ಬೆಳಗಾವಿ: ರಾಜ್ಯ ಸರಕಾರ 3,574 ಕೋಟಿ 76 ಲಕ್ಷ ರೂ.ಗಾತ್ರದ ಪೂರಕ ಅಂದಾಜು ಮಂಡನೆ ಮಾಡಿದೆ. ಶುಕ್ರವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರವಾಗಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಪೂರಕ ಅಂದಾಜುಗಳ ಪಟ್ಟಿ ಮಂಡಿಸಿದರು.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಮೇಲೆ ಘೋಷಿಸಿರುವ ಅಮೃತ ಯೋಜನೆಗಳಿಗೆ ಅನುದಾನ ನೀಡಲು 75 ಕೋಟಿ ರೂ., ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದ ನಿಯೋಗ ದಾವೋಸ್ ಪ್ರವಾಸಕ್ಕೆ ತೆರಳಿದ್ದಕ್ಕೆ 4 ಕೋ. ರೂ. ಖರ್ಚು ಮಾಡಲಾಗಿದೆ.
ಆರೋಗ್ಯ ಕ್ಷೇತ್ರದಲ್ಲಿ ಬಾಕಿ ಇರುವ ವೇತನ, ಬಿಲ್ ನೀಡಿಕೆಗಾಗಿ ಹೆಚ್ಚಿನ ಮೊತ್ತ ಮೀಸಲಿಡಲಾಗಿದ್ದು, ಆರೋಗ್ಯ ಇಲಾಖೆಯ ವಿವಿಧ ವೆಚ್ಚಗಳಿಗಾಗಿ 217 ಕೋಟಿ ರೂ. ನಿಗದಿ ಮಾಡಲಾಗಿದೆ.
ಹೊಸದಾಗಿ ರಚನೆಯಾಗಿರುವ ವಿಜಯನಗರ ಜಿಲ್ಲೆಯ ಜಿಲ್ಲಾ ಕಚೇರಿಗಳಿಗೆ 3 ಕೋಟಿ 73 ಲಕ್ಷ ರೂ., ಅಬಕಾರಿ ಇಲಾಖೆಯ ಉಪ ನಿರೀಕ್ಷಕರಿಗೆ 316 ಬೈಕ್ ಖರೀದಿಗಾಗಿ 2 ಕೋಟಿ 41 ಲಕ್ಷ ರೂ., ವಿಧಾನಪರಿಷತ್ ಚುನಾವಣೆಗಾಗಿ 50 ಲಕ್ಷ ರೂ., ಮಹಾದಾಯಿ ಕ್ಲೇಮ್ ಕಮಿಷನ್ ಕಚೇರಿಗೆ 33 ಲಕ್ಷ ರೂ., ಡಿಜೆ ಹಳ್ಳಿ, ಕೆ.ಜೆ ಹಳ್ಳಿ ಕ್ಲೇಮ್ ಕಮೀಷನ್ ಕಚೇರಿಗಾಗಿ 50 ಲಕ್ಷ ರೂ., ಕಾರಾಗೃಹಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ 5 ಕೋಟಿ 55 ಲಕ್ಷ ರೂ., ವಕ್ಫ್ ಆಸ್ತಿಗಳ ವಿಶೇಷ ಸರ್ವೇ ಮಾಡಲು 50 ಲಕ್ಷ ರೂ., ಮಿನಿ ಒಲಿಂಪಿಕ್ ಕ್ರೀಡಾಕೂಟ ನಡೆಸಲು 2 ಕೋಟಿ 50 ಲಕ್ಷ ರೂ., ಜಲಸಂಪನ್ಮೂಲ ಇಲಾಖೆಯ ಪಶ್ಚಿಮವಾಹಿನಿ ಯೋಜನೆ ಬಿಲ್ ಪಾವತಿಗಾಗಿ 200 ಕೋಟಿ ರೂ., ಕೋವಿಡ್ ವೇಳೆ ವಿದ್ಯುತ್ ಬಿಲ್ ಮನ್ನಾ ಮಾಡಿದ್ದಕ್ಕಾಗಿ ಇಂಧನ ಇಲಾಖೆಗೆ 68 ಕೋಟಿ ರೂ., ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 100 ಕೋ. ರೂ ನಿಗದಿ., ಮುಖ್ಯ ಸಚೇತಕ ಅಜಯ ಸಿಂಗ್ ವೈದ್ಯಕಿಯ ವೆಚ್ಚ ಮರುಪಾವತಿಗಾಗಿ ಹೆಚ್ಚುವರಿಯಾಗಿ 2 ಲಕ್ಷ ರೂ., ಸಭಾಪತಿ ಬಸವರಾಜ ಹೊರಟ್ಟಿ ಪ್ರಯಾಣ ವೆಚ್ಚಕ್ಕೆ ಹೆಚ್ಚುವರಿಯಾಗಿ 20 ಲಕ್ಷ ರೂ. ನೀಡಲಾಗಿದೆ ಎಂದು ಪೂರಕ ಅಂದಾಜಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ:ನೆರೆ ಪರಿಹಾರಕ್ಕೆ ಕೇಂದ್ರದಿಂದ ಹೆಚ್ಚು ಹಣ ಬಿಡುಗಡೆ ಮಾಡಿಸಿ : ಎಸ್ ಆರ್ ಪಾಟೀಲ್ ಆಗ್ರಹ
ಎರಡನೇ ಪೂರಕ ಅಂದಾಜು
ಬಜೆಟ್‌ನಲ್ಲಿ ಅನುಮೋದನೆ ಪಡೆದಿದ್ದಕ್ಕಿಂತ 10,265.33 ಕೋಟಿ ರೂ. ಹೆಚ್ಚುವರಿ ವೆಚ್ಚ ಮಾಡಲು ಇದೇ ವರ್ಷದ ಸೆಪ್ಟಂಬರ್‌ನಲ್ಲಿ ಸದನದ ಒಪ್ಪಿಗೆ ಪಡೆಯಲಾಗಿತ್ತು. ಈಗ ಮತ್ತೆ 3,574.67 ಕೋಟಿ ರೂ. ವೆಚ್ಚದ ಎರಡನೇ ಪೂರಕ ಅಂದಾಜು ಮಂಡಿಸಲಾಗಿದೆ.