ಶೇ. 1ರಷ್ಟು ಜನಸಂಖ್ಯೆಯಿದ್ದ ಜಮ್ಮು- ಕಾಶ್ಮೀರಕ್ಕೆ ಬಜೆಟ್‌ನ ಶೇ. 11ರಷ್ಟು ಅನುದಾನ ವ್ಯಯವಾಗುತ್ತಿತ್ತು. ಆದರೂ ಶಾಂತಿ ನೆಲೆಸುವಂತೆ ಮಾಡಲು ಸಾಧ್ಯವಾಗಿರಲಿಲ್ಲ. 70 ವರ್ಷಗಳಲ್ಲಿ 40 ಸಾವಿರ ನರಮೇಧ, ಉಗ್ರಗಾಮಿ ಚಟುವಟಿಕೆಗಳ ತಾಣವಾಗಿತ್ತು. ಆದರೆ ಶಾಂತಿ ತರಲು ವಿರುದ್ಧವಾಗಿದ್ದ ವಿಧಿಗಳ ರದ್ದತಿಯ ಮೂಲಕ ಎಲ್ಲವೂ ಈಗ ತಹಬದಿಗೆ ಬರುತ್ತಿದೆ ಎಂದರು.

ದೇಶದ ಪ್ರತಿಯೊಬ್ಬ ಪ್ರಜೆಗೆ ಸಮಾನತೆ, ಸ್ವಾತಂತ್ರ್ಯ, ಆತ್ಮಗೌರವದ ಹಕ್ಕನ್ನು ಸಂವಿಧಾನ ಪ್ರತಿಪಾದಿಸಿದರೂ ಜಮ್ಮು ಕಾಶ್ಮೀರದಲ್ಲಿ ಪ್ರಜೆಗಳಿಗೆ ಈ ಅವಕಾಶವನ್ನೇ ನೀಡಿರಲಿಲ್ಲ. ಸಂವಿಧಾನದ ಮೂಲ ಉದ್ದೇಶಕ್ಕೆ ವಿರುದ್ಧ ನಿಯಮಗಳನ್ನು ಇಲ್ಲಿ ಹೇರಳಾಗಿತ್ತು. ಇದರ ವಿರುದ್ಧ 1959ರಿಂದ ಹಲವು ಪ್ರಕರಣಗಳು ದಾಖ ಲಾಗಿದ್ದರೂ ನ್ಯಾಯಾಲಯವೇ ಕೈಚೆಲ್ಲಿತ್ತು ಎಂದರು.

ದಿಟ್ಟ ನಿರ್ಧಾರ
ಸರದಾರ್‌ ವಲ್ಲಭಭಾಯಿ ಪಟೇಲ್‌ ಅವರಿಂದ ಹಿಡಿದು ಜನಸಂಘದ ಸಂಸ್ಥಾಪಕ ಶ್ಯಾಮ್‌ ಪ್ರಸಾದ್‌ ಮುಖರ್ಜಿ ಮೊದಲಾದವರು ಅಖಂಡ ಭಾರತಕ್ಕಾಗಿ ನಿರಂತರ ಹೋರಾಟ ನಡೆಸಿದರು.

Advertisement

ಕೊನೆಗೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರು ಚಾಣಾಕ್ಷತನ ಹಾಗೂ ದಿಟ್ಟ ನಿರ್ಧಾರದಿಂದ ಒಂದು ಹನಿ ರಕ್ತವೂ ಬೀಳದೆ, ಅಖಂಡ ಭಾರತದ ಸಂಕಲ್ಪ ಸಾಕಾರವಾಗುತ್ತಿದೆ. ಮುಂದೆ ಪಾಕ್‌ ಆಕ್ರಮಿತ ಕಾಶ್ಮೀರವೂ ಭಾರತದ ಕೈವಶವಾಗಲಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಬಿಜೆಪಿ ಹಿರಿಯ ಕಾರ್ಯಕರ್ತ ಯು. ಪೂವಪ್ಪ, ದೇಶದ ಅಖಂಡತೆಗೆ ಅಡ್ಡಿಯಾಗಿದ್ದ ವಿಧಿಯ ರದ್ದತಿಯ ಮೂಲಕ ಈ ನಿಟ್ಟಿನಲ್ಲಿ ಹೋರಾಟ ಮಾಡಿದ ನೂರಾರು ರಾಷ್ಟ್ರಭಕ್ತರ ತ್ಯಾಗ ಫಲ ನೀಡಿದೆ ಎಂದರು.

ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಹಾಗೂ ಶಾಸಕ ಸಂಜೀವ ಮಠಂದೂರು, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಪುತ್ತೂರು ಪ್ರಭಾರಿ ಕಿಶೋರ್‌ ಕುಮಾರ್‌, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸತೀಶ್‌ ಕುಂಪಳ, ವಿಭಾಗ ಸಹ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಪೂಜಾ ಪೈ ಉಪಸ್ಥಿತರಿದ್ದರು.

ಸಮ್ಮಾನ
ಪ್ರಥಮ ಬಾರಿಗೆ ಪುತ್ತೂರಿಗೆ ಆಗಮಿಸಿದ ಕುಡುಚಿ ಕ್ಷೇತ್ರದ ಶಾಸಕ ಪಿ. ರಾಜೀವ್‌ ಹಾಗೂ ವಿಭಾಗ ಸಹ ಪ್ರಭಾರಿಯಾಗಿ ಆಯ್ಕೆಯಾದ ಗೋಪಾಲಕೃಷ್ಣ ಹೇರಳೆ ಅವರನ್ನು ಸಮ್ಮಾನಿಸಲಾಯಿತು.

ಬಿಜೆಪಿ ನಗರ ಕಾರ್ಯದರ್ಶಿ ಗೌರಿ ಬನ್ನೂರು ವಂದೇ ಮಾತರಂ ಹಾಡಿದರು. ಬಿಜೆಪಿ ಪುತ್ತೂರು ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಸ್ವಾಗತಿಸಿ, ನಗರ ಮಂಡಲದ ಅಧ್ಯಕ್ಷ ಜೀವಂದರ್‌ ಜೈನ್‌ ವಂದಿಸಿದರು. ಚಂದ್ರಶೇಖರ ಬಪ್ಪಳಿಗೆ ಕಾರ್ಯಕ್ರಮ ನಿರ್ವಹಿಸಿದರು.

ಸಮಸ್ಯೆಗಳಿಗೆ ನೆಹರೂ ಕಾರಣ
ಜಮ್ಮು – ಕಾಶ್ಮೀರಕ್ಕೆ ಸಂಬಂಧಪಟ್ಟ ಎಲ್ಲ ಸಮಸ್ಯೆಗಳಿಗೆ ಮಾಜಿ ಪ್ರಧಾನಿ ದಿ| ಜವಾಹರಲಾಲ್‌ ನೆಹರೂ ಅವರೇ ನೇರ ಕಾರಣ. ನೆಹರೂ ಅವರ ವಿಲಾಸ, ವಿಹಾರ, ವಿದ್ಯಾಭ್ಯಾಸಕ್ಕೆ ಪ್ರೀತಿಯ ಜಾಗವಾಗಿದ್ದ ಜಮ್ಮು ಕಾಶ್ಮೀರವನ್ನು ಭಾರತದ ಜತೆ ವಿಲೀನವಾಗದಂತೆ ನೋಡಿಕೊಂಡರು. ತಾವೇ ಕಾಶ್ಮೀರದ ವಿಚಾರವನ್ನು ವಿಶ್ವಸಂಸ್ಥೆಗೆ ಕೊಂಡೊಯ್ದರು. ಕಾಶ್ಮೀರದಲ್ಲಿ ಪ್ರತ್ಯೇಕ ಕಾನೂನು ಹಾಗೂ ಅಧಿಕಾರ ರೂಪಿಸಲು ಅವಕಾಶ ಮಾಡಿಕೊಟ್ಟರು. 35 ಎ ವಿಧಿಯನ್ನು ವಿಶೇಷ ಆದೇಶದ ಮೂಲಕ ಜಾರಿಗೊಳಿಸಿದರು. ಕೆಲವೇ ವ್ಯಕ್ತಿ, ಕುಟುಂಬಗಳನ್ನು ಓಲೈಸಲು ನೆಹರೂ ಈ ವಿಧಿಗಳನ್ನು ಜಾರಿ ಮಾಡಿದ್ದರು ಎಂದು ಪಿ. ರಾಜೀವ್‌ ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next