Advertisement

ಕೋಟೆ ನಾಡಿಗೆ ಬರುತ್ತಿಲ್ಲವೇ 367 ರಾಷ್ಟ್ರೀಯ ಹೆದ್ದಾರಿ !

10:57 AM Mar 13, 2019 | |

ಗಜೇಂದ್ರಗಡ: ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದ ಕೋಟೆ ನಾಡಿನ ಜನತೆಯ ಬಹು ನಿರೀಕ್ಷಿತ ರಾಷ್ಟ್ರೀಯ ಹೆದ್ದಾರಿ 367 ಕೈ ತಪ್ಪಿ ಹೋಗಿದೆಯೇ ಎಂಬ ಅನುಮಾನ ಈಗ ಎದುರಾಗಿದೆ.

Advertisement

ಜಿಲ್ಲೆಯ ಎರಡನೇ ದೊಡ್ಡ ಪಟ್ಟಣವಾದ ಗಜೇಂದ್ರಗಡದ ಪ್ರವಾಸೋದ್ಯಮ, ವಾಣಿಜ್ಯ, ಕೈಗಾರಿಕೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಹಿಂದಿನ ಯುಪಿಎ ನೇತೃತ್ವದ ಕೇಂದ್ರ ಸರ್ಕಾರ ಹೊಸಪೇಟೆಯಿಂದ ಕೊಪ್ಪಳ, ಬಾನಾಪೂರ ಕ್ರಾಸ್‌, ಕುಕನೂರ, ಯಲಬುರ್ಗಾ, ಗಜೇಂದ್ರಗಡ, ಬಾದಾಮಿ, ಗದ್ದನಕೇರಿ, ಬಾಗಲಕೋಟ ಮಾರ್ಗದಿಂದ ರಾಜ್ಯ ಗಡಿ ಭಾಗ ನಿಪ್ಪಾಣಿವರೆಗೆ ಬರುವ ಜಿಲ್ಲಾ ಮತ್ತು ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಪರಿವರ್ತಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ ಜಾಲನೆ ನೀಡಿತ್ತು. ಆದರೆ ಈ ಭಾಗದ ಸಂಸದರು ಯೋಜನೆ ಬಗ್ಗೆ ಆಸಕ್ತಿ ತೋರದ ಹಿನ್ನೆಲೆಯಲ್ಲಿ ಇಲ್ಲಿನ ಜನರ ರಾಷ್ಟ್ರೀಯ ಹೆದ್ದಾರಿ ಕನಸು, ಕನಸಾಗಿಯೇ ಉಳಿದಿದೆ.

ಯೋಜನೆಗೆ ಹಿನ್ನಡೆ-ಅನುಮಾನ: ಗಜೇಂದ್ರಗಡ ಪಟ್ಟಣ ಅಭಿವೃದ್ಧಿ ದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿ 367 ಪೂರಕವಾಗುತ್ತದೆ ಎಂಬ ಆಶಾಭಾವನೆಯನ್ನು ಕಟ್ಟಣದ ಜನರು ಹೊಂದಿದ್ದರು. ಈ ಯೋಜನೆ ಜಾರಿಯಾಗಿ ಐದು ವರ್ಷ ಕಳೆದರೂ ನಾಮಫಲಕಕ್ಕೆ ಮಾತ್ರ ಎನ್‌. ಎಚ್‌. ಸೀಮಿತವಾಗಿದೆ. ಈ ಭಾಗದ ಜನಪ್ರತಿನಿ ಧಿಗಳ ನಿರ್ಲಕ್ಷದಿಂದ ಯೋಜನೆಗೆ ಹಿನ್ನಡೆಯಾಗಿದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಬೇರೆ ಜಿಲ್ಲೆಯ ಪಾಲಾಗಿದೆಯೇ ಎಂಬ ಅನುಮಾನ ಜನಸಾಮಾನ್ಯರನ್ನು ಕಾಡತೊಡಗಿದೆ.

ಜನರ ಆಕ್ರೋಶ: 367 ಎನ್‌.ಎಚ್‌ ಕಾಮಗಾರಿ ಕೈಗೆತ್ತಿಕೊಳ್ಳುವ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹೆದ್ದಾರಿ ಹಾಯ್ದು ಹೋಗುವ ರಸ್ತೆಗಳಲ್ಲಿ ನಾಮಫಲಕ ಹಾಕಿದೆ. ಜೊತೆಗೆ ರಾಮಾಪೂರದಿಂದ ಬೇವಿನಕಟ್ಟಿ ಕ್ರಾಸ್‌ ವರೆಗಿನ 12 ಕಿ.ಮೀ. ರಸ್ತೆ ಅಭಿವೃದ್ಧಿಗೆ 97 ಕೋಟಿ ರೂ. ಅನುದಾನ ನೀಡುವ ಭರವಸೆ ನೀಡಿತ್ತು. ಹೀಗಾಗಿ ಇಲಾಖೆ ಭೂ ಸ್ವಾಧೀನ ಪ್ರಕ್ರಿಯೆಗೂ ಮುಂದಾಗಿತ್ತು. ಆದರೆ ಯೋಜನೆ ಮುಂದುವರಿಯದೇ ಹಾಗೇ ಉಳಿದುಕೊಂಡಿದೆ. ಈ ಯೋಜನೆಯನ್ನೇ ಕೇಂದ್ರ ಸರ್ಕಾರ ಕೈ ಬಿಟ್ಟಿದೆಯೇ ಎಂಬ ಅನುಮಾನದೊಂದಿಗೆ ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.

40 ಸಾವಿರಕ್ಕೂ ಅಧಿಕ ಜನಸಂಖ್ಯೆಯನ್ನೊಳಗೊಂಡ ಗಜೇಂದ್ರಗಡದ ಪಟ್ಟಣಕ್ಕೆ 2013ರಲ್ಲಿ ಯುಪಿಎ ಸರ್ಕಾರ ಪ್ರಪ್ರಥಮ ರಾಷ್ಟ್ರೀಯ ಹೆದ್ದಾರಿ ಯೋಜನೆಯೊಂದನ್ನು ನೀಡಿತ್ತು. ಆದರೆ ರಾಜ್ಯದ ಪ್ರಭಾವಿ ರಾಜಕಾರಣಿಗಳು ತಮ್ಮ ಪ್ರಭಾವ ಬಳಸಿ ಯೋಜನೆಯನ್ನು ತಮ್ಮ ಕ್ಷೇತ್ರಕ್ಕೆ ಕೊಡೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆಯೇ, ಈ ಭಾಗಕ್ಕೆ ರಾ.ಹೆ. ಬರುವುದೋ ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ.

Advertisement

ಇಚ್ಚಾಶಕ್ತಿ ಕೊರತೆ: ಗಜೇಂದ್ರಗಡಕ್ಕೆ ಮಂಜೂರಾಗಿದ್ದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಯಾವೊಬ್ಬ ಜನಪ್ರತಿನಿಧಿಗಳೂ ಮುತುವರ್ಜಿ ವಹಿಸಿ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾಗದ ಪರಿಣಾಮ 367ನೇ ರಾಷ್ಟ್ರೀಯ ಹೆದ್ದಾರಿಗೆ ಕೇಂದ್ರ ಸರ್ಕಾರದಿಂದ ಅನುಮೋದನೆ ದೊರೆತಿಲ್ಲ. ಇದು ಈ ಭಾಗದ ಸಂಸದರು, ಶಾಸಕರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ತೋರ್ಪಡಿಸುತ್ತಿರುವ ಕಾಳಜಿಗೆ ಹಿಡಿದ ಕೈಗನ್ನಡಿಯಾಗಿದೆ ಎಂಬುದು ಸಾರ್ವಜನಿಕರ ಗಂಭೀರ ಆರೋಪವಾಗಿದೆ.

ಬಾನಾಪುರದಿಂದ ಚಿಕ್ಕೊಪ್ಪವರೆಗೆ ರಾಷ್ಟ್ರೀಯ ಹೆದ್ದಾರಿ 367 ಕಾಮಗಾರಿ ಪ್ರಗತಿ ಹಂತದಲ್ಲಿದೆ. ರಾಮಾಪೂರದಿಂದ ಗಜೇಂದ್ರಗಡ ಮಾರ್ಗವಾಗಿ ಬೇವಿನಕಟ್ಟಿ ಕ್ರಾಸ್‌ವರೆಗಿನ 12. ಕಿ.ಮೀ. ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರದಿಂದ ಇನ್ನೂ ಅನುಮೋದನೆ ದೊರೆತಿಲ್ಲ.
.ಆರ್‌.ಕೆ ಮಠದ,
ರಾಷ್ಟ್ರೀಯ ಹೆದ್ದಾರಿ ಸಹಾಯಕ ಕಾರ್ಯ
ನಿರ್ವಾಹಕ ಅಭಿಯಂತರ.

ರಾಷ್ಟ್ರೀಯ ಹೆದ್ದಾರಿ 367ನ್ನು ಕೇಂದ್ರ ಸರ್ಕಾರ ಕೈ ಬಿಟ್ಟಿಲ್ಲ. ಬದಲಿಗೆ ರಾಜ್ಯ ಸರ್ಕಾರದಿಂದ ಕ್ರಿಯಾ ಯೋಜನೆಯನ್ನು ಕಳುಹಿಸುವಲ್ಲಿ ವಿಳಂಬ ನೀತಿ ಅನುಸರಿಸಿದ ಪರಿಣಾಮ ಯೋಜನೆಗೆ ಹಿನ್ನಡೆಯಾಗಿದೆ. ಈ ಕುರಿತು ಹಲವಾರು ಬಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜೊತೆ ಚರ್ಚಿಸಲಾಗಿದೆ. 
ಶಿವಕುಮಾರ ಉದಾಸಿ,
ಸಂಸದ

ಪ್ರವಾಸೋದ್ಯಮ ಜತೆ ವಾಣಿಜ್ಯ ವಹಿವಾಟು ಇನ್ನಷ್ಟು ಬೆಳವಣಿಗೆಯಾಗುವ ದಿಸೆಯಲ್ಲಿ ಗಜೇಂದ್ರಗಡಕ್ಕೆ ಮಂಜೂರಾದ ರಾಷ್ಟ್ರೀಯ ಹೆದ್ದಾರಿ 367 ಕಾಮಗಾರಿ ಆರಂಭಿಸುವಲ್ಲಿ ಕೇಂದ್ರ ಸರಕಾರ ವಿಳಂಬ ನೀತಿ ಅನುಸರಿಸುತ್ತಿರುವುದು ಸರಿಯಲ್ಲ. ಕೂಡಲೇ ಜನಪ್ರತಿನಿ ಧಿಗಳು ಇಚ್ಚಾಶಕ್ತಿ ಪ್ರದರ್ಶಿಸಿ ಹೆದ್ದಾರಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಬೇಕು.
ಅಶೋಕ ಬಾಗಮಾರ,
ಗಣ್ಯ ವ್ಯಾಪಾರಸ್ಥ

„ಡಿ.ಜಿ. ಮೋಮಿನ್‌

Advertisement

Udayavani is now on Telegram. Click here to join our channel and stay updated with the latest news.

Next