Advertisement

“ಕೊರಟಗೆರೆ ಕ್ಷೇತ್ರದಲ್ಲಿ 3,600 ಮನೆಗಳ ಮಂಜೂರು’

05:53 PM Dec 21, 2017 | Team Udayavani |

ಕೊರಟಗೆರೆ: ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ 36 ಗ್ರಾಮ ಪಂಚಾಯತಿಗಳಿಗೆ ತಲಾ 100 ಮನೆಗಳಂತೆ ಒಟ್ಟು 3600 ಮನೆಗಳನ್ನು ಮಂಜೂರು ಮಾಡಿಸಲಾಗಿದ್ದು, ಅರ್ಹ ಫ‌ಲಾನುಭವಿಗಳಿಗೆ ಗ್ರಾಮ ಸಭೆಯ ಮೂಲಕ ಆಯ್ಕೆ ಮಾಡಿ ವಿತರಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

Advertisement

 ಕೊರಟಗೆರೆ ಕ್ಷೇತ್ರ ವಿಧಾನ ಸಭಾ ವ್ಯಾಪ್ತಿಯ ಚಿಕ್ಕತೊಟ್ಲುಕೆರೆ ಗ್ರಾಮ ಪಂಚಾಯಿತಿಯಲ್ಲಿ ಏರ್ಪಡಿಸಿದ್ದ ಗ್ರಾಮಸಭೆ ಉದ್ಘಾಟಿಸಿ ಮಾತನಾಡಿ, ಬಡವರಿಗಾಗಿಯೇ ಕಾಂಗ್ರೆಸ್‌ ಸರ್ಕಾರ ಬಡವರಿಗೆ ಶಾಶ್ವತ ಸೂರು ಕಟ್ಟಿಕೊಳ್ಳಲು ಮನೆಗಳನ್ನು ಮಂಜೂರು ಮಾಡಿದೆ. ಮನೆಯಿಲ್ಲದ ಕಡು ಬಡವರನ್ನು ಗುರುತಿಸಿ ಅವರಿಗೆ ಮನೆಗಳನ್ನು ನೀಡುವ ಕಾರ್ಯವಾಗಬೇಕು, ಗ್ರಾಮ ಪಂಚಾಯತಿ ಅಧ್ಯಕ್ಷರು ಈ ನಿಟ್ಟಿನಲ್ಲಿ ಮುತುವರ್ಜಿ ವಹಿಸಬೇಕು ಎಂದು ತಿಳಿಸಿದರು.

ರಸ್ತೆ ಅಭಿವೃದ್ಧಿಗೆ 50 ಲಕ್ಷ ಮಂಜೂರು: ಈಗಾಗಲೆ ಚಿಕ್ಕತೊಟ್ಲುಕೆರೆಯ ಮಠದ ರಸ್ತೆ ಅಭಿವೃದ್ಧಿಗೆ 50 ಲಕ್ಷ ಮಂಜೂರಾಗಿದೆ, ಜೊತೆಗೆ ಪ್ರಾವಾಸೋದ್ಯಮ ಇಲಾಖೆಯಿಂದಲೂ 50 ಲಕ್ಷ ರೂ. ನೀಡಲಾಗಿದೆ. ಗ್ರಾಮ ವಿಕಾಸ ಯೋಜನೆಯಲ್ಲಿ ಹಿರೇಗಂಡಗಲ್‌ ಗ್ರಾಮ ಅಭಿವೃದ್ಧಿಗೆ 1ಕೋಟಿ ರೂ., ಚಿಕ್ಕತೊಟ್ಲಕೆರೆಯಲ್ಲಿ ಚೆಕ್‌ ಡ್ಯಾಂ ನಿರ್ಮಾಣಕ್ಕೆ 50 ಲಕ್ಷ ರೂ. ಮಂಜೂರಾಗಿದೆ. ಸದರಿ ಪಂಚಾ ಯತಿ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳಾಗುತ್ತಿವೆ, ಮುಂದೆಯೂ ಮತ್ತಷ್ಟು ಅಭಿವೃದ್ದಿ ಕಾರ್ಯಕ್ಕೆ ಸರ್ಕಾರದಿಂದ
ಹಣ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

 ಶಾಸಕ ಪಿ.ಆರ್‌.ಸುಧಾಕರಲಾಲ್‌ ಮಾತನಾಡಿ, ಪ್ರತಿ ಗ್ರಾಮ ಪಂಚಾಯತಿಗೆ ಮಂಜೂರಾಗಿರುವ ಮನೆಗಳನ್ನು ಅರ್ಹ ಫ‌ಲಾನುಭವಿಗಳಿಗೆ ನೀಡಬೇಕು, ಉಳ್ಳವರಿಗೆ ಮತ್ತು ಶಿಫಾರಸು ಮಾಡುವವರಿಗೆ ಮನೆ ನೀಡಿ ಇಲ್ಲದವರಿಗೆ ಮೋಸ ಮಾಡುವ ಕಾರ್ಯವಾಗಬಾರದು ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷರು ಜವಾಬ್ದಾರಿ ವಹಿಸಿ: ಎಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷರು ಜವಾಬ್ದಾರಿಯಿಂದ ಕೆಪಿಸಿಸಿ ಅಧ್ಯಕ್ಷರ ಆಶಯದಂತೆ ಈ ಕೆಲಸ ಮಾಡಬೇಕು ಎಂದ ಅವರು ಮುಂದೆಯೂ ಸರ್ಕಾರ ಹೆಚ್ಚಿನ ಅಭಿವೃದ್ಧಿಗಾಗಿ ಮತ್ತಷ್ಟು ಹಣ ಬಿಡುಗಡೆ ಮಾಡಿಸಲು ಕೆಪಿಸಿಸಿ ಅಧ್ಯಕ್ಷರು ಶ್ರಮಿಸಬೇಕು ಎಂದು ಮನವಿ ಮಾಡಿದರು.

Advertisement

ಗ್ರಾಪಂ ಅಧ್ಯಕ್ಷ ಅಶ್ವತ್ಥನಾರಾಯಣ ಮಾತನಾಡಿ, ನಮ್ಮ ಗ್ರಾಮ ಪಂಚಾಯಿತಿಗೆ ಮಂಜೂರಾಗಿರುವ ಮನೆಗಳನ್ನು ಅರ್ಹ ಫ‌ಲಾನುಭವಿಗಳಿಗೆ ನೀಡುತ್ತೇವೆ, ಎಲ್ಲಾ ಸದಸ್ಯರೊಂದಿಗೆ ಪ್ರತಿ ವಾರ್ಡ್‌ಗೆ ತೆರಳಿ ಮನೆ ಇಲ್ಲದವರನ್ನು ಗುರುತಿಸಿ ಅರ್ಹರಿಗೆ ಮನೆ ನಿಡಲು ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯ ಲಕ್ಷ್ಮೀನರಸೇಗೌಡ, ಗ್ರಾಪಂ ಉಪಾಧ್ಯಕ್ಷ ಮಂಜುಳಾ, ಎಪಿಎಂಸಿ ಅಧ್ಯಕ್ಷ ಗಂಗಾಧರಯ್ಯ, ತಾಪಂ ಇಒ ಡಾ.ಕೆ.ನಾಗಣ್ಣ, ಕಾಂಗ್ರೆಸ್‌ ಮುಖಂಡ ಯದುನಂದನ್‌ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next