Advertisement

35,487 ಜನರ ಕೆಲಸಕ್ಕೆ 9048 ಕೋಟಿ ಹೂಡಿಕೆ; ಆರು ಉದ್ಯಮಗಳಿಗೆ ಒಪ್ಪಿಗೆ

03:45 AM Feb 12, 2017 | Team Udayavani |

ಬೆಂಗಳೂರು: ರಾಜ್ಯದಲ್ಲಿ 9048.39 ಕೋಟಿ ರೂ. ಬಂಡವಾಳ ಹೂಡಿಕೆಯ ಆರು ಹೊಸ ಉದ್ಯಮಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿ ಒಪ್ಪಿಗೆ ನೀಡಿದೆ.

Advertisement

ಶುಕ್ರವಾರ ಸಂಜೆ ನಡೆದ ಸಭೆಯಲ್ಲಿ ಈ ಅನುಮೋದನೆ ನೀಡಲಾಗಿದ್ದು, ಆರು ಉದ್ಯಮಗಳು ಬೆಂಗಳೂರು ನಗರ, ಗ್ರಾಮಾಂತರ ಮತ್ತು ಬೆಳಗಾವಿಯಲ್ಲಿ ಹೂಡಿಕೆ ಮಾಡಲಿವೆ. ಒಟ್ಟು 35,487 ಮಂದಿಗೆ ಇದರಿಂದ ಉದ್ಯೋಗಾವಕಾಶ ಕಲ್ಪಿಸಲಾಗುತ್ತದೆ.

ವಿಶೇಷವೆಂದರೆ ಒಟ್ಟು ಹೂಡಿಕೆಯಾಗುವ 9048.39 ಕೋಟಿ ರೂ. ಪೈಕಿ ಐಟಿ ಮತ್ತು ಐಟಿಇಎಸ್‌ ಕ್ಷೇತಗಳಲ್ಲಿ 6,569 ಕೋಟಿ ರೂ. ಹೂಡಿಕೆಯಾಗಲಿದ್ದು, 28,947 ಉದ್ಯೋಗಗಳು ಸೃಷ್ಟಿಯಾಗಲಿವೆ. ಮೆ. ಒರಾಕಲ್‌ ಇಂಡಿಯಾ ಪ್ರೈ.ಲಿ. ಬೆಂಗಳೂರು ನಗರ ಜಿಲ್ಲೆಯ ಕಾಡುಬೀಸನಹಳ್ಳಿಯಲ್ಲಿ 2438 ಕೋಟಿ ರೂ. ಹೂಡಿಕೆ ಮಾಡಲಿದ್ದು, 9697 ಮಂದಿಗೆ ಉದ್ಯೋಗ ಕಲ್ಪಿಸಲಿದೆ. ಇದಕ್ಕಾಗಿ 13.29 ಎಕರೆ ಭೂಮಿ ಮಂಜೂರು ಮಾಡಲಾಗಿದೆ.

ಮೆ.ಬ್ಲೂಸ್ಟೋನ್‌ ಟೆಕ್‌ಪಾರ್ಕ್‌ ಎಲ್‌ಎಲ್‌ಸಿ ಕಂಪನಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಅಪ್ಪಾಜಿಪುರ, ಸಮೇತನಹಳ್ಳಿ ಮತ್ತು ಕೊರಲೂರು ಗ್ರಾಮದಲ್ಲಿ ಇಂಟಿಗ್ರೇಟ್‌ ಐಟಿ ಪಾರ್ಕ್‌ ಸ್ಥಾಪನೆಗೆ 55 ಎಕರೆ ಭೂಮಿ ಮಂಜೂರು ಮಾಡಲಾಗಿದೆ. ಕಂಪನಿಯು ಅಲ್ಲಿ 2051.39 ಕೋಟಿ ರೂ. ಹೂಡಿಕೆ ಮಾಡಲು ಒಪ್ಪಿಗೆ ನೀಡಿದ್ದು, ಇದರಿಂದ 750 ಮಂದಿಗೆ ಉದ್ಯೋಗಾವಕಾಶ ಕಲ್ಪಿಸಲಾಗಿದೆ.

ಮೆ.ಎಲ್‌ ಅಂಡ್‌ ಟಿ ಕನ್‌ಸ್ಟ್ರಕ್ಷನ್‌ ಎಕ್ಯೂಪ್‌ಮೆಂಟ್‌ ಲಿಮಿಟೆಡ್‌ 1280 ಕೋಟಿ ರೂ. ಮತ್ತು 800 ಕೋಟಿ ರೂ. ವೆಚ್ಚದಲ್ಲಿ 18000 ಉದ್ಯೋಗಾವಕಾಶ ಕಲ್ಪಿಸುವ ಎರಡು ಐಟಿ, ಐಟಿಇಎಸ್‌ ಎಸ್‌ಇಝೆಡ್‌ ಸ್ಥಾಪನೆಗೆ ಮುಂದಾಗಿದ್ದು, ಅದಕ್ಕಾಗಿ ಬೆಂಗಳೂರು ನಗರದ ಬ್ಯಾಟರಾಯನಪುರದಲ್ಲಿ 12.22 ಎಕರೆ ಹಾಗೂ 5.8 ಎಕರೆ ಭೂಮಿ ಮಂಜೂರು ಮಾಡಲಾಗಿದೆ.

Advertisement

ಮುದ್ದೇನಹಳ್ಳಿಯಲ್ಲಿ ಪ್ರವಾಸೋದ್ಯಮ ಮತ್ತು ಕ್ರೀಡಾಹಬ್‌: ಭಾರತರತ್ನ ಸರ್‌ ಎಂ.ವಿಶ್ವೇಶ್ವರಯ್ಯ ಅವರ ಹುಟ್ಟೂರು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ಮುದ್ದೇನಹಳ್ಳಿಯಲ್ಲಿ ಮೆ.ಕಾರ್ನರ್‌ ಸ್ಟೋನ್‌ ಪ್ರಾಪರ್ಟಿ ಡೆವಲಪರ್ಸ್‌ ಸಂಸ್ಥೆ 1330 ಕೋಟಿ ರೂ. ವೆಚ್ಚದಲ್ಲಿ 5540 ಮಂದಿಗೆ ಉದ್ಯೋಗ ಕಲ್ಪಿಸುವ ಸಮಗ್ರ ಮನರಂಜನಾ ಪಾರ್ಕ್‌, ಪ್ರವಾಸೋದ್ಯಮ ಮತ್ತು ಕ್ರೀಡಾ ಹಬ್‌ ಸ್ಥಾಪನೆಗೆ ಒಪ್ಪಿಗೆ ನೀಡಲಾಗಿದ್ದು, ಅದಕ್ಕಾಗಿ 300 ಎಕರೆ ಜಮೀನು ಮಂಜೂರು ಮಾಡಲಾಗಿದೆ.

ಅದೇರೀತಿ ಮೆ.ದೇವಿ ಸಿಟಿ ಇಂಡಸ್ಟ್ರಿಯಲ್‌ ಪಾರ್ಕ್‌ ಸಂಸ್ಥೆಯು 1149 ಕೋಟಿ ರೂ. ವೆಚ್ಚದಲ್ಲಿ ಒಂದು ಸಾವಿರ ಮಂದಿಗೆ ಉದ್ಯೋಗಾವಕಾಶ ಕಲ್ಪಿಸುವ ಹೈಟೆಕ್‌ ಇಂಡಸ್ಟ್ರಿಯಲ್‌ ಪಾರ್ಕ್‌ ನಿರ್ಮಾಣಕ್ಕೆ ಒಪ್ಪಿಗೆ ನೀಡಿರುವ ಉನ್ನತ ಮಟ್ಟದ ಸಮಿತಿ, ಅದಕ್ಕಾಗಿ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕು ಯಮಕನಮರಡಿ ಹೋಬಳಿಯ ವಂಟ್‌ಮುರಿ ಗ್ರಾಮದಲ್ಲಿ 1054 ಎಕರೆ ಭೂಮಿ ಒದಗಿಸಲಾಗಿದೆ.

ಸಭೆಯಲ್ಲಿ ಕೈಗಾರಿಕಾ ಸಚಿವ ಆರ್‌.ವಿ.ದೇಶಪಾಂಡೆ, ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಪ್ರವಾಸೋದ್ಯಮ ಸಚಿವ ಪ್ರಿಯಾಂಕ್‌ ಖರ್ಗೆ, ಕೈಗಾರಿಕಾ ಇಲಾಖೆ ಹಿರಿಯ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next