ಬೆಂಗಳೂರು: ಮೆಜೆಸ್ಟಿಕ್, ಸಿಟಿ ಮಾರುಕಟ್ಟೆ ಹಾಗೂ ಇತರೆಡೆಯ ಜಂಕ್ಷನ್‌ಗಳು, ಬಸ್, ರೈಲು ನಿಲ್ದಾಣ, ದೇವಾಲಯಗಳ ಮುಂಭಾಗ ಭಿಕ್ಷೆ ಬೇಡುತ್ತಿದ್ದ 37 ಮಂದಿ ಭಿಕ್ಷುಕರನ್ನು ಪಶ್ಚಿಮ ವಿಭಾಗ ಪೊಲೀಸರು ಬುಧವಾರ ನಿರಾಶ್ರಿತರ ಕೇಂದ್ರಕ್ಕೆ ಕಳುಹಿಸಿದ್ದಾರೆ.
ಪಶ್ಚಿಮ ವಿಭಾಗದ ಉಪ್ಪಾರಪೇಟೆ, ಕೆ.ಆರ್. ಮಾರುಕಟ್ಟೆ, ಬ್ಯಾಟರಾಯನಪುರ, ಚಂದ್ರಲೇಔಟ್, ಕೆಂಗೇರಿ ಹಾಗೂ ವಿಜಯನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾ ಚರಣೆ ಕೈಗೊಂ ಡಿದ್ದು, ದೇವಾಲಯ, ಮಾರುಕಟ್ಟೆ, ಜಂಕ್ಷನ್, ಬಸ್, ರೈಲು ನಿಲ್ದಾಣ ಹಾಗೂ ಇತರೆಡೆ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಯಿತು.
ಇದನ್ನೂ ಓದಿ:- ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜನೆ
ಬಳಿಕ ಎಲ್ಲರನ್ನು ಕೊಟ್ಟಿಗೆಪಾಳ್ಯ, ಕಾಮಾಕ್ಷಿಪಾಳ್ಯ ಸೇರಿ ವಿವಿಧೆಡೆ ಇರುವ ನಿರಾಶ್ರಿತರ ಕೇಂದ್ರಗಳಿಗೆ ಕಳುಹಿಸಲಾಗಿದೆ. ಉಪ್ಪಾರಪೇಟೆ 20, ಕೆ.ಆರ್.ಮಾರುಕಟ್ಟೆ 6, ಬ್ಯಾಟರಾಯನಪುರ, ಚಂದ್ರಲೇಔಟ್, ಕೇಂಗೇರಿ ತಲಾ ಮೂವರು ಹಾಗೂ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಸೇರಿದಂತೆ ಒಟ್ಟು 37 ಭಿಕ್ಷುಕರನ್ನು ನಿರಾಶ್ರಿತರ ಕೇಂದ್ರಕ್ಕೆ ಸೇರಿಸಿದ್ದಾರೆ.
ಈ ಹಿಂದೆಯೂ ವಿಭಾಗದ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ, ಸಾಕಷ್ಟು ಭಿಕ್ಷುಕರನ್ನು ಪತ್ತೆ ಹಚ್ಚಿ ನಿರಾಶ್ರಿತ ಕೇಂದ್ರಗಳಿಗೆ ಕಳುಹಿಸಲಾಗಿತ್ತು. ಆದರೆ, ಕಳೆದ ಕೆಲ ದಿನಗಳಲ್ಲಿ ಪಶ್ಚಿಮ ವಿಭಾಗ ವ್ಯಾಪ್ತಿಯಲ್ಲಿ ಏಕಾಏಕಿ ಭಿಕ್ಷುಕರ ಸಂಖ್ಯೆಯಲ್ಲಿ ಗಣ ನೀಯ ಏರಿಕೆಯಾದ ಬೆನ್ನಲ್ಲೇ ಕಾರ್ಯಾಚರಣೆ ನಡೆಸಲಾಗಿದೆ. ಗುರುವಾರವೂ ವಿಶೇಷ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಪೊಲೀಸರು ಹೇಳಿದರು.