Advertisement

ಅಮೆರಿಕದ ಮದರ್‌ ಬಾಂಬ್‌ಗ 36 ಮಂದಿ ಐಸಿಸ್‌ ಉಗ್ರರು ಹತ

03:50 AM Apr 15, 2017 | |

ಜಲಾಲಾಬಾದ್‌(ಅಫ್ಘಾನಿಸ್ಥಾನ): ಐಸಿಸ್‌ ಉಗ್ರರ ಅಡಗುದಾಣಗಳ ಮೇಲೆ ಅಮೆರಿಕ ಗುರುವಾರ ನಡೆಸಿದ ಭಾರೀ ಬಾಂಬ್‌ ದಾಳಿಯಲ್ಲಿ 36 ಮಂದಿ ಐಸಿಸ್‌ ಉಗ್ರರು ಹತರಾಗಿದ್ದಾರೆ.

Advertisement

ಜಿಬಿಯು-43/ಬಿ ಮಾದರಿಯ ಅತೀ ದೊಡ್ಡ ಸಾಂಪ್ರದಾಯಿಕ ಬಾಂಬ್‌ ಅನ್ನು ನಂಗರ್‌ಹಾರ್‌ ಪ್ರಾಂತ್ಯದ ಅಚಿನ್‌ ಜಿಲ್ಲೆಯ ಮೊಮಂದ್‌ ದಾರಾ ಪ್ರದೇಶದ ಐಸಿಸ್‌ ಅಡಗುದಾಣಗಳ ಮೇಲೆ ಹಾಕಲಾಗಿತ್ತು. ಬಾಂಬ್‌ ದಾಳಿಯಲ್ಲಿ ನಾಗರಿಕರಿಗೆ ಯಾವುದೇ ರೀತಿಯ ಅಪಾಯ ವಾಗಿಲ್ಲ. ಐಸಿಸ್‌ ಉಗ್ರರ ಸುರಂಗಗಳು ನಾಶವಾಗಿದ್ದು, ಕನಿಷ್ಠ 36 ಮಂದಿ ಮೃತಪಟ್ಟಿದ್ದಾರೆ ಎಂದು ಅಫ್ಘಾನ್‌ ರಕ್ಷಣಾ ಸಚಿವಾಲಯ ತಿಳಿಸಿದೆ. ಅಫ್ಘಾನ್‌ ಅಧ್ಯಕ್ಷರ ನಿವಾಸವೂ ಪ್ರತಿಕ್ರಿಯಿಸಿದ್ದು, ನಾಗರಿಕರಿಗೆ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು ಎಂದಿದೆ.

ಅಮೆರಿಕ ಬಾಂಬ್‌ ಪ್ರಯೋಗಿಸಿದ ನಂಗರ್‌ಹಾರ್‌ ಪ್ರಾಂತ್ಯ ಪಾಕಿಸ್ಥಾನದೊಂದಿಗೆ ಗಡಿ ಹೊಂದಿದ್ದು ಐಸಿಸ್‌ ಉಗ್ರರ ಅಡಗುದಾಣವಾಗಿದೆ. ಸಿರಿಯಾ, ಇರಾಕ್‌ನಿಂದ ಬಂದ ಉಗ್ರರು ಇಲ್ಲಿ ನೆಲೆ ಕಾಣುತ್ತಿದ್ದಾರೆ. ಪಾಕ್‌, ಅಫ್ಘಾನ್‌ ತಾಲಿಬಾನ್‌, ಉಜ್ಬೇಕ್‌ ಉಗ್ರರು ಐಸಿಸ್‌ಗೆ ಸೇರ್ಪಡೆಯಾಗಿ ದ್ದಾರೆ. ಇವರ ಉಪಟಳ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಅಮೆರಿಕ ಇಲ್ಲಿ ವಾಯುದಾಳಿ ನಡೆಸುತ್ತಿದೆ.

ಟ್ರಂಪ್‌ ಪ್ರಶಂಸೆ: ಐಸಿಸ್‌ ಉಗ್ರರ ಮೇಲೆ ದಾಳಿ ನಡೆಸಿ ದ್ದಕ್ಕಾಗಿ ಅಮೆರಿಕ ವಾಯುಪಡೆಯನ್ನು ಟ್ರಂಪ್‌ ಅಭಿ ನಂದಿಸಿದ್ದಾರೆ. “ಬಾಂಬ್‌ ಬಳಸಲು ಅನುಮತಿ ನೀಡಿದ್ದು, ಕಾರ್ಯಾಚರಣೆ ಯಶಸ್ವಿಯಾಗಿದೆ’ ಎಂದಿದ್ದಾರೆ. ಆದರೆ ಈ ಘಟನೆ ಉತ್ತರ ಕೊರಿಯಾಕ್ಕೆ ಯಾವುದಾದರೂ ಸಂದೇಶ ನೀಡಲಿದೆಯೇ ಎಂಬುದನ್ನು ಹೇಳಲು ಅವರು ನಿರಾಕರಿಸಿದ್ದಾರೆ. ಇದೇ ವೇಳೆ ಬಾಂಬ್‌ ದಾಳಿ ಐಸಿಸ್‌ಗೆ ಸ್ಪಷ್ಟ ಸಂದೇಶವನ್ನು ರವಾನಿಸಿದೆ ಎಂದು ಅಮೆರಿಕದ ಸಂಸದರು ಹೇಳಿದ್ದಾರೆ.

ಬಾಂಬ್‌ ಉಗ್ರರನ್ನು ಹೇಗೆ ಸಾಯಿಸುತ್ತೆ ಗೊತ್ತಾ?
ಮದರ್‌ ಆಫ್ ಆಲ್‌ ಬಾಂಬ್‌ ಸಿಡಿದರೆ ಅಲ್ಲಿ ಪ್ರಳಯ ಗ್ಯಾರಂಟಿ. ಯುದ್ಧ ವಿಮಾನದಿಂದ ಇದನ್ನು ಕೆಳಗೆ ಹಾಕಿದಾಗ ಭೂಮಿಗೆ ಬೀಳುವ ಕೊಂಚ ಹೊತ್ತಿಗೆ ಮುನ್ನ ಸ್ಫೋಟಗೊಳ್ಳುತ್ತದೆ. ಆದರೆ 30 ಅಡಿಗಳ ಸುತ್ತ ಹಾಗೂ ಆಳದಲ್ಲಿ ಭಾರೀ ಬೆಂಕಿಯುಂಡೆಯನ್ನೇ ಸೃಷ್ಟಿಸುತ್ತದೆ. ಈ ಪ್ರದೇಶದಲ್ಲಿ ಇದ್ದವರು ತತ್‌ಕ್ಷಣವೇ ಬೆಂದು ಹೋಗುತ್ತಾರೆ. ಜತೆಗೆ ಸ್ಫೋಟವಾದ ಮಿಲಿಸೆಕೆಂಡ್‌ಗಳಲ್ಲೇ ಸುತ್ತ ಇರುವ ಎಲ್ಲ ಆಮ್ಲಜನಕವನ್ನು ಈ ಬಾಂಬ್‌ ಹೀರಿಕೊಳ್ಳುತ್ತದೆ. ಹೀಗಾಗಿ ಸುರಂಗದಲ್ಲಿದ್ದ ಐಸಿಸ್‌ ಉಗ್ರರು ಉಸಿರುಕಟ್ಟಿ, ಶ್ವಾಸಕೋಶಗಳು ಸ್ಫೋಟಗೊಂಡು ಅರೆ ಕ್ಷಣದಲ್ಲೇ ಸಾಯುತ್ತಾರೆ. ಜತೆಗೆ 32 ಕಿ.ಮೀ. ವಿಸ್ತಾರದಲ್ಲಿ ಸ್ಫೋಟದ ತೀವ್ರ ಆವರಿಸಿ, ಅಲ್ಲಿದ್ದ ಕಟ್ಟಡಗಳು, ಗಿಡ ಮರಗಳನ್ನು ನೆಲಸಮ ಮಾಡುವ ಶಕ್ತಿ ಇದಕ್ಕಿದೆ. ಸ್ಫೋಟದ ವೇಳೆ ಅಲ್ಲಿದ್ದವರೇನಾದರೂ ಬದುಕಿದರೆ ಜೀವನಪರ್ಯಂತ ಅಂಗವಿಕಲರಾಗಿಯೇ ಬದುಕಬೇಕಾಗುತ್ತದೆ.

Advertisement

ಉತ್ತರ ಕೊರಿಯಾ ವಿರುದ್ಧ ಯುದ್ಧ ?
ಉತ್ತರ ಕೊರಿಯಾ ಮತ್ತು ಅಮೆರಿಕದ ನಡುವಣ ವಿವಾದ ತೀವ್ರಗೊಳ್ಳುತ್ತಿರುವಂತೆ ಚೀನ ಕೂಡ ಎಚ್ಚರಿಕೆಯ ಸಂದೇಶ ರವಾನಿಸಿದೆ. ಯಾವುದೇ ಕ್ಷಣ ಸಂಘರ್ಷ ಸ್ಫೋಟ ಗೊಳ್ಳಬಹುದು ಎಂದು ಹೇಳಿದೆ. ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಟ್ರಂಪ್‌ ಉ. ಕೊರಿಯಾವನ್ನು ಸಮಸ್ಯೆ ಎಂದು ಬಣ್ಣಿಸಿದ್ದು, ಈ ಬಗ್ಗೆ ನೋಡಬೇಕಾಗುತ್ತದೆ ಎಂದಿದ್ದರು. ಜತೆಗೆ ಉ. ಕೊರಿಯಾಕ್ಕೆ ಅಮೆರಿಕ ಮೇಲಿನ ಹಗೆತನ ತೀವ್ರಗೊಂಡಿದ್ದು ಚೀನ ಎಚ್ಚರಿಕೆಗೆ ಕಾರಣ. ಅಮೆರಿಕವೇನಾದರೂ ನಮ್ಮನ್ನು ಪ್ರಚೋದಿಸಲು ಬಂದರೆ ಕನಿಕರವಿಲ್ಲದೆ ಪ್ರತಿಕ್ರಿಯಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಉತ್ತರ ಕೊರಿಯಾ ಕೂಡ ನೀಡಿದೆ.

ಕಾಸರಗೋಡಿನ ಯುವಕ ಸಾವು
ಇನ್ನೊಂದು ಪ್ರಕರಣದಲ್ಲಿ ಐಸಿಸ್‌ ಸೇರಿದ್ದ ಕೇರಳದ ಯುವಕ ಕಾಸರಗೋಡಿನ ಪಡನ್ನದ ನಿವಾಸಿ ಮುರ್ಷಿದ್‌ ಮುಹಮ್ಮದ್‌ ಅಮೆರಿಕ ದಾಳಿಯಲ್ಲಿ ಮೃತಪಟ್ಟಿದ್ದಾನೆ. ನಂಗರ್‌ಹಾರ್‌ ಪ್ರಾಂತ್ಯದಲ್ಲೇ ಅಮೆರಿಕ ಡ್ರೋನ್‌ ದಾಳಿ ನಡೆಸಿದ್ದು, ಅದರಲ್ಲಿ ಆತ ಮೃತಪಟ್ಟಿದ್ದಾಗಿ ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ನ ಸ್ಥಳೀಯ ಮುಖಂಡರೊಬ್ಬರು ತಿಳಿಸಿದ್ದಾರೆ. ಆತ ಮೃತಪಟ್ಟ ಬಗ್ಗೆ ಟೆಲಿಗ್ರಾಂ ಆ್ಯಪ್‌ನಲ್ಲಿ ಸಂದೇಶ ಬಂದಿದ್ದಾಗಿ ಅವರು ತಿಳಿಸಿದ್ದಾರೆ. ಆದಾಗ್ಯೂ ಮುರ್ಷಿದ್‌ ಅಮೆರಿಕ ನಡೆಸಿದ ಬಾಂಬ್‌ ದಾಳಿ ಯಲ್ಲಿ ಮೃತಪಟ್ಟಿದ್ದೇ, ಡ್ರೋನ್‌ ದಾಳಿಯಲ್ಲಿ ಮೃತ ಪಟ್ಟಿದ್ದೇ ಎಂಬುದು ಖಚಿತವಾಗಿಲ್ಲ. ಪೊಲೀಸರೂ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಈಗಾ ಗಲೇ ಕೇರಳದಿಂದ ನಾಪತ್ತೆಯಾಗಿ ಐಸಿಸ್‌ಗೆ ಸೇರ್ಪಡೆಯಾಗಿದ್ದಾರೆ ಎನ್ನಲಾದ 21 ಮಂದಿಯಲ್ಲಿ ಮುರ್ಷಿದ್‌ ಕೂಡ ಒಬ್ಬನಾಗಿದ್ದಾನೆ.

ಅಮೆರಿಕದ ಕ್ರಮ ಉಗ್ರರ ವಿರುದ್ಧವಲ್ಲ. ಅದು ನಮ್ಮ ದೇಶ ವನ್ನು ಬಾಂಬ್‌ ಪರೀಕ್ಷೆಯ ತಾಣ ವನ್ನಾಗಿಸುತ್ತಿದೆ. ಇದು ಖಂಡನಾರ್ಹ.
ಹಮೀದ್‌ ಕರ್ಜಾಯಿ, ಅಫ್ಘಾನ್‌ ಮಾಜಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next