Advertisement

ಜಲಾಶಯದಿಂದ ಹೇಮೆ ನದಿಗೆ 3,650 ಕ್ಯೂಸೆಕ್‌ ನೀರು

01:29 PM Jul 31, 2019 | Team Udayavani |

ಹಾಸನ: ಈ ವರ್ಷ ಹೇಮಾವತಿ ಜಲಾಶಯ ಭರ್ತಿಯಾಗುವುದು ಅಸಂಭವ ಎಂಬ ಆತಂಕವಿದ್ದರೂ ಜಲಾಶಯದಿಂದ ನದಿಗೆ 3,650 ಕ್ಯೂಸೆಕ್‌ ನೀರು ಹರಿಸಲಾಗುತ್ತಿದೆ. ನಾಲೆಗಳ ಮೂಲಕ ಅಚ್ಚುಕಟ್ಟು ಪ್ರದೇಶದ ಜನ, ಜಾನುವಾರುಗಳಿಗೆ ಕುಡಿಯುವ ನೀರು ಬಿಡದಿದ್ದರೂ ನದಿಗೆ ನೀರು ಹರಿಸುತ್ತಿರುವುದನ್ನು ಗಮನಿಸಿರುವ ಜನರು ಕೆಆರ್‌ಎಸ್‌ ಮೂಲಕ ತಮಿಳುನಾಡಿಗೆ ನೀರು ಬಿಡುತ್ತಿರಬಹುದೆಂದು ಶಂಕೆ ವ್ಯಕ್ತಪಡಿಸಿದ್ದಾರೆ.

Advertisement

15.51 ಟಿಎಂಸಿ ನೀರು ಸಂಗ್ರಹ: 37.10 ಟಿಎಂಸಿ ಸಂಗ್ರಹಣಾ ಸಾಮರ್ಥಯದ ಹೇಮಾವತಿ ಜಲಾಶಯದಲ್ಲಿ ಮಂಗಳವಾರದರೆಗೆ 15.51 ಟಿಎಂಸಿ ಸಂಗ್ರಹವಾಗಿದೆ. ಅದರಲ್ಲಿ ಬಳಕೆಗೆ ಲಭ್ಯ ನೀರು 11.14 ಟಿಎಂಸಿ ಮಾತ್ರ. ಕಳೆದ ವರ್ಷ ಈ ವೇಳೆಗೆ ಜಲಾಶಯ ಭರ್ತಿಯಾಗಿ ನದಿಗೆ ನೀರು ಬಿಡಲಾಗಿತ್ತು. ಆದರೆ ಈ ವರ್ಷ ಇನ್ನೂ ಶೇ.50 ರಷ್ಟೂ ನೀರು ಸಂಗ್ರಹವಾಗಿಲ್ಲ. ಆದರೂ ನದಿಗೆ ನೀರು ಹರಿಸುತ್ತಿರುವುದು ಅಚ್ಚರಿ ಮೂಡಿಸಿದೆ.

ಹೇಮಾವತಿ ನೀರೇ ಆಧಾರ: ಹೇಮಾವತಿ ಯೋಜನೆಯ ಅಚ್ಚುಕಟ್ಟು ಪ್ರದೇಶ ತುಮಕೂರು, ಹಾಸನ, ಮಂಡ್ಯ ಮತ್ತು ಮೈಸೂರು ಜಿಲ್ಲೆಯನ್ನು ವ್ಯಾಪಿಸಿದೆ. ಆ ಪೈಕಿ ತುಮಕೂರು ಮತ್ತು ಮಂಡ್ಯ ಅತಿ ಹೆಚ್ಚು ಅಚ್ಚುಕಟ್ಟು ಪ್ರದೇಶವನ್ನು ಹೊಂದಿದೆ. ಜೊತೆಗೆ ತುಮಕೂರು ,ಹಾಸನ ಮತ್ತು ಮಂಡ್ಯ ಜಿಲ್ಲೆಯ ಬಹುಪಾಲು ಪಟ್ಟಣ ಪ್ರದೇಶಗಳು ಕುಡಿಯುವ ನೀರಿಗಾಗಿ ಹೇಮಾವತಿ ಯೋಜನೆಯನ್ನೇ ಅವಲಂಬಿಸಿವೆ. ಹಾಸನ ಜಿಲ್ಲೆಯ ಪಟ್ಟಣಗಳು ಹೇಮಾವತಿ ನದಿಯ ಮೂಲಕ ಕುಡಿಯುವ ನೀರು ಅವಲಂಬಿಸಿದ್ದರೆ ತುಮಕೂರು ಮತ್ತು ಮಂಡ್ಯ ಜಿಲ್ಲೆಯ ಪ್ರಮುಖ ಪಟ್ಟಣಗಳಿಗೆ ನಾಲೆಯ ಮೂಲಕವೇ ನೀರು ಸರಬರಾಜಾಗಬೇಕು. ಹಾಸನ ನಗರ, ಅರಕಲಗೂಡು, ಹೊಳೆನರಸೀಪುರ, ಚನ್ನರಾಯಪಟ್ಟಣ, ಅರಸೀಕೆರೆ ನಗರಕ್ಕೆ ಹೇಮಾವತಿ ನದಿಯ ಮೂಲಕ ಕುಡಿಯುವ ನೀರು ಪೂರೈಕೆಯಾಗಲಿದೆ.

ಆದರೆ ತುಮಕೂರು ಜಿಲ್ಲೆಯ ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಗುಬ್ಬಿ, ತುಮಕೂರು ನಗರ, ಕುಣಿಗಲ್ ಪಟ್ಟಣಗಳು ನಾಲೆಯ ಮೂಲಕ ಹೇಮಾವತಿ ನೀರನ್ನು ಅವಲಂಬಿಸಿದ್ದರೆ, ಮಂಡ್ಯ ಜಿಲ್ಲೆಯ ಕೆ.ಆರ್‌.ಪಟ್ಟಣ, ನಾಗಮಂಗಲ, ಪಾಂಡವಪುರ ಪಟ್ಟಣಗಳಿಗೂ ನಾಲೆಯ ಮೂಲಕವೇ ಕುಡಿಯುವ ನೀರು ಹರಿಯಬೇಕಾಗಿದೆ. ಆದರೆ ಈ ವರ್ಷ ನಾಲೆಗೆ ನೀರು ಹರಿಸದೆ ನದಿಗೆ ನೀರು ಬಿಡುತ್ತಿರುವುದರಿಂದ ಈ ಎಲ್ಲಾ ಪಟ್ಟಣಗಳು ಹಾಗೂ ನೂರಾರು ಗ್ರಾಮಗಳು ಈ ವರ್ಷ ಕುಡಿಯುವ ನೀರಿಗೆ ಹಾಹಾಕಾರ ಪಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next