ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮಹಿಳಾ ಮತದಾರರನ್ನು ಮತಗಟ್ಟೆಗಳತ್ತ ಸೆಳೆದು ಮತದಾನ ಪ್ರಮಾಣ ಹೆಚ್ಚಳ ಮಾಡುವ ಸಂಬಂಧ ಚುನಾವಣಾ ಆಯೋಗ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ 36 ಸಖೀ ಮತಗಟ್ಟೆ ಕೇಂದ್ರಗಳನ್ನು ತೆರೆಯಲಿದೆ.
ಯಲಹಂಕ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಮಹದೇವಪುರ, ಬೆಂಗಳೂರು ದಕ್ಷಿಣ ಮತ್ತು ಅನೇಕಲ್ ತಾಲೂಕುಗಳು ನಗರ ಜಿಲ್ಲಾಡಳಿತ ವ್ಯಾಪ್ತಿಗೆ ಬರುತ್ತವೆ. ಆಯೋಗದ ಸೂಚನೆಯಂತೆ, ಈ ಕ್ಷೇತ್ರಗಳಲ್ಲಿ ಸಖೀ ಮತಗಟ್ಟೆ ಕೇಂದ್ರಗಳನ್ನು ತೆರೆಯಲು ಎಲ್ಲಾ ರೀತಿಯ ಸಿದ್ಧತೆ ನಡೆದಿದ್ದು, ಬಿಬಿಎಂಪಿ ಇವುಗಳ ನಿರ್ವಹಣೆ ಹೊಣೆ ವಹಿಸಿಕೊಂಡಿದೆ.
ಮಹಿಳಾ ಮತದಾರರು ಹೆಚ್ಚಿನ ಸಂಂಖ್ಯೆಯಲ್ಲಿರುವ ಮತಗಟ್ಟೆಗಳಲ್ಲಿ ಚುನಾವಣಾ ಆಯೋಗ ಸಖೀ ಕೇಂದ್ರಗಳನ್ನು ತೆರೆಯಲಿದೆ. ಮಹಿಳೆಯರು ಭಯ, ಸಂಕೋಚವಿಲ್ಲದೆ ಬಂದು ತಮ್ಮ ಹಕ್ಕು ಚಲಾಯಿಸಲು ಪೂರಕ ವಾತಾವರಣ ಈ ಮತಗಟ್ಟೆಯಲ್ಲಿ ಇರಲಿದೆ.
ಅತಿ ಹೆಚ್ಚು ಮಹಿಳಾ ಮತದಾರರು ಇರುವ ಹಾಗೂ ಕಡಿಮೆ ಮತದಾನ ಆಗುವ ಪ್ರದೇಶಗಳನ್ನು ಗುರುತಿಸಿ ಸಖೀ ಮತಗಟ್ಟೆಗಳನ್ನು ತೆರೆಯಲಾಗುತ್ತದೆ. ಇಲ್ಲಿ ಮತದಾರರ ಸಹಿ ಪಡೆಯುವ ಅಧಿಕಾರಿಯಿಂದ ಹಿಡಿದು ಭದ್ರತಾ ಸಿಬ್ಬಂದಿವರೆಗೂ ಮಹಿಳಾ ಅಧಿಕಾರಿಗಳೇ ಕಾರ್ಯನಿರ್ವಹಿಸುತ್ತಾರೆ.
ಎಲ್ಲೆಲ್ಲಿ ಸಖೀ ಬೂತ್‌ಗಳು: ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 10 ಸಖೀ ಮತಗಟ್ಟೆ ಕೇಂದ್ರಗಳನ್ನು ತೆರೆಯಲಾಗುವುದು. ಇದರಲ್ಲಿ ಬೆಂಗಳೂರು ಉತ್ತರ ತಾಲೂಕು ವ್ಯಾಪ್ತಿಯ 5 ಮತ್ತು ದಕ್ಷಿಣ ತಾಲೂಕು ವ್ಯಾಪ್ತಿಯ 5 ಮತಗಟ್ಟೆಗಳು ಸೇರಿವೆ.
ಹಾಗೇ, ಯಲಹಂಕದಲ್ಲಿ 2, ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 5 ಸಖೀ ಮತಗಟ್ಟೆ ಕೇಂದ್ರಗಳನ್ನು ತೆರೆಯಲಾಗುತ್ತದೆ. ದಾಸರಹಳ್ಳಿ ಮತ್ತು ಮಹಾದೇವಪುರ ಮತ್ತು ಬೆಂಗಳೂರು ದಕ್ಷಿಣ ತಾಲೂಕು ವ್ಯಾಪ್ತಿಯಲ್ಲಿ ತಲಾ 4 ಮತ್ತು ಅನೇಕಲ್ ತಾಲೂಕಿನಲ್ಲಿ 7 ಸಖೀ ಮತಗಟ್ಟೆ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಬೆಂಗಳೂರು ನಗರ ಜಿ.ಪಂ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಬಾರಿ ಪಿಂಕ್ ಬಣ್ಣದ ಬಳಕೆಯಿಲ್ಲ ಕಳೆದ ವಿಧಾನಸಭಾ ಚುನಾವಣೆ ವೇಳೆ ಮಹಿಳಾ ಮತದಾರರಿಗಾಗಿಯೇ ಆಯ್ದ ಸ್ಥಳಗಳಲ್ಲಿ ಪಿಂಕ್ ಬೂತ್‌ಗಳನ್ನು ಸ್ಥಾಪಿಸಲಾಗಿತ್ತು. ಮತಗಟ್ಟೆ ಒಳಗಿನ ಮ್ಯಾಟ್, ಅಲ್ಲಿರುವ ಬಟ್ಟೆಗಳು, ಟೇಬಲ… ಕ್ಲಾತ್, ಕುರ್ಚಿಗಳು ಎಲ್ಲವೂ ಪಿಂಕ್ ಬಣ್ಣದಿಂದ ಕೂಡಿದ್ದವು. ಅಲ್ಲದೆ ಅಲಂಕಾರಕ್ಕಾಗಿ ಕಟ್ಟಲಾಗಿದ್ದ ಬಲೂನ್‌ಗಳು ಕೂಡ ಗುಲಾಬಿ ಬಣ್ಣವುಗಳಾಗಿದ್ದವು. ಜತೆಗೆ ಮತಗಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಅಧಿಕಾರಿಗಳು ಗುಲಾಬಿ ಬಣ್ಣದ ಉಡುಗೆಯಲ್ಲಿ ಕಂಗೊಳಿಸುತ್ತಿದ್ದರು. ಆದರೆ ಚುನಾವಣಾ ಆಯೋಗ ನಾನಾ ಕಾರಣಗಳಿಂದಾಗಿ ಈ ಬಾರಿ ಸಖೀ ಬೂತ್‌ಗಳಲ್ಲಿ ಪಿಂಕ್ ಬಣ್ಣಬಳಕೆ ಮಾಡದೇ ಇರಲು ತೀರ್ಮಾನಿಸಿದೆ. ಪಿಂಕ್ ಬಳಕೆ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ ಅನೇಕ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಬಣ್ಣ ಬಳಕೆಯಿಂದ ಹಿಂದೆ ಸರಿಯಲಾಗಿದೆ. ಆದರೆ, ಪಿಂಕ್ ಬದಲು ವಿವಿಧ ಬಣ್ಣಗಳಿಂದ ಸಖೀ ಬೂತ್‌ಗೆ ಮೆರುಗು ನೀಡ ಬಹುದಾಗಿದೆ ಎಂದು ಬೆಂಗಳೂರು ನಗರ ಜಿ.ಪಂ ನೋಡೆಲ್ ಅಧಿಕಾರಿ ಹೇಳಿದ್ದಾರೆ.
ಮಹಿಳೆಯರನ್ನು ಮತಗಟ್ಟೆಗಳಿಗೆ ಸೆಳೆಯಲು ಬೆಂಗಳೂರು ನಗರ ಜಿಲ್ಲಾಡಳಿತದ ವ್ಯಾಪ್ತಿಯಲ್ಲಿ 36 ಸಖೀ ಕೇಂದ್ರಗಳನ್ನು ಚುನಾವಣಾ ಆಯೋಗ ತೆರೆಯಲಿದೆ. ಮಹಿಳೆಯರು ನಿರ್ಭೀತಿಯಿಂದ ಮತದಾನ ಮಾಡಲಿ ಎಂಬುವುದು ಇದರ ಉದ್ದೇಶ.
● ಎಂ.ಎಸ್.ಅರ್ಚನಾ, ಬೆಂಗಳೂರು ನಗರ ಜಿ.ಪಂ ಸಿಇಒ
● ದೇವೇಶ ಸೂರಗುಪ್ಪ