ಬೆಳಗಾವಿ: ಜಿಲ್ಲೆಯಲ್ಲಿ ಶುಕ್ರವಾರ ಒಂದೇ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗಿದೆ.
ಒಂದೇ ದಿನ ಮಹಾರಾಷ್ಟ್ರದಿಂದ ಬೆಳಗಾವಿಗೆ ಆಗಮಿಸಿರುವವರಲ್ಲಿ 36 ಪ್ರಕರಣಗಳು ವರದಿಯಾಗುವುದರೊಂದಿಗೆ ಜಿಲ್ಲೆಯಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 260ಕ್ಕೆ ಏರಿದಂತಾಗಿದೆ.
ಮಹಾರಾಷ್ಟ್ರದಿಂದ ಬೆಳಗಾವಿ ಜಿಲ್ಲೆಗೆ ಬಂದು ಕ್ವಾರಂಟೈನ್ ಕೇಂದ್ರದಲ್ಲಿರುವವರಲ್ಲಿ ಹೆಚ್ಚಿನವರ ವರದಿಗಳು ಪಾಸಿಟಿವ್ ಬರುತ್ತಿವೆ. ಮುಂಬೈನಿಂದ ಬಂದಿರುವ ಇವರೆಲ್ಲರನ್ನೂ ಕ್ವಾರಂಟೈನ್ ಮಾಡಲಾಗಿತ್ತು.
ಇದೀಗ ಇವರ ಗಂಟಲು ಮಾದರಿಯ ಪರಿಕ್ಷಾ ವರದಿಗಳು ಹೆಚ್ಚೆಚ್ಚು ಬರುತ್ತಿದ್ದು ಇದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ ಮಾತ್ರವಲ್ಲದೇ ಬೆಳಗಾವಿ ಗ್ರಾಮೀಣ ಭಾಗಗಳಲ್ಲಿ ಹೆಚ್ಚೆಚ್ಚು ಪ್ರಕರಣಗಳು ಕಂಡು ಬರುತ್ತಿರುವುದೂ ಸಹ ಜಿಲ್ಲಾಡಳಿತದ ಆತಂಕಕ್ಕೆ ಕಾರಣವಾಗಿದೆ.
ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮವನ್ನು ಹಿಂಡಿ ಹಿಪ್ಪೆ ಮಾಡಿದ್ದ ಕೋವಿಡ್ ತಾಲೂಕಿನ ಅನೇಕ ಹಳ್ಳಿಗಳನ್ನು ಈಗ ಬೆಂಬಿಡದೇ ಕಾಡುತ್ತಿದೆ. ತಾಲೂಕಿನ ಅನೇಕ ಹಳ್ಳಿಗಳು ಕೋವಿಡ್ ಮಹಾಮಾರಿಯಿಂದ ನಲುಗುತ್ತಿವೆ. ಕೆಲವರನ್ನು ಕ್ವಾರಂಟೈನ್ ಮುಗಿಯುವ ಮುನ್ನವೇ ಮನೆಗೆ ಕಳುಹಿಸಿದ ಬಳಿಕ ಪಾಸಿಟಿವ್ ವರದಿ ಬಂದಿದ್ದರಿಂದ ಆತಂಕ ಹೆಚ್ಚಾಗಿದೆ.