ಬ್ರೆಜಿಲ್:ಜಗತ್ತಿನ ಮಹಾಸಾಗರ, ಸಮುದ್ರಗಳಲ್ಲಿ ಅಪರೂಪವಾಗಿ ಕಾಣಸಿಗುವ ದೈತ್ಯ ಜಾತಿಯ ತಿಮಿಂಗಿಲದ ಶವ ಅಮೆಜಾನ್ ಕಾಡಿನಲ್ಲಿ ಪತ್ತೆಯಾಗಿದ್ದು, ಇದು ಬರೋಬ್ಬರಿ 36 ಅಡಿ ಉದ್ದವಾಗಿದೆ. ಎಬಿಸಿ ನ್ಯೂಸ್ ಪ್ರಕಾರ, ದೈತ್ಯ ತಿಮಿಂಗಲ ಅಮೆಜಾನ್ ನದಿ ಹರಿಯುವ ಬ್ರೆಝಿಲ್ ದ್ವೀಪದ ಮಾರ್ಜಾವೋ ಎಂಬ ಪ್ರದೇಶದಲ್ಲಿ ಪತ್ತೆಯಾಗಿದೆ ಎಂದು ತಿಳಿಸಿದೆ.
ಮಾರ್ಜಾವೋ ದ್ವೀಪದ ಎನ್ ಜಿಒ ಅವರ ಪ್ರಕಾರ, ಈ ತಿಮಿಂಗಲ ಮೊದಲೇ ಸಾವನ್ನಪ್ಪಿದ್ದು, ಬೃಹತ್ ಅಲೆಗಳ ಹೊಡೆತಕ್ಕೆ ತೇಲಿಕೊಂಡು ಬಂದು ಇಲ್ಲಿ ಬಿದ್ದಿರಬೇಕೆಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಎನ್ ಜಿಒ ಸಾಮಾಜಿಕ ಜಾಲತಾಣದಲ್ಲಿ ಅಮೆಜಾನ್ ಕಾಡಿನಲ್ಲಿ ಪತ್ತೆಯಾದ ಚಿತ್ರವನ್ನು ಶೇರ್ ಮಾಡಿ, ಇದು ದೊಡ್ಡ ತಿಮಿಂಗಲವಲ್ಲ, ಒಂದು ವರ್ಷದ ಮರಿ ಎಂದು ವಿವರಿಸಿದೆ.
ಕಡಲ ತಜ್ಞ ರೇನಾಟಾ ಎಮಿನ್ ಪ್ರಕಾರ, ಇಷ್ಟು ದೊಡ್ಡ ದೈತ್ಯ ತಿಮಿಂಗಿಲ ಇಲ್ಲಿಗೆ ಹೇಗೆ ಬಂತು ಎಂಬುದು ಖಚಿತವಾಗಿ ತಿಳಿದಿಲ್ಲ. ಈ ದೈತ್ಯ ತಿಮಿಂಗಿಲದ ಶವ ಅಲೆಗಳ ಹೊಡೆತಕ್ಕೆ ತೇಲಿ ಬಂದಿರಬಹುದು. ಇಲ್ಲವೇ ಯಾರೋ ಇದನ್ನು ಹಿಡಿದು ನಂತರ ದ್ವೀಪ ಪ್ರದೇಶದತ್ತ ಎಸೆದಿರಬಹುದು ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಏನಿದು ಹಂಪ್ ಬ್ಯಾಕ್ ವೇಲ್(ದೈತ್ಯ ತಿಮಿಂಗಲ):
ಜಗತ್ತಿನ ಮಹಾಸಾಗರ, ಸಮುದ್ರದಾಳದಲ್ಲಿ ಇರುವ ಒಂದು ಜಾತಿಯ ದೈತ್ಯ ತಿಮಿಂಗಿಲ ಇದಾಗಿದ್ದು, 12ರಿಂದ 16 ಮೀಟರ್ ಉದ್ದವಿರುತ್ತದೆ. ಅಂದರೆ ಸುಮಾರು 40ರಿಂದ 45 ಅಡಿ ಉದ್ದವಿರುತ್ತದೆ. 25ರಿಂದ 30 ಟನ್ ತೂಕವಿರುತ್ತದೆ. ಇದರಲ್ಲಿ ಹೆಣ್ಣು ತಿಮಿಂಗಲ 15ರಿಂದ 16 ಮೀಟರ್ ಉದ್ದವಾಗಿರುತ್ತದೆ, ಗಂಡು ತಿಮಿಂಗಲ 13ರಿಂದ 14 ಮೀಟರ್ ಉದ್ದವಿರುತ್ತದೆ. ಇದರ ನವಜಾತ ಮರಿಯ ಉದ್ದ ಕೂಡಾ ತಾಯಿಯ ತಲೆಯಷ್ಟೇ ಉದ್ದವಾಗಿರುತ್ತದೆ.