ಬೆಂಗಳೂರು: 2011ನೇ ಸಾಲಿನ 362 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ವೇಳೆ ಲಿಖೀತ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿವೆಯೇ ಎಂಬ ವಿಚಾರದ ಬಗ್ಗೆ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ. 362 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ರದ್ದುಪಡಿಸಿ ಹೈಕೋರ್ಟ್ ಈ ಹಿಂದೆ ತೀರ್ಪು ನೀಡಿತ್ತು. ಈ ತೀರ್ಪು ಪ್ರಶ್ನಿಸಿ ಆಯ್ಕೆಯಾಗಿದ್ದ ಅಭ್ಯರ್ಥಿಗಳು ಸುಪ್ರೀಂ ಕೋರ್ಟ್ ಮೊರೆಹೋಗಿದ್ದರು.
ಹೈಕೋರ್ಟ್ ತೀರ್ಪು ಎತ್ತಿಹಿಡಿದಿದ್ದ ಸುಪ್ರೀಂಕೋರ್ಟ್, ಲಿಖೀತ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆಯೇ ಎಂಬ ಬಗ್ಗೆ ಪರಿಶೀಲಿಸಿ ತೀರ್ಪು ನೀಡುವಂತೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ನ್ಯಾ. ಎಚ್ .ಜಿ ರಮೇಶ್ ಹಾಗೂ ನ್ಯಾ.ಪಿ.ಎಸ್ ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠ, ವಾದ -ಪ್ರತಿವಾದ ಆಲಿಸಿ ತೀರ್ಪು ಕಾಯ್ದಿರಿಸಿತು. ವಿಚಾರಣೆ ವೇಳೆ ಅಕ್ರಮದಲ್ಲಿ ಭಾಗಿಯಾಗಿ ದ್ದಾರೆಂದು ಸಿಐಡಿ ದೋಷಾರೋಪ ಪಟ್ಟಿಯಲ್ಲಿ
ಉಲ್ಲೇಖೀಸಿರುವ ಆಯೋಗದ ಸದಸ್ಯರ ವಿರುದ್ಧ ಪ್ರಾಸಿಕ್ಯೂಶನ್ ನಡೆಸಲು ರಾಷ್ಟ್ರಪತಿಗಳಿಂದ ಅನುಮತಿ ಪಡೆಯಲು ಮತ್ತೆಷ್ಟು ಕಾಲವಕಾಶ ಬೇಕೆಂದು ರಾಜ್ಯಸರ್ಕಾರವನ್ನು ಪ್ರಶ್ನಿಸಿತು.
ಈ ವೇಳೆ ಸರ್ಕಾರದ ಪರ ಹಾಜರಿದ್ದ ವಕೀಲರು, ಆಯೋಗದ ಸದಸ್ಯರ ವಿರುದ್ಧದ ಆರೋಪಗಳು ಕುರಿತ 10 ಸಾವಿರ ಪುಟಗಳ ದಾಖಲೆಗಳ ಭಾಷಾಂತರ ನಡೆಯುತ್ತಿದೆ. ಹೀಗಾಗಿ ತಡವಾಗುತ್ತಿದೆ ಎಂದು ತಿಳಿಸಿದರು. ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ನ್ಯಾಯಪೀಠ, ಭಾಷಾಂತರ ಕಾರ್ಯಕ್ಕೆ ಎಷ್ಟು ಸಮಯ ಬೇಕಾಗುತ್ತದೆ.? ಈ ಹಿಂದೆಯೇ ಆದಷ್ಟು ಬೇಗ ಭಾಷಾಂತರ ಕಾರ್ಯಪೂರ್ಣ ಗೊಳಿಸಿ ರಾಷ್ಟ್ರಪತಿಗಳ ಅನುಮತಿಗೆ ಮನವಿ ಸಲ್ಲಿಸಿ ಎಂದು ಗಡುವು ನೀಡಲಾಗಿತ್ತು. ಸರ್ಕಾರದ ಕಾರ್ಯವೈಖರಿ ಗಮನಿಸಿದರೆ ಈ ಕೇಸಿನಲ್ಲಿ ಆಸಕ್ತಿ ಎಷ್ಟಿದೆ ಎಂಬುದು ಅರ್ಥವಾ ಗುತ್ತಿದೆ ಎಂದಿತು. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೂರ್ಣ ತನಿಖಾ ವರದಿ ಸಲ್ಲಿಸಿದ್ದು, ಮಧ್ಯಂತರ ವರದಿಯು ಪ್ರಾಮುಖ್ಯತೆ ಕಳೆದುಕೊಳ್ಳುತ್ತದೆ ಎಂದು ಸರ್ಕಾರದ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.